ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಒಂದು ಲಕ್ಷ ಗಡಿ ದಾಟಿದ ಸೋಂಕು ಪ್ರಕರಣ

ಭಯ ಬೇಡ: ಸಾವಿನ ಪ್ರಮಾಣ ತೀರಾ ಕಡಿಮೆ– ಸರ್ಕಾರ
Last Updated 4 ಜುಲೈ 2020, 15:37 IST
ಅಕ್ಷರ ಗಾತ್ರ

ಚೆನ್ನೈ:ತಮಿಳುನಾಡಿನಲ್ಲಿ ಕೋವಿಡ್‌ 19 ರೋಗಿಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದು, ಅತಿಹೆಚ್ಚು ಕೊರೊನಾ ಪೀಡಿತರನ್ನು ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರದ ಬಳಿಕ ಎರಡನೇ ಸ್ಥಾನದಲ್ಲಿದೆ.

ಆದರೆ ಅತಿ ಹೆಚ್ಚು ಪ್ರಮಾಣದಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಯುತ್ತಿರುವುದು ಮತ್ತು ಪ್ರಾಥಮಿಕ ಹಂತದಲ್ಲೇ ಸೋಂಕು ಪತ್ತೆಯಾಗುತ್ತಿರುವುದು ಪೀಡಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ಸರ್ಕಾರ ಹೇಳಿದೆ.

‘ಸೋಂಕಿತರ ಪ್ರಮಾಣ ಏರುತ್ತಿದೆ ಎಂದು ಭೀತಿ ಉಂಟುಮಾಡಬಾರದು ಮತ್ತು ಚೆನ್ನೈನ ಕೊಳೆಗೇರಿಗಳನ್ನು ಮುಂಬೈಗೆ ಹೋಲಿಸುವ ಅಗತ್ಯವಿಲ್ಲ’ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ. ರಾಧಾಕೃಷ್ಣನ್‌ ತಿಳಿಸಿದ್ದಾರೆ.

‘ಹೆಚ್ಚಿನ ಪ್ರಮಾಣದಲ್ಲಿ ತಪಾಸಣೆ ನಡೆಸುತ್ತಿರುವ ಮುಖ್ಯಮಂತ್ರಿ ಅವರ ಕಾರ್ಯತಂತ್ರದಿಂದಾಗಿ ಹೆಚ್ಚಿನ ಪ್ರಮಾಣದ ಪ್ರಕರಣ ವರದಿಯಾಗುತ್ತಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡುವ ಗುರಿ ಇದೆ. ಅದರಂತೆ ರಾಜ್ಯದಲ್ಲಿ ಸೋಂಕಿನಿಂದ ಮರಣ ಹೊಂದುತ್ತಿರುವವರ ಪ್ರಮಾಣ ತೀರಾ ಕಡಿಮೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಾರಂಭದಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಮಾಣ ತೀರಾ ವಿರಳವಾಗಿತ್ತು.ಅನ್ಯ ರಾಜ್ಯ‌ ಮತ್ತು ವಿದೇಶಗಳಿಂದ ಬಂದವರಿಂದಲೇ ರಾಜ್ಯದಲ್ಲಿ ಸೋಂಕು ಪ್ರಕರಣ ಏರಿಕೆಗೆ ಕಾರಣವಾಗಿದೆ. ಚೆನ್ನೈವೊಂದರಲ್ಲೇ 64, 689 ಸೋಂಕಿತರಿದ್ದು, 158 ಕಂಟೈನ್‌ಮೆಂಟ್‌ ವಲಯಗಳಿವೆ. ನಗರದಲ್ಲಿ ಸೋಂಕು ಪ್ರಮಾಣ ಶೀಘ್ರವಾಗಿ ಹರಡಲು ಜನಸಾಂದ್ರತೆಯೂ ಪ್ರಮುಖ ಅಂಶವಾಗಿದೆ ಎಂದು ಸರ್ಕಾರ ಹೇಳಿದೆ.

ಚೆನ್ನೈನ ನೆರೆಯ ಜಿಲ್ಲೆಗಳಾದಚೆಂಗಲ್‌ಪೇಟೆ, ಕಾಂಚೀಪುರಂ, ತಿರುವಲ್ಲೂರು, ಮಧುರೈ ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗಿವೆ.

ಇಲ್ಲಿಯವರೆಗೆ 12.70 ಲಕ್ಷ ಮಂದಿಯ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. ಶುಕ್ರವಾರ ಒಂದೇ ದಿನದ 35,028 ಮಂದಿಯ ತಪಾಸಣೆ ನಡೆದಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡ 1.3 ರಷ್ಟಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇಕಡ 57 ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT