ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ: ಪರಿಸರ ನಿಯಮಗಳು ಬದಲು?

ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ 2020 ಪ್ರಕಟಿಸಿದ ಕೇಂದ್ರ ಸರ್ಕಾರ
Last Updated 7 ಜುಲೈ 2020, 20:56 IST
ಅಕ್ಷರ ಗಾತ್ರ

ಬೆಂಗಳೂರು:ಅಪಾಯಕಾರಿ ತ್ಯಾಜ್ಯಗಳ ಮರುಬಳಕೆ ಘಟಕಗಳು ಮತ್ತು ಕೆಲವು ಸ್ವರೂಪದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಆರಂಭಕ್ಕೆ ಮುನ್ನವೇ ಪರಿಸರ ಸಂರಕ್ಷಣಾ ನಿಯಮಗಳ ಅಡಿ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡುವ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಸರ್ಕಾರವು ಮೇ ತಿಂಗಳಿನಲ್ಲಿಯೇ ಹೊರಡಿಸಿದೆ.

ಇದಕ್ಕಾಗಿ ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧಿಸೂಚನೆ–2006’ರ ಬದಲಿಗೆ, ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ–2020’ ಅನ್ನು ಸರ್ಕಾರ ಸಿದ್ಧಪಡಿಸಿದೆ.ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು/ಕೈಗಾರಿಕೆಗಳು/ರಕ್ಷಣಾ ಯೋಜನೆಗಳ ಅನುಷ್ಠಾನದಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಅಧ್ಯಯನ ಮತ್ತು ವಿಶ್ಲೇಷಣೆಗೆ 2006ರ ಅಧಿಸೂಚನೆ ಅನುವು ಮಾಡಿಕೊಡುತ್ತದೆ. 2006ರ ಅಧಿಸೂಚನೆಯಲ್ಲಿ ಇರುವ ನಿಯಮಗಳಲ್ಲಿ ಕೆಲವನ್ನು ಬದಲಾವಣೆ ಮಾಡಿ, 2020ರ ಕರಡು ಅಧಿಸೂಚನೆಯನ್ನು ರೂಪಿಸಲಾಗಿದೆ.

ಕರಡು ಅಧಿಸೂಚನೆಯಲ್ಲಿ, 40 ಸ್ವರೂಪದ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸುವುದಕ್ಕೂ ಮುನ್ನ ‘ಪರಿಸರ ಅನುಮತಿ’ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಇವುಗಳಲ್ಲಿ ಕುಂಬಾರಿಕೆ, ಗುಡಿ ಕೈಗಾರಿಕೆಗಳೂ ಸೇರಿವೆ. ಸೌರಶಕ್ತಿ ಪಾರ್ಕ್, 500 ಹೆಕ್ಟೇರ್‌ ವಿಸ್ತೀರ್ಣದ ಕೈಗಾರಿಕಾ ಎಸ್ಟೇಟ್‌, ವಿವಿಧ ಸ್ವರೂಪದ ಕಾರ್ಖಾನೆಗಳಿಗೂ ಈ ವಿನಾಯಿತಿಯನ್ನು ವಿಸ್ತರಿಸಲಾಗಿದೆ.

ಕರಡು ಅಧಿಸೂಚನೆ ಜಾರಿಗೆ ಬಂದರೆ, ‘ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳ ನಿಯಮ–2016’ರ ಅಡಿ ನೋಂದಣಿ ಆಗುವ ಎಲ್ಲಾ ಮರುಬಳಕೆ ಘಟಕಗಳಿಗೆ, ಕಾರ್ಯಾರಂಭಕ್ಕೆ ಮುನ್ನವೇ ‘ಪರಿಸರ ಅನುಮತಿ’ ಪಡೆಯುವುದರಿಂದ ವಿನಾಯಿತಿ ದೊರೆಯಲಿದೆ. ಇದರಲ್ಲಿ ಸತು, ತಾಮ್ರ, ಸೀಸ, ಆರ್ಸೆನಿಕ್, ವ್ಯಾಂಡೇನಿಯಮ್ ಮತ್ತು ಕೋಬಾಲ್ಟ್‌ ತ್ಯಾಜ್ಯಗಳ ಮರುಬಳಕೆ ಘಟಕಗಳೂ ಸೇರಿವೆ. ಲೆಡ್‌ ಆ್ಯಸಿಡ್ ಬ್ಯಾಟರಿಗಳ ಮರುಬಳಕೆ ಘಟಕಕ್ಕೂ ವಿನಾಯಿತಿ ಸಿಗಲಿದೆ. ಈ ಎಲ್ಲಾ ರಾಸಾಯನಿಕ ವಸ್ತುಗಳು ಅತ್ಯಂತ ಅಪಾಯಕಾರಿ ಎಂದು‘ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳ ನಿಯಮ–2016’ರಲ್ಲಿ ಉಲ್ಲೇಖೀಸಲಾಗಿದೆ.

ವೇಸ್ಟ್ ಹೀಟ್ ರಿಕವರಿ ಬಾಯ್ಲರ್‌ ತಂತ್ರಜ್ಞಾನದ ಆಧಾರದಲ್ಲಿ ಕೆಲಸ ಮಾಡುವ ಉಷ್ಣ ವಿದ್ಯುತ್ ಸ್ಥಾವರಗಳನ್ನು ಆರಂಭಿಸುವುದಕ್ಕೂ ಮುನ್ನ ‘ಪರಿಸರ ಅನುಮತಿ’ ಪಡೆಯುವ ಅವಶ್ಯಕತೆ ಇಲ್ಲ ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ.ಬಂಕರ್‌ಗಳು ಇಲ್ಲದ, ಇಂಧನ ಭರ್ತಿ ಸೌಲಭ್ಯ ಇಲ್ಲದ ಮತ್ತು ವಾಣಿಜ್ಯೇತರ ವಿಮಾನ ನಿಲ್ದಾಣಗಳನ್ನು ಆರಂಭಿಸುವುದಕ್ಕೂ ಮುನ್ನ ‘ಪರಿಸರ ಅನುಮತಿ’ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.

ಪರಿಸರ ಸಂರಕ್ಷಣಾ ನಿಯಮಗಳಿಗೆ ಅನುಗುಣವಾಗಿದೆ ಎಂಬ ಅನುಮತಿ ಪಡೆಯದೇ ಆರಂಭಿಸಲಾಗುವ ಯೋಜನೆಗಳಿಂದ ಪರಿಸರಕ್ಕೆ ಹಾನಿಯಾದರೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ? ದಂಡ ವಿಧಿಸಲಾಗುತ್ತದೆಯೇ? ಯೋಜನೆಯನ್ನು ರದ್ದುಪಡಿಸಲಾಗುತ್ತದೆಯೇ ಎಂಬುದನ್ನು ಕರಡು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿಲ್ಲ.

ಆಕ್ಷೇಪ: ಪ್ರಸ್ತಾವಿತ ಅಧಿಸೂಚನೆಯ ವಿಚಾರದಲ್ಲಿ ಮುಂದುವರಿಯಬಾರದು ಎಂದು ಕಾಂಗ್ರೆಸ್‌ ಮುಖಂಡ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಂಸತ್‌ ಸ್ಥಾಯಿ ಸಮಿತಿಯ ಅಧ್ಯಕ್ಷ ಜೈರಾಂ ರಮೇಶ್‌ ಕೋರಿದ್ದಾರೆ. ಪ‍ರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಬರೆದಿದ್ದಾರೆ. ಅಧಿಸೂಚನೆಯ ವಿಚಾರದಲ್ಲಿ ಸಮಾಲೋಚನೆ ಮತ್ತು ಪ್ರತಿಕ್ರಿಯೆ ಪ‍ಡೆಯುವ ಅವಧಿಯನ್ನಾದರೂ ವಿಸ್ತರಿಸಬೇಕು ಎಂದು ಈ ಪತ್ರದಲ್ಲಿ ವಿನಂತಿಸಿದ್ದಾರೆ.

ಪ್ರಮುಖ ಬದಲಾವಣೆಗಳು

* ಯಾವುದೇ ಯೋಜನೆಯಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣಾ ವರದಿಗೆ ಸಾರ್ವಜನಿಕ ಅಭಿಪ್ರಾಯವನ್ನು ಸಲ್ಲಿಸಲು ಇದ್ದ ಕಾಲಾವಕಾಶವನ್ನು 30 ದಿನಗಳಿಂದ 20 ದಿನಗಳಿಗೆ ಇಳಿಸಲಾಗಿದೆ

* ಕೆಲವು ಸ್ವರೂಪದ ಯೋಜನೆಗಳಿಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆಯ ಮೇಲುಸ್ತುವಾರಿಯನ್ನು ಕೆಳ ಹಂತದ ಅಧಿಕಾರಿಗಳಿಗೆ ವಹಿಸಲು ಅವಕಾಶ ನೀಡಲಾಗಿದೆ. ಈಗ ಜಿಲ್ಲಾಧಿಕಾರಿ ಅಥವಾ ಅವರ ಪ್ರತಿನಿಧಿ (ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಶ್ರೇಣಿಯ ಅಧಿಕಾರಿ) ಮಾತ್ರ ಮೇಲುಸ್ತುವಾರಿ ವಹಿಸಬಹುದು

* ಸಾರ್ವಜನಿಕ ಅಭಿಪ್ರಾಯ ವರದಿಯನ್ನು, ಸಂಗ್ರಹ ಪ್ರಕ್ರಿಯೆ ಮುಗಿದ ಐದೇ ದಿನದಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಸಲ್ಲಿಸಬೇಕು. 2006ರ ಅಧಿಸೂಚನೆಯಲ್ಲಿ ಈ ಅವಧಿ ಎಂಟು ದಿನ

* ರಾಷ್ಟ್ರೀಯ ಭದ್ರತೆ/ಯುದ್ಧತಂತ್ರದ ಭಾಗ ಎಂದು ಕೇಂದ್ರ ಸರ್ಕಾರ ಪರಿಗಣಿಸುವ ಯೋಜನೆಗಳಿಗೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವಂತಿಲ್ಲ. 2006ರ ಅಧಿಸೂಚನೆಯಲ್ಲಿ ಇದಕ್ಕೆ ಅವಕಾಶವಿದೆ

*ಪರಿಸರ ಅನುಮತಿಯಲ್ಲಿ ಸೂಚಿಸಲಾದ ನಿಬಂಧನೆಗಳನ್ನು ಪಾಲಿಸಲಾಗುತ್ತಿದೆಯೇ ಇಲ್ಲವೇ ಎಂಬುದರ ಸಂಬಂಧ ಯೋಜನೆಯ ನಿರ್ವಹಣ ತಂಡವು ವರ್ಷಕ್ಕೆ ಒಮ್ಮೆ ಮಾತ್ರ ವರದಿ ಸಲ್ಲಿಸಬೇಕು. 2006ರ ಅಧಿಸೂಚನೆ ಪ್ರಕಾರ ಪ್ರತಿ ಆರು ತಿಂಗಳಿಗೆ ಒಮ್ಮೆ ವರದಿ ಸಲ್ಲಿಸಬೇಕು

ಯಾವುದಕ್ಕೆಲ್ಲ ವಿನಾಯಿತಿ?

* ರಸ್ತೆ ಮತ್ತು ಕೊಳವೆಮಾರ್ಗ ನಿರ್ಮಾಣದಂತಹ ಕಾಮಗಾರಿಗಳಿಗಾಗಿ ಮಣ್ಣು ತೆಗೆಯುವುದು

*ಜಲಾಶಯಗಳು, ಅಣೆಕಟ್ಟೆಗಳು, ಬ್ಯಾರೇಜ್, ನದಿ ಮತ್ತು ಕಾಲುವೆಗಳಲ್ಲಿ ಹೂಳು ತೆಗೆಯುವುದು

*ಗುಜರಾತ್‌ನ ವಂಜಾರ ಮತ್ತು ಆಡ್ಸ್ ಸಮುದಾಯದ ಜನರ ಸಾಂಪ್ರದಾಯಿಕ ಮರಳು ಕಲೆಗಾಗಿ ಮರಳು ಗಣಿಗಾರಿಕೆ

*ಸಾಂಪ್ರದಾಯಿಕ ರೀತಿಯಲ್ಲಿ ಸುಣ್ಣದ ಕಲ್ಲಿನ ಗಣಿಗಾರಿಕೆ

*ಕುಡಿಯುವ ನೀರು ಮತ್ತು ಕೃಷಿ ಬಳಕೆಗಾಗಿ ಬಾವಿ ತೋಡುವುದು

* ಕಟ್ಟಡ ನಿರ್ಮಾಣ ಉದ್ದೇಶದಿಂದ ಅಡಿಪಾಯ ನಿರ್ಮಿಸಲು ಮಣ್ಣು ಅಗೆಯುವುದು

* ಕಾಲುವೆ, ನಾಲೆ ಮತ್ತು ಕೊಳವೆ ಮಾರ್ಗಗಳಲ್ಲಿ ತಡೆ ಉಂಟಾಗಿ, ಪ್ರವಾಹಕ್ಕೆ ಕಾರಣವಾದರೆ ಅದನ್ನು ತೆರವು ಮಾಡುವ ಕಾಮಗಾರಿ

* ಗಣಿಯೇತರ ಚಟುವಟಿಕೆಗಳು ಎಂದು ರಾಜ್ಯ ಸರ್ಕಾರಗಳು ಘೋಷಿಸಿದ ಚಟುವಟಿಕೆಗಳು

* ಸೌರ ಉಷ್ಣ ವಿದ್ಯುತ್ ಘಟಕಗಳು ಮತ್ತು ಸೌರ ಪಾರ್ಕ್ ಅಭಿವೃದ್ಧಿ

* ಪ್ರಯೋಗದ ಉದ್ದೇಶದ ಮತ್ತು ವಾಣಿಜ್ಯೇತರ ಉದ್ದೇಶದ ಯೋಜನೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು

* ಪೂರ್ವ–ಪರಿಸರ ಅನುಮತಿ ಪಡೆದ ಯೋಜನೆ/ಘಟಕಗಳ ಆವರಣದಲ್ಲೇ ಆರಂಭಿಸಲಿರುವ ಹೊಸ ಯೋಜನೆಗಳು

* ಸಾಂಪ್ರದಾಯಿಕ ಮತ್ತು ದೇಸಿ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳು ಮತ್ತು ಕೈಗಾರಿಕಾ ವಸಾಹತುಗಳು

* 500 ಹೆಕ್ಟೇರ್‌ಗಿಂತ ಕಡಿಮೆ ವಿಸ್ತೀರ್ಣದ ಕೈಗಾರಿಕಾ ವಸಾಹತುಗಳು. ಅಧಿಸೂಚನೆಯಲ್ಲಿ ಹೆಸರಿಸಲಾದ ‘ಎ’, ‘ಬಿ1’ ಮತ್ತು ‘ಬಿ2’ ವರ್ಗದ ಕೈಗಾರಿಕೆಗಳು ಇರಬಾರದು

* ಕಲ್ಲಿದ್ದಲು ಮತ್ತು ಕಲ್ಲಿದ್ದಲೇತರ ಖನಿಜಗಳಿಗಾಗಿ ನಿಕ್ಷೇಪ ಸಂಶೋಧನೆ

* ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಗಾಗಿ ನೆಲದಲ್ಲಿ ಮತ್ತು ಸಾಗರದಲ್ಲಿ ಸಮೀಕ್ಷೆ. ಪರಿಸರ ಅನುಮತಿಯ ನಿಯಮಗಳು ಅನ್ವಯವಾಗುತ್ತವೆ

* 2,000 ಹೆಕ್ಟೇರ್‌ವರೆಗೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕಿರು ನೀರಾವರಿ ಯೋಜನೆಗಳು

* ವೇಸ್ಟ್ ಹೀಟ್ ರಿಕವರಿ ಬಾಯ್ಲರ್ಸ್‌ ಹೊಂದಿರುವ, ಬೇರೆ ಯಾವುದೇ ಇಂಧನ ಬಳಸದ ಉಷ್ಣ ವಿದ್ಯುತ್ ಸ್ಥಾವರ

* ಅದಿರು ಪುಡಿ ಮಾಡುವ ಘಟಕ

* ಲೋಹದ ಅಚ್ಚಿನ ಕಾರ್ಖಾನೆಗಳು. ವಾರ್ಷಿಕ ಉತ್ಪಾದನಾ ಸಾಮರ್ಥ್ಯ 1 ಲಕ್ಷ ಟನ್‌ ಮೀರಬಾರದು

* ರೋಲಿಂಗ್ ಮಿಲ್‌.ವಾರ್ಷಿಕ ಉತ್ಪಾದನಾ ಸಾಮರ್ಥ್ಯ 2 ಲಕ್ಷ ಟನ್‌ ಮೀರಬಾರದು.

* ಸಾಮಾನ್ಯ ಪೋರ್ಟ್‌ಲ್ಯಾಂಡ್‌ ಸಿಮೆಂಟ್ ಮಿಶ್ರಣ ಘಟಕ (ಪಿಪಿಸಿ, ಪಿಎಸ್‌ಸಿ ಸಿಮೆಂಟ್‌ಗಳಿಗೂ ಅನ್ವಯ)

* ಕಲ್ಲಿದ್ದಲಿನ ಟಾರ್ ಕರಗಿಸುವ ಪ್ರತ್ಯೇಕ ಘಟಕ

* ಗೊಬ್ಬರಕ್ಕೆ ಬೇವು ಲೇಪನ ಘಟಕಗಳು

* ಫಾಸ್ಪೇಟ್ ಪುಡಿ ಮಾಡುವ ಘಟಕ

* ವ್ಯಾಕ್ಸ್ ಸಂಸ್ಕರಣ ಘಟಕ

* ಅಫೀಮಿನಿಂದ ಅಲ್ಕಾಲಾಯ್ಡ್ ತೆಗೆಯುವ ಘಟಕ

* ಪ್ಲಾಸ್ಟಿಕ್ ಹುಡಿಯಿಂದ ವಸ್ತುಗಳನ್ನು ತಯಾರಿಸುವ ಘಟಕ

* ಆಲ್ಕಿಲ್ ಬೆಂಜೆನ್ ಸಲ್ಫೋನಿಕ್ ಆ್ಯಸಿಡ್ ತಯಾರಿಕೆ ಘಟಕ

* ದೇಸಿ ಮದ್ಯ ತಯಾರಿಕೆ ಘಟಕ

* ರದ್ದಿ ಕಾಗದದಿಂದ ಕಾಗದ ಮತ್ತು ಕಾಗದದ ಬೋರ್ಡ್ ತಯಾರಿಕೆ ಘಟಕ

* ರಕ್ಷಣಾ ಸಚಿವಾಲಯದ ಅಧೀನದಲ್ಲಿ ಆರಂಭವಾಗಲಿರುವ ಸ್ಫೋಟಕ, ಮದ್ದುಗುಂಡು ಕಾರ್ಖಾನೆಗಳು

* ರಕ್ಷಣಾ ವಿಮಾನ ನಿಲ್ದಾಣಗಳು

* ತ್ಯಾಜ್ಯ ಮತ್ತು ಕೊಳಚೆನೀರು ಸಂಸ್ಕರಣ ಘಟಕ

* ಕೆರೆ–ಜಲಾಶಯಗಳ ನಿರ್ವಹಣೆ ಕಾಮಗಾರಿ

* ಸೂಕ್ಷ್ಮ ಕೈಗಾರಿಕೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT