ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಖರೀದಿ: ಎಫ್‌ಐಆರ್‌ ದಾಖಲು

Last Updated 17 ಜುಲೈ 2020, 9:46 IST
ಅಕ್ಷರ ಗಾತ್ರ

ಜೈಪುರ: ಅಶೋಕ್‌ ಗೆಹ್ಲೊಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಸಂಚು ನಡೆಸಿದ ಆರೋಪದ ಮೇಲೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಪಡೆಯ (ಎಸ್‌ಒಜಿ) ಪೊಲೀಸರು ಶುಕ್ರವಾರ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಕಾಂಗ್ರೆಸ್‌ ನೀಡಿರುವ ದೂರಿನಲ್ಲಿ ‘ಗಜೇಂದ್ರ ಸಿಂಗ್‌’, ಭವರ್‌ಲಾಲ್‌ ಶರ್ಮಾ ಹಾಗೂ ಸಂಜಯ್‌ ಜೈನ್‌ ಎಂಬುವರ ಹೆಸರಿದೆ. ಆದರೆ ಗಜೇಂದ್ರ ಸಿಂಗ್‌ ಅವರು ಕೇಂದ್ರದ ಸಚಿವರೇ ಅಥವಾ ಅಲ್ಲವೇ ಎಂಬುದರ ಉಲ್ಲೇಖ ಇಲ್ಲ.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ‘ಕೇಂದ್ರಸ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌ ಅವರು ರಾಜಸ್ಥಾನ ಸರ್ಕಾರ ಉರುಳಿಸುವ ಸಂಚು ರೂಪಿಸಿದ್ದರು’ ಎಂದು ಆರೋಪಿಸಿದ್ದಲ್ಲದೆ, ಅವರು ಮಾತನಾಡಿದ್ದು ಎನ್ನಲಾದ ಎರಡು ಧ್ವನಿಮುದ್ರಿಕೆಗಳನ್ನೂ ಬಿಡುಗಡೆ ಮಾಡಿದ್ದರು. ಆದರೆ ಅದರಲ್ಲಿರುವ ಧ್ವನಿ ನನ್ನದಲ್ಲ, ಯಾವುದೇ ವಿಚಾರಣೆ ಎದುರಿಸಲು ನಾನು ಸಿದ್ಧ ಎಂದು ಸಚಿವರು ಹೇಳಿದ್ದಾರೆ.

‘ಶಾಸಕರ ಖರೀದಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ 124–ಎ (ದೇಶದ್ರೋಹ) ಹಾಗೂ 120–ಬಿ (ಸಂಚು) ಅಡಿ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಧ್ವನಿಮುದ್ರಿಕೆ ವೈರಲ್‌ ಆದ ನಂತರ, ಗುರುವಾರ ಸಂಜಯ್‌ ಜೈನ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರನ್ನು ಪುನಃ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಎಸ್‌ಒಜಿಯ ಎಡಿಜಿ ಅಶೋಕ್‌ ರಾಥೋಡ್‌ ತಿಳಿಸಿದ್ದಾರೆ.

‘ಸಂಜಯ್‌ ಜೈನ್‌ ಜತೆ ಮಾತುಕತೆ ನಡೆಸಿದ ಭವರ್‌ಲಾಲ್‌ ಶರ್ಮಾ ಹಾಗೂ ಕೇಂದ್ರದ ಸಚಿವ ಶೆಖಾವತ್‌ ಅವರ ಧ್ವನಿಯನ್ನು ನಾವು ಧ್ವನಿಮುದ್ರಿಕೆಯಲ್ಲಿ ಗುರುತಿಸಿದ್ದೇವೆ. ಇದು ಅವರದ್ದೇ ಧ್ವನಿ ಹೌದೇ ಅಲ್ಲವೇ ಎಂಬುದು ತನಿಖೆಯಿಂದ ಹೊರಬರಲಿದೆ. ಸಚಿವರು ತಾವಾಗಿಯೇ ಮುಂದೆ ಬಂದು ಎಸ್‌ಒಜಿ ಅಧಿಕಾರಿಗಳಿಗೆ ತಮ್ಮ ಧ್ವನಿಯ ಮಾದರಿಯನ್ನು ನೀಡುವ ಮೂಲಕ ತನಿಖೆಗೆ ಸಹಕರಿಸಬೇಕು’ ಎಂದು ರಾಜಸ್ಥಾನದ ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT