ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಕನಸು ಕಂಡ ವಿದ್ಯಾರ್ಥಿಗೆ ರಾಷ್ಟ್ರಪತಿಯಿಂದ ಸೈಕಲ್ ಉಡುಗೊರೆ

Last Updated 31 ಜುಲೈ 2020, 12:52 IST
ಅಕ್ಷರ ಗಾತ್ರ

ನವದೆಹಲಿ: ಸೈಕ್ಲಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿದ್ದ ಉದಯೋನ್ಮುಖ ಸೈಕ್ಲಿಸ್ಟ್‌ ರಿಯಾಜ್‌ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ‘ರೇಸ್‌ ಸೈಕಲ್‌‘ ಅನ್ನು ಉಡುಗೊರೆಯಾಗಿ ನೀಡಿ, ಪ್ರೋತ್ಸಾಹಿಸಿದ್ದಾರೆ.

ರಾಷ್ಟ್ರಪತಿಯವರು ಬಕ್ರೀದ್‌ (ಈದ್‌ ಅಲ್‌ ಅದಾ) ಹಬ್ಬಕ್ಕೆ ಒಂದು ದಿನ ಮುನ್ನವೇ ರಿಯಾಜ್‌ಗೆ ರೇಸ್‌ ಸೈಕಲ್‌ ಉಡುಗೊರೆಯಾಗಿ ನೀಡುವ ಮೂಲಕ ಅರ್ಥಪೂರ್ಣವಾಗಿ ಹಬ್ಬದ ಶುಭಾಶಯ ಕೋರಿದ್ದಾರೆ.

ರಿಯಾಜ್‌, ದೆಹಲಿಯ ಆನಂದವಿಹಾರದಲ್ಲಿರುವ ಸರ್ವೋದಯ ಬಾಲ ವಿದ್ಯಾಲಯದಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾನೆ. ಈತನ ಪೋಷಕರು, ಕುಟುಂಬದ ಸದಸ್ಯರು ಬಿಹಾರ ಜಿಲ್ಲೆಯ ಮಧುಬನಿಯಲ್ಲಿದ್ದಾರೆ. ರಿಯಾಜ್ ಗಾಜಿಯಾಬಾದ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾನೆ. ಇವರ‌ ತಂದೆ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ರಿಯಾಜ್‌ ಕೂಡ ಕೆಲಸ ಮಾಡುತ್ತಾ, ತಂದೆಯ ದುಡಿಮೆಗೆ ನೆರವಾಗುತ್ತಾನೆ.

ಸೈಕ್ಲಿಂಗ್ ಪ್ಯಾಷನ್‌

ಕಡು ಬಡತನದಿಂದ ಬಂದಿರುವ ರಿಯಾಜ್ ಗೆ ಸೈಕಿಂಗ್ ಅಂದರೆ ಪ್ಯಾಷನ್‌. ಹೀಗಾಗಿ ವಿದ್ಯಾಭ್ಯಾಸದ ಜತೆ ಜತೆಗೆ ಸೈಕ್ಲಿಂಗ್ ಅಭ್ಯಾಸ ಮಾಡುತ್ತಾನೆ. 2017ರಲ್ಲಿ ದೆಹಲಿಯಲ್ಲಿ ನಡೆದ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾನೆ. ಗುವಾಹಟಿಯಲ್ಲಿ ನಡೆದ ಶಾಲಾ ಹಂತದ ಆಟಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ. ಗಾಜಿಯಾಬಾದ್‌ನ ಜಿಲ್ಲಾಧಿಕಾರಿಯವರ ಮಾಹಿತಿ ಪ್ರಕಾರ ಈತ ರಾಷ್ಟ್ರಮಟ್ಟದ ಸ್ಪರ್ಧೆಯೊಂದರಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾನೆ.

ದೆಹಲಿಯಲ್ಲಿ ತರಬೇತಿ

ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ರಿಯಾಜ್‌, ಕೋಚ್‌ ಪ್ರಮೋದ್ ಅವರ ತರಬೇತಿಯೊಂದಿಗೆ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ತರಬೇತಿಯಲ್ಲಿ ಪಾಲ್ಗೊಳ್ಳಲು ಈತನಲ್ಲಿ ಸ್ಪೋರ್ಟ್ಸ್‌ ಸೈಕಲ್ ಇಲ್ಲ. ಹೀಗಾಗಿ ಪ್ರತಿ ದಿನ ಬೇರೆಯವರ ಸೈಕಲ್‌ ಮೇಲೆ ಅವಲಂಬಿಸಬೇಕಾಗುತ್ತಿದೆ. ಪ್ರತಿ ಬಾರಿ ಬೇರೆಯವರಿಂದ ಸೈಕಲ್ ಕೇಳುವಾಗ ‘ನನ್ನದೂ ಅಂತ ಒಂದು ರೇಸ್‌ ಸೈಕಲ್‌ ಇದ್ದಿದ್ದರೆ...‘ ಎಂದು ಮನದಲ್ಲೇ ಅಂದುಕೊಳ್ಳುತ್ತಿದ್ದ ರಿಯಾಜ್‌.

ಇದೇ ವೇಳೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ರಿಯಾಜ್‌ನ ಸೈಕ್ಲಿಂಗ್‌ ಸಾಹಸಗಳು, ಸಾಧನೆಗಳು ರಾಷ್ಟ್ರಪತಿಯವರ ಗಮನ ಸೆಳೆದವು. ವರದಿಗಳ ಮೂಲಕ ಈ ಬಾಲಕನ ಆಸಕ್ತಿ, ಗುರಿಯನ್ನು ತಿಳಿದುಕೊಂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ರಿಯಾಜ್‌ಗೆ ರೇಸ್‌ ಸೈಕಲ್ ಉಡುಗೊರೆಯಾಗಿ ನೀಡಿ, ‘ನೀನು ಅಂತರರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಬೇಕು’ಎಂದು ಶುಭಾಶಯ ಕೋರಿದ್ದಾರೆ.

‘ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರಪತಿಯವರು ಬಾಲಕನಿಗೆ ರೇಸಿಂಗ್‌ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ‘ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT