ಸೋಮವಾರ, ಆಗಸ್ಟ್ 2, 2021
28 °C
ಭಾರತದಲ್ಲಿ ಹೂಡಿಕೆ ಸ್ನೇಹಿ ಮತ್ತು ಸ್ಪರ್ಧಾತ್ಮಕ ಉದ್ಯಮ ವಾತಾವರಣ; ಪ್ರಧಾನಿ ಪ್ರತಿಪಾದನೆ

ಜಾಗತಿಕ ಕಂಪನಿಗಳಿಗೆ ಮುಕ್ತ ಅವಕಾಶ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಆತ್ಮನಿರ್ಭರ ಭಾರತವೆಂದರೆ ಜಗತ್ತಿಗೆ ನಾವು ಬಾಗಿಲುಗಳನ್ನು ಮುಚ್ಚಿದ್ದೇವೆ ಎಂದರ್ಥವಲ್ಲ. ಭಾರತದಲ್ಲಿ ಹೂಡಿಕೆ ಸ್ನೇಹಿ ಮತ್ತು ಸ್ಪರ್ಧಾತ್ಮಕ ಉದ್ಯಮ ವಾತಾವರಣ ಕಲ್ಪಿಸಲಾಗಿದೆ. ಹೂಡಿಕೆ ಮಾಡಲು ಎಲ್ಲ ಜಾಗತಿಕ ಕಂಪನಿಗಳನ್ನು ಸ್ವಾಗತಿಸುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಡಿಯೊ ಲಿಂಕ್‌ ಮೂಲಕ ಗುರುವಾರ ‘ಇಂಡಿಯಾ ಗ್ಲೋಬಲ್‌ ವೀಕ್‌ 2020’ ಉದ್ಘಾಟಿಸಿ ಮಾತನಾಡಿದ ಅವರು, ‘ಆತ್ಮನಿರ್ಭರ ಎನ್ನುವುದು ಸ್ವಯಂ ಉತ್ಪಾದಿಸುವುದು ಮತ್ತು ಸ್ವಯಂ ಸದೃಢವಾಗುವುದು. ಏಷ್ಯಾದಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಭಾರತ, ಅತ್ಯಂತ ಮುಕ್ತವಾದ ಅರ್ಥಿಕ ನೀತಿಗಳನ್ನು ಹೊಂದಿರುವ ರಾಷ್ಟ್ರ’ ಎಂದು ಪ್ರತಿಪಾದಿಸಿದರು.

‘ಭಾರತದ ರೀತಿಯಲ್ಲಿ ನೀಡುತ್ತಿರುವ ಅವಕಾಶಗಳನ್ನು ಕೆಲವೇ ರಾಷ್ಟ್ರಗಳು ಒದಗಿಸುತ್ತಿವೆ. ಹೂಡಿಕೆ ಸ್ನೇಹಿ ಮತ್ತು ಸ್ಪರ್ಧಾತ್ಮಕವಾಗಿರುವ ಹಾಗೂ ಉತ್ಪಾದನೆಗೆ ಪೂರಕವಾಗಿರುವ ಆರ್ಥಿಕತೆಯನ್ನು ರೂಪಿಸುತ್ತಿದ್ದೇವೆ’ ಎಂದು ವಿವರಿಸಿದರು.

‘ಕೃಷಿ, ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಕ್ತ ಅವಕಾಶಗಳನ್ನು ಕಲ್ಪಿಸಲಾಗಿದೆ. ರಕ್ಷಣಾ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ನಿಯಮಾವಳಿಗಳನ್ನು ಸಡಿಲಿಸಲಾಗಿದೆ. ಅದೇ ರೀತಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಮತ್ತು ಕೃಷಿ ವಲಯದಲ್ಲಿ ಸಂಗ್ರಹ ಮತ್ತು ಸಾಗಾಣಿಕೆಗೆ ವಿಪುಲ ಅವಕಾಶಗಳಿವೆ’ ಎಂದು ವಿವರಿಸಿದರು.

‘ಭಾರತೀಯರು ಸಹಜ ಸುಧಾರಕರು. ಸಾಮಾಜಿಕ ಅಥವಾ ಆರ್ಥಿಕ ವಿಷಯವಾಗಿರಬಹುದು. ಭಾರತ ಪ್ರತಿಯೊಂದು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದೆ ಎಂದು ಇತಿಹಾಸ ಹೇಳುತ್ತದೆ. ಸುಧಾರಣೆಯ ಸ್ಫೂರ್ತಿ ನಮ್ಮಲ್ಲಿ ಅಡಗಿದೆ. ಇದೇ ಸ್ಫೂರ್ತಿಯೊಂದಿಗೆ ಮುನ್ನಡೆಯುತ್ತೇವೆ’ ಎಂದು ಹೇಳಿದರು.

‘ಜಾಗತಿಕವಾಗಿ ಆರ್ಥಿಕ ಪುನಶ್ಚೇತನದ ವಿಷಯ ಪ್ರಸ್ತಾಪವಾದರೆ ಭಾರತದ ನೀತಿಗಳನ್ನು ಪ್ರಮುಖವಾಗಿ ಮಂಡಿಸಲಾಗುತ್ತದೆ. ಇದು ಸಹಜ. ಜಾಗತಿಕ ಸನ್ನಿವೇಶದಲ್ಲಿ ಭಾರತ ಪ್ರಮುಖ ಪಾತ್ರವಹಿಸುತ್ತಿರುವುದೇ ಇದಕ್ಕೆ ಕಾರಣ. ದೇಶದಲ್ಲಿನ ಪ್ರತಿಭೆ ಮತ್ತು ಸುಧಾರಣೆ ಕ್ರಮಗಳು ಹಾಗೂ ಪುನಶ್ಚೇತನದ ಅಂಶಗಳು ಇದಕ್ಕೆ ಪ್ರಮುಖವಾಗಿವೆ’ ಎಂದು ವಿಶ್ಲೇಷಿಸಿದರು.

‘ಕೋವಿಡ್‌–19 ಸಂಕಷ್ಟದ ಸಂದರ್ಭದಲ್ಲಿ ಭಾರತದ ಫಾರ್ಮಾ ಉದ್ಯಮ ಕೇವಲ ಭಾರತಕ್ಕೆ ಮಾತ್ರ ಅಲ್ಲ, ಇಡೀ ಜಗತ್ತಿಗೆ ಬಹು ದೊಡ್ಡ ಆಸ್ತಿ ಎನ್ನುವುದನ್ನು ಸಾಬೀತುಪಡಿಸಿದೆ. ಔಷಧದ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಫಾರ್ಮಾ ಕಂಪನಿಗಳು ಪ್ರಮುಖ ಪಾತ್ರ ವಹಿಸಿವೆ. ಕೋವಿಡ್‌–19 ಲಸಿಕೆ ಅಭಿವೃದ್ಧಿ ಮತ್ತು ತಯಾರಿಕೆಯಲ್ಲೂ ಭಾರತೀಯ ಕಂಪನಿಗಳು ಕ್ರಿಯಾಶೀಲವಾಗಿವೆ’ ಎಂದು ವಿವರಿಸಿದರು.

ಕೋವಿಡ್‌–19 ಸಂಕಷ್ಟದಿಂದ ಪಾರಾಗಲು ಕೈಗೊಂಡ ಪರಿಹಾರ ಕಾರ್ಯಗಳು ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕೈಗೊಂಡ ಕ್ರಮಗಳನ್ನು ವಿವರಿಸಿದ ಪ್ರಧಾನಿ, ‘ಗ್ರಾಮೀಣ ಆರ್ಥಿಕತೆಗೆ ಚೇತರಿಕೆ ನೀಡಿರುವ ಯೋಜನೆಗಳು ಮೂಲಸೌಕರ್ಯಗಳನ್ನು ಸಹ ಸೃಷ್ಟಿಸಿವೆ’ ಎಂದು ವಿವರಿಸಿದರು.

‘ಪರಿವರ್ತನೆಯ ಮತ್ತು ಸುಧಾರಣೆಯ ಹಾದಿಯಲ್ಲಿ ಸಾಗಿರುವ ಭಾರತ, ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಿದೆ. ಒಳಗೊಳ್ಳುವಿಕೆ ನಿಲುವಿನೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದೇಶ ನಮ್ಮದಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು