ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಲ್ಲಿ ಮುಳುಗೆದ್ದ ಮುಂಬೈ

Last Updated 4 ಆಗಸ್ಟ್ 2020, 22:36 IST
ಅಕ್ಷರ ಗಾತ್ರ

ಮಳೆಗಾಲವು ಮುಂಬೈ ನಗರವನ್ನು ಈ ವರ್ಷವೂ ಮತ್ತೆ ಜಲಾವೃತವಾಗಿಸಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೆ ಸುರಿದ ಭಾರಿ ಮಳೆಯಿಂದ ಮಹಾನಗರ ನಲುಗಿದೆ. ಒಂದೇ ದಿನಕ್ಕೆ ನಗರದ ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 48 ಗಂಟೆಗಳಲ್ಲಿ ಅತ್ಯಧಿಕ ಮಳೆ ಸುರಿಯಲಿದೆ ಎಂದು ರೆಡ್ ಅಲರ್ಟ್ ನೀಡಲಾಗಿದೆ.

*ಮಂಗಳವಾರ ಬೆಳಿಗ್ಗೆ ಸಾಂತಾಕ್ರೂಸ್‌ನಲ್ಲಿ 35 ವರ್ಷದ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳುಪ್ರವಾಹದ ನೀರಿನಲ್ಲಿ ಕೊಚ್ಚಿಹೋದರು. ಎರಡು ವರ್ಷದ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ

*ಮುಂಬೈನ ಗೊರಾಯ್ ಕಡಲತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಿದೆ. ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದು, 11 ಮಂದಿಯನ್ನು ರಕ್ಷಿಸಲಾಗಿದೆ. ದೋಣಿ ಹಾಗೂ ಮೀನುಗಾರರಿಗೆ ಶೋಧ ನಡೆಯುತ್ತಿದೆ

*ರಾತ್ರಿಯಿಡೀ ಸುರಿದ ಮಳೆಯಿಂದ ಉಪನಗರ ಕಾಂಡಿವಲಿಯಲ್ಲಿ ಹಾದುಹೋಗಿರುವ ವೆಸ್ಟರ್ನ್‌ ಎಕ್ಸ್‌ಪ್ರೆಸ್ ಹೆದ್ದಾರಿಯ ಮೇಲೆ ಭೂಕುಸಿತ ಉಂಟಾಗಿದೆ. ಹೀಗಾಗಿ ಮಂಗಳವಾರ ಮುಂಜಾನೆ ಪಶ್ಚಿಮ ಭಾಗ ಹಾಗೂ ದಕ್ಷಿಣ ಮುಂಬೈ ನಡುವೆ ವಾಹನ ಸಂಚಾರ ವ್ಯತ್ಯಯಗೊಂಡಿತ್ತು. ಕಾರೊಂದರ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಯಿತು. ಯಾವುದೇ ಅನಾಹುತ ಸಂಭವಿಸಿಲ್ಲ

*ನಗರದ ಹಲವು ಭಾಗಗಳು ಜಲಾವೃತಗೊಂಡಿದ್ದವು.ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಬೈಕುಲ್ಲಾ, ದಾದರ್, ಮಹಾಲಕ್ಷ್ಮಿ ಸೇರಿದಂತೆ ಹಲವು ‍ಪ್ರದೇಶಗಳಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು

*ಪ್ರವಾಹದ ನೀರಿನಿಂದ ಹಳಿಗಳು ಮುಳುಗಿದ್ದರಿಂದ ತುರ್ತು ಸೇವೆ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು

*ಮುಂಬೈನ ಕೆಲವು ಉಪನರಗಳಲ್ಲಿ ಒಂದೇ ದಿನ 300 ಮಿಲಿಮೀಟರ್ ಮಳೆ ಸುರಿದಿದೆ

*ನಗರದ ವಾಯುವ್ಯ ಭಾಗದಲ್ಲಿರುವ ದಹಿಸರ್ ನದಿ ಪ್ರವಾಹದ ನೀರಿನಿಂದ ತುಂಬಿ ಹರಿಯುತ್ತಿದ್ದು, ನಗರದ ರಾಷ್ಟ್ರೀಯ ಉದ್ಯಾನವನದ ಕೆಲವು ಭಾಗಗಳು ಮುಳುಗಡೆಯಾಗಿವೆ

*ಪ್ರವಾಹ ಹಾಗೂ ಸಾರಿಗೆ ಸಂಪರ್ಕ ಸಾಧ್ಯವಾಗದ ಕಾರಣ ಕೋವಿಡ್ ತುರ್ತು ಸೇವೆಗಳ ಸಿಬ್ಬಂದಿ ಸಕಾಲಕ್ಕೆ ಆಸ್ಪತ್ರೆಯನ್ನು ತಲುಪಲಾಗಲಿಲ್ಲ

*ಸಕಾಲಕ್ಕೆ ಸಿಬ್ಬಂದಿ ಹೈಕೋರ್ಟ್ ತಲುಪಲು ಸಾಧ್ಯವಾಗದ ಕಾರಣ, ವಿಡಿಯೊ ಸಂವಾದ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು

*ಭಾರಿ ಮಳೆಯ ಕಾರಣ ಮಹಾರಾಷ್ಟ್ರ ಸರ್ಕಾರವು ಮಂಗಳವಾರ ದಿನದ ಮಟ್ಟಿಗೆ ಎಲ್ಲ ಕಚೇರಿಗಳಿಗೆ ರಜೆ ಘೋಷಿಸಿತ್ತು

*ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಕೇಂದ್ರೀಯ ಮುಂಬೈನ ನಾಯರ್ ಆಸ್ಪತ್ರೆ ಹಾಗೂ ಆವರಣ ನೀರಿನಿಂದ ತುಂಬಿತ್ತು. ಆಸ್ಪತ್ರೆ ತಲುಪಲು ರೋಗಿಗಳು ಹಾಗೂ ಸಿಬ್ಬಂದಿಗೆ ಕಷ್ಟವಾಯಿತು

*ಮುಂದಿನ 48 ಗಂಟೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ಪಾಲಿಕೆ ಮನವಿ ಮಾಡಿದೆ

ತಿಂಗಳ ಅರ್ಧದಷ್ಟು ಮಳೆ ಸುರಿಯಿತು!

ಆಗಸ್ಟ್ ತಿಂಗಳಲ್ಲಿ ಸುರಿಯಬೇಕಿದ್ದ ವಾಡಿಕೆ ಮಳೆಯ ಶೇ 50ರಷ್ಟು ಮಳೆ ಮುಂಬೈನಲ್ಲಿ ಈಗಾಗಲೇ ಬಂದಾಗಿದೆ. ಆಗಸ್ಟ್ 1ರಿಂದ 4ರ ಅವಧಿಯಲ್ಲಿ 293 ಮಿಲಿಮೀಟರ್ ಮಳೆಯಾಗಿದೆ. ತಿಂಗಳ ವಾಡಿಕೆ ಮಳೆ ಪ್ರಮಾಣ 585 ಮಿಲಿಮೀಟರ್. ಬುಧವಾರ ಮತ್ತು ಗುರುವಾರ ಅತ್ಯಧಿಕ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಮುಂಬೈ ಮತ್ತೆ ಮಳೆಯಲ್ಲಿ ಮುಳುಗುವ ಸಾಧ್ಯತೆಯಿದೆ. ಮಂಗಳವಾರ ರೆಡ್ ಅಲರ್ಟ್ ನೀಡಿದ್ದ ಹವಾಮಾನ ಇಲಾಖೆ ಬುಧವಾರವೂ ಅದನ್ನು ಮುಂದುವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT