ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್‌ಲಾಕ್‌ 3’ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ: ಇಲ್ಲಿದೆ ಪ್ರಮುಖಾಂಶಗಳು

Last Updated 30 ಜುಲೈ 2020, 4:03 IST
ಅಕ್ಷರ ಗಾತ್ರ

ನವದೆಹಲಿ:ಕೊರೊನಾ ಸೋಂಕು ಹೆಚ್ಚುತ್ತಲೇ ಇರುವುದರಿಂದ ಆಗಸ್ಟ್‌ ಅಂತ್ಯದವರೆಗೂ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಗೃಹ ಸಚಿವಾಲಯವು ಬುಧವಾರ ಮೂರನೇ ಹಂತದ (ಅನ್‌ಲಾಕ್‌–3) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆಗಸ್ಟ್‌ 1ರಿಂದ ಇವು ಜಾರಿಗೆ ಬರಲಿವೆ.

ಸೋಂಕು ಪಸರಿಸದಂತೆ ತಡೆಯುವ ಸಲುವಾಗಿ ಈ ಹಿಂದೆ ಜಾರಿಗೊಳಿಸಿದ್ದ ‘ರಾತ್ರಿ ಕರ್ಫ್ಯೂ’ ರದ್ದುಪಡಿಸಲಾಗಿದೆ. ಕಂಟೈನ್‌ಮೆಂಟ್‌ ವಲಯವನ್ನು ಬಿಟ್ಟು ಉಳಿದೆಡೆ ಆಗಸ್ಟ್‌ 5ರಿಂದ ಜಿಮ್‌ ಹಾಗೂ ಯೋಗ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದರ ಮೇಲಿದ್ದ ನಿರ್ಬಂಧ ಮುಂದುವರಿಸಲಾಗಿದೆ.
ಹೀಗಾಗಿಮೆಟ್ರೊ ರೈಲು ಸೇವೆ, ಚಿತ್ರಮಂದಿರ, ಈಜುಕೊಳಗಳು, ಆಡಿಟೋರಿಯಂ ಹಾಗೂ ಬಾರ್‌ಗಳನ್ನು ತೆರೆಯಲು ಅನುಮತಿ ಕೊಟ್ಟಿಲ್ಲ.

‘ಕಂಟೈನ್‌ಮೆಂಟ್‌ ವಲಯಗಳಲ್ಲಿ ಆಗಸ್ಟ್‌ 31ರವರೆಗೂ ಲಾಕ್‌‌ಡೌನ್‌ ಮುಂದುವರಿಯಲಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಇನ್ನಷ್ಟು ಕಠಿಣ ಲಾಕ್‌ಡೌನ್‌ ಜಾರಿಗೊಳಿಸುವ ಅಥವಾ ತೆರವುಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಕ್ರೀಡಾ ಚಟುವಟಿಕೆಗಳು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ, ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರಿ ಯಲಿದೆ’ ಎಂದು ಗೃಹ ಸಚಿವಾಲಯವು ಅನ್‌ಲಾಕ್‌–3 ಕುರಿತ ಪ್ರಕಟಣೆಯಲ್ಲಿ ತಿಳಿಸಿದೆ.

ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದೂ ಹೇಳಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಅನುಮತಿ

ಆಗಸ್ಟ್‌ 15ರಂದು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸಲು ಒಪ್ಪಿಗೆ ನೀಡಲಾಗಿದೆ. ಈ ವೇಳೆ ಅಂತರ ಕಾಪಾಡಿಕೊಳ್ಳುವುದು, ಮುಖಗವಸು ಧರಿಸುವುದು ಸೇರಿದಂತೆ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.

ಆಗಸ್ಟ್‌ 31ರವರೆಗೆ ಶಾಲಾ, ಕಾಲೇಜುಗಳು ಆರಂಭವಾಗುವುದಿಲ್ಲ. ರಾಜ್ಯಗಳ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

- ಕೇಂದ್ರ ಗೃಹ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT