ಸೋಮವಾರ, ಆಗಸ್ಟ್ 2, 2021
28 °C

ಗುಜರಾತ್ ಸಚಿವರ ಪುತ್ರ ಕರ್ಫ್ಯೂ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೊಲೀಸ್ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

sunita yadav

ಸೂರತ್: ಗುಜರಾತ್ ಸಚಿವರ ಪುತ್ರ ಕರ್ಫ್ಯೂ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದ ಮಹಿಳಾ ಪೊಲೀಸ್ ಸುನೀತಾ ಯಾದವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸುನೀತಾ ವರ್ಗಾವಣೆ ನಿರ್ಧಾರವನ್ನು ಖಂಡಿಸಿ ಟ್ವೀಟಿಗರು #Stop_Transfer_Sunita_Yadav ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಯಾರು ಈ ಸುನೀತಾ ಯಾದವ್? ಏನಿದು ಪ್ರಕರಣ ?
ಸೂರತ್‌ನ ಮಹಿಳಾ ಪೊಲೀಸ್ ಸಿಬ್ಬಂದಿಯಾಗಿದ್ದಾರೆ ಸುನೀತಾ ಯಾದವ್. ಕಳೆದ ವಾರ ಗುಜರಾತ್‌ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕಿಶೋರ್ ಕನಾನಿ ಅವರ ಪುತ್ರ ಪ್ರಕಾಶ್ ಕನಾನಿ ಗೆಳೆಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ವಾಹನ ತಪಾಸಣೆ ಮಾಡುತ್ತಿದ್ದ ಸುನೀತಾ, ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಕ್ಕೆ ಎಂದು ಕಾರಿನಲ್ಲಿರುವ ಯುವಕರನ್ನು ಪ್ರಶ್ನಿಸಿದ್ದಾರೆ.

ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸುನೀತಾ ಜತೆ ಜಗಳಕ್ಕಿಳಿದಾಗ ಅದರಲ್ಲಿ ಒಬ್ಬ ಯುವಕ ಇದೇ ಜಾಗದಲ್ಲಿ ನಿನ್ನನ್ನು 365 ದಿನವೂ ನಿಲ್ಲುವಂತೆ ಮಾಡುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸುನೀತಾ, 365 ದಿನ ಹೀಗೆ ನಿಲ್ಲಲು ನಾನೇನು ನಿಮ್ಮಪ್ಪನ ಅಡಿಯಾಳು ಅಥವಾ ಸೇವಕಿ ಅಲ್ಲ ಎಂದು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಸುನೀತಾ ಅವರ ಧೈರ್ಯವನ್ನು ಕೊಂಡಾಡಿದ್ದರು.

ಬುಧವಾರ ರಾತ್ರಿ ಸೂರತ್‌ನ ಮನಗಂಧ್ ಚೌಕ್‌ನಲ್ಲಿ ರಾತ್ರಿ 10.30ಕ್ಕೆ ನಡೆದಿದೆ ಎಂದು ಅಸಿಸ್ಟೆಂಟ್ ಪೊಲೀಸ್ ಕಮಿಷನರ್ (ಸ್ಪೆಷಲ್ ಬ್ರಾಂಚ್) ಪಿ.ಎಲ್ ಚೌಧರಿ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಈ ಬಗ್ಗೆ ಸುನೀತಾ ಯಾದವ್ ಅವರು ವರಚ್ಚಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗೆ ವಿವರಿಸಿದ್ದರು. ತನ್ನ ವಿರುದ್ಧ ಪೊಲೀಸ್ ಇಲಾಖೆ ತನಿಖೆಗೆ ಆದೇಶಿಸಿದೆ ಎಂದು ತಿಳಿದಾಗ ಸುನೀತಾ ರಾಜೀನಾಮೆ ನೀಡಿದ್ದರು. ಇದೀಗ ರಾಜೀನಾಮೆಯನ್ನು ನಿರಾಕರಿಸಿದ ಇಲಾಖೆ ಈಕೆಯನ್ನು ವರಚ್ಚಾ ಪೊಲೀಸ್ ಠಾಣೆಯಿಂದ  ಪೊಲೀಸ್ ಪ್ರಧಾನ ಕಾರ್ಯಾಲಯಕ್ಕೆ ವರ್ಗಾವಣೆ ಮಾಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸುನೀತಾ  ಅವರ ವರ್ಗಾವಣೆ ನಿರ್ಧಾರವನ್ನು ಟ್ವೀಟಿಗರು ಖಂಡಿಸಿದ್ದು, ಗುಜರಾತ್ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು