ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರಾಜಸ್ಥಾನ ಸ್ಪೀಕರ್ ನೋಟಿಸ್ ಪ್ರಶ್ನಿಸಿ ಪ್ರಕರಣ: ಹೈಕೋರ್ಟ್ ಆದೇಶ ನೀಡಬಹುದು'

ಸುಪ್ರೀಂ ಕೋರ್ಟ್‌
Last Updated 23 ಜುಲೈ 2020, 7:53 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನ ಸ್ಪೀಕರ್‌ ತಮಗೆ ನೀಡಿರುವ ನೋಟಿಸ್‌ ಪ್ರಶ್ನಿಸಿ ಕಾಂಗ್ರೆಸ್‌ನ ಬಂಡಾಯ ಶಾಸಕ ಸಚಿನ್‌ ಪೈಲಟ್‌ ಮತ್ತು ಅವರ 18 ಮಂದಿ ಬೆಂಬಲಿಗ ಶಾಸಕರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನಿರ್ದೇಶನ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಕಾಂಗ್ರೆಸ್‌ನ ಬಂಡಾಯ ಶಾಸಕರ ವಿರುದ್ಧ ಶುಕ್ರವಾರದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ನೀಡಿರುವ 'ನಿರ್ದೇಶನ' ಪ್ರಶ್ನಿಸಿ ರಾಜಸ್ಥಾನ ವಿಧಾನಸಭಾ ಸ್ಪೀಕರ್‌ ಸಿ.ಪಿ.ಜೋಶಿ ಅವರು ಬುಧವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠ, ರಾಜಸ್ಥಾನ ಹೈಕೋರ್ಟ್‌ನ ನಿರ್ದೇಶನಗಳಿಗೆ ತಡೆ ನೀಡಲು ನಿರಾಕರಿಸಿದೆ.

ಸ್ಪೀಕರ್‌ ಸಿ.ಪಿ.ಜೋಶಿ ಅವರ ಪರವಾಗಿ ಕಪಿಲ್‌ ಸಿಬಲ್‌ ವಕಾಲತ್ತು ವಹಿಸಿದ್ದರು ಹಾಗೂ ಸಚಿನ್‌ ಪೈಲಟ್‌ ಮತ್ತು ಇತರೆ ಶಾಸಕರ ಪರ ಹರೀಶ್‌ ಸಾಲ್ವೆ ಕೋರ್ಟ್‌ಗೆ ಹಾಜರಾಗಿದ್ದರು.

ರಾಜಸ್ಥಾನ ಹೈಕೋರ್ಟ್‌ ತನ್ನ ಆದೇಶದಲ್ಲಿ 'ನಿರ್ದೇಶನ' ಎಂದು ಬಳಕೆ ಮಾಡಿದೆ. ಅದನ್ನು ಕೋರ್ಟ್‌ ಕೈಬಿಡಬೇಕು ಹಾಗೂ ಹೈಕೋರ್ಟ್‌ನಲ್ಲಿ ವಿಚಾರಣೆಗೆ ತಡೆ ನೀಡುವಂತೆ ಸಿಬಲ್‌ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.

ಇದಕ್ಕೆ ಸುಪ್ರೀಂ ಕೋರ್ಟ್‌, 'ಹಾಗಾದರೆ ನಿಮ್ಮಗೆ ತಕರಾರು ಇರುವುದು ನಿರ್ದೇಶನ ಎಂಬ ಪದದ ಮೇಲೆ‌ ಮಾತ್ರವೇ?' ಎಂದು ಕೇಳಿತು. ಹೈಕೋರ್ಟ್‌ನಲ್ಲಿ ವಿಚಾರಣೆಗೆ ತಡೆ ನೀಡಲು ಅಸಮ್ಮತಿಸಿ, ಕಾಂಗ್ರೆಸ್‌ ಶಾಸಕರು ಸಲ್ಲಿಸಿರುವ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶ ನೀಡಬಹುದು ಎಂದು ತಿಳಿಸಿತು.

'ಶಾಸಕರ ಅನರ್ಹತೆಯು ವಿಧಾಸನಭಾ ಕಲಾಪದ ಭಾಗ. ಆದ್ದರಿಂದ ಈ ವಿಚಾರದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸಬಾರದಾಗಿತ್ತು. ಸಂಸ್ಥೆಯೊಂದರ ವ್ಯಾಖ್ಯಾನಿತ ಅಧಿಕಾರವನ್ನು ಮೊಟಕುಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ' ಎಂದು ಸ್ಪೀಕರ್‌ ವಾದಿಸಿದ್ದಾರೆ.

ಶಾಸಕರಿಗೆ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ನಿಗದಿ ಮಾಡಿದ್ದ ಗಡುವನ್ನು ವಿಸ್ತರಿಸುವಂತೆ ಎರಡು ಬಾರಿ ಕೋರ್ಟ್‌ ಮಾಡಿದ್ದ ಮನವಿಯನ್ನು ಸ್ಪೀಕರ್‌ ಪರ ವಕೀಲರು ಒಪ್ಪಿಕೊಂಡಿದ್ದರು. ಮಂಗಳವಾರವೂ ವಿಚಾರಣೆ ಮುಗಿಯದ ಕಾರಣ ಇನ್ನೊಮ್ಮೆ ಗಡುವು ವಿಸ್ತರಿಸುವಂತೆ ಕೋರ್ಟ್‌ ಮನವಿ ಮಾಡಿತ್ತು.

ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಸೂಚಿಸಿ ನೀಡಲಾಗಿದ್ದ ವಿಪ್‌ ಅನ್ನು ಈ 19 ಶಾಸಕರು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್‌ ನೀಡಿರುವ ದೂರಿನ ಆಧಾರದಲ್ಲಿ ಶಾಸಕರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಸಂವಿಧಾನದ 10ನೇ ವಿಧಿಯ ಪ್ಯಾರ 2(1)(ಎ) ಅಡಿ ಈ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಸ್ಪೀಕರ್‌ಗೆ ನೀಡಿದ್ದ ದೂರಿನಲ್ಲಿ ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT