ಶುಕ್ರವಾರ, ಜುಲೈ 23, 2021
22 °C

‘ಪರಿಸರ ಸ್ನೇಹಿ’ಯಾಗಿ ರೈಲ್ವೆ ಇಲಾಖೆ: ಗುರಿ ಸಾಧನೆಗೆ 2030ರ ಕಾಲಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೈಲ್ವೆ ಇಲಾಖೆ 2030ರ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ‘ಪರಿಸರ ಸ್ನೇಹಿ’ ಆಗಿ ಪರಿವರ್ತನೆಯಾಗುವ ಗುರಿ ಹೊಂದಿದೆ. ಬ್ರಾಡ್‍ಗೇಜ್‍ಗಳ ವಿದ್ಯುದ್ದೀಕರಣ ಯೋಜನೆ, ಇಂಗಾಲದ ಹೊರಸೂಸುವಿಕೆ ಪ್ರಮಾಣ ಕುಗ್ಗಿಸುವ ಕ್ರಮಗಳಿಗೆ ಆದ್ಯತೆ ನೀಡಲಿದೆ.

ಸೋಮವಾರ ಈ ಕುರಿತು ಹೇಳಿಕೆ ನೀಡಿರುವ ರೈಲ್ವೆ ಇಲಾಖೆ, ‘2023ರ ಅಂತ್ಯದ ವೇಳೆಗೆ ದೇಶದಾದ್ಯಂತ ಎಲ್ಲ ಬ್ರಾಡ್‍ಗೇಜ್‍ಗಳ ವಿದ್ಯುದ್ದೀಕರಣ ಕಾರ್ಯವನ್ನು ಅಂತಿಮಗೊಳಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದೆ.

ಇಂಧನ ಮಿತವ್ಯಯ ಕ್ರಮಗಳು, ಎಲ್ಲ ನಿಲ್ದಾಣಗಳಿಗೆ ಹಸಿರು ಪ್ರಮಾಣೀಕರಣ ಪಡೆಯುವುದು, ಬೋಗಿಗಳಲ್ಲಿ ಬಯೊ ಶೌಚಾಲಯಗಳ ಅಳವಡಿಕೆ, ಮರುಬಳಕೆ ಇಂಧನ ಮೂಲಗಳ ಬಳಕೆಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಹೇಳಿದೆ.

ಹೇಳಿಕೆ ಪ್ರಕಾರ, ಈಗಾಗಲೇ 40,000ಕ್ಕೂ ಅಧಿಕ ಕಿ.ಮೀ ಮಾರ್ಗಗಳಲ್ಲಿ ವಿದ್ಯುದ್ದೀಕರಣ ಯೋಜನೆ ಜಾರಿಯಾಗಿದೆ. ಇದು, ಒಟ್ಟು ಬ್ರಾಡ್‍ಗೇಜ್‍ ಮಾರ್ಗದ ಶೇ 63ರಷ್ಟು. 2014-20ರ ಅವಧಿಯಲ್ಲಿ ಒಟ್ಟು 18,605 ಕಿ.ಮೀ ಮಾರ್ಗ ವಿದ್ಯುದ್ದೀಕರಣವಾಗಿದೆ. 2009-14ರ ಅವಧಿಯಲ್ಲಿ 3,835 ಕಿ.ಮೀ ವಿದ್ಯುದ್ದೀಕರಣ ಆಗಿತ್ತು.

ಕೋವಿಡ್-19 ಸಂದರ್ಭದಲ್ಲಿಯೇ ಒಟ್ಟು 365 ಪ್ರಮುಖ ಸಂಪರ್ಕ ಮಾರ್ಗಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಸೌರವಿದ್ಯುತ್‍ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಚಾವಣಿಯಲ್ಲಿ ಅಳವಡಿಸುವ ಸೋಲಾರ್ ಪ್ಯಾನೆಲ್‍ಗಳ (ಡೆವಲಪರ್ ಮಾದರಿ) ಮೂಲಕ 500 ಮೆಗಾವಾಟ್‍ ವಿದ್ಯುತ್‍ ಉತ್ಪಾದನೆಗೆ ಅವಕಾಶವಿದ್ದು, ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದು ಹೇಳಿಕೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು