ಸೋಮವಾರ, ಮಾರ್ಚ್ 1, 2021
31 °C

ವ್ಯಾಯಾಮ ಕೊರತೆ; ಅಪಾಯದಲ್ಲಿ 140 ಕೋಟಿ ಜನರ ಆರೋಗ್ಯ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Deccan Herald

ಪ್ಯಾರಿಸ್‌: ಕಳೆದ ಎರಡು ದಶಕಗಳಿಂದ ಜನರ ಜೀವನ ಶೈಲಿಯಲ್ಲಿ ಆಗಿರುವ ಬದಲಾವಣೆ ದೈಹಿಕ ವ್ಯಾಯಾಮ, ಕಸರತ್ತು ಅಭ್ಯಾಸಗಳಿಂದ ದೂರ ಉಳಿಸಿದೆ. ಇದೇ ಕಾರಣದಿಂದಾಗಿ ಜಗತ್ತಿನಾದ್ಯಂತ 140 ಕೋಟಿಗೂ ಹೆಚ್ಚು ಮಂದಿ ಅತ್ಯಂತ ಅಪಾಯಕಾರಿ ರೋಗಗಳಿಗೆ ತೆರೆದುಕೊಳ್ಳುತ್ತಿರುವುದಾಗಿ ವೈದ್ಯರು ಎಚ್ಚರಿಸಿದ್ದಾರೆ. 

ಶ್ರೀಮಂತ ರಾಷ್ಟ್ರಗಳಲ್ಲಿ ಸುಖದಾಯಕ ಜೀವನ ಕ್ರಮಗಳನ್ನು ಅನುಭವಿಸುತ್ತಿರುವವರಲ್ಲಿ ಹೆಚ್ಚಿನ ಜನರು ಹೃದಯ ಸಂಬಂಧಿತ ಕಾಯಿಲೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ ಕಾಯಿಲೆಗಳಿಗೆ ತುತ್ತಾಗುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಯುಎಚ್‌ಒ) ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ. 

ಜಗತ್ತಿನ 168 ರಾಷ್ಟ್ರಗಳ 19 ಲಕ್ಷ ಜನರ ನಿತ್ಯದ ಚುಟುವಟಿಕೆಗಳನ್ನು ಗಮನಿಸಿ 2016ರಲ್ಲಿ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ದಾಖಲಾಗಿದೆ. ’ದಿ ಲ್ಯಾನ್‌ಸೆಟ್‌ ಗ್ಲೋಬಲ್‌ ಹೆಲ್ತ್‌ ಜರ್ನಲ್‌’ ವಿಶ್ವದಲ್ಲಿ ಅನುಸರಿಸುತ್ತಿರುವ ವ್ಯಾಯಾಮ ಮಟ್ಟದ ಕುರಿತ ಅಧ್ಯಯನ ಪ್ರಕಟಿಸಿದೆ. 

ದೈಹಿಕ ವ್ಯಾಯಾಮ ಕೊರತೆಯಿಂದಾಗಿ ಜೀವಕ್ಕೆ ಎರವಾಗುವಂತಹ ಕಾಯಿಲೆಗಳು ದೇಹವನ್ನು ಆವರಿಸುತ್ತಿವೆ ಹಾಗೂ ಬದುಕಿನ ಗುಣಮಟ್ಟ, ಮಾನಸಿಕ ಆರೋಗ್ಯದ ಮೇಲೂ ದುಷ್ಟರಿಣಾಮ ಬೀರುತ್ತಿರುವುದಾಗಿ ವಿವರಿಸಲಾಗಿದೆ. ವಾರಕ್ಕೆ ಕನಿಷ್ಠ 150 ನಿಮಿಷಗಳ ವ್ಯಾಯಮ ಅಭ್ಯಾಸ ರೂಢಿಸಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ನಿತ್ಯ ಕನಿಷ್ಠ 20 ನಿಮಿಷ ನಡಿಗೆ, ಈಜು ಅಥವಾ ಸೈಕ್ಲಿಂಗ್‌ ಮಾಡಬಹುದು ಅಥವಾ ಓಟ ಇಲ್ಲವೇ ಗುಂಪು ಕ್ರೀಡೆಗಳಲ್ಲಿ ವಾರಕ್ಕೆ ಕನಿಷ್ಠ 75 ನಿಮಿಷಗಳು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದು ಅಗತ್ಯ ಎಂದಿದೆ. 

ನಿಯಮಿತ ವ್ಯಾಯಾಮದಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಸಾಕಷ್ಟು ಅಭಿಯಾನಗಳು ನಡೆಯುತ್ತಿದ್ದರೂ, 2001ರಿಂದ ದೈಹಿಕ ಚಟುವಟಿಕೆ ಮಟ್ಟದಲ್ಲಿ ಯಾವುದೇ ಬೆಳವಣಿಗೆ ಆಗದಿರುವುದನ್ನು ಸಂಶೋಧಕರು ಗಮನಿಸಿದ್ದಾರೆ. ಮಾಹಿತಿಗಳ ಪ್ರಕಾರ, 140 ಕೋಟಿ ಜನರು ಅಗತ್ಯವಿರುವಷ್ಟು ದೈಹಿಕ ಚಟುವಟಿಕೆ ನಡೆಸುತ್ತಿಲ್ಲ. ದೈಹಿಕ ಕಸರತ್ತಿನಲ್ಲಿ ತೊಡುವಂತೆ ಜನರನ್ನು ಪ್ರೋತ್ಸಾಹಿಸಲು ನಾವು ಹೆಚ್ಚಿನದನ್ನು ಮಾಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ರೆಜಿನಾ ಗಥೋಲ್ಡ್‌ ಅಭಿಪ್ರಾಯ ಪಟ್ಟಿದ್ದಾರೆ. 

ಶ್ರೀಮಂತ ರಾಷ್ಟ್ರಗಳಲ್ಲಿಯೇ ಅಧಿಕ

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದರೆ, ಅಧಿಕ ವರಮಾನ ಗಳಿಸುತ್ತಿರುವ ರಾಷ್ಟ್ರಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಸೇರಿ ಅನೇಕ ಮಾರಣಾಂತಿಕ ಕಾಯಿಲೆಗಳ ಪ್ರಮಾಣ ದುಪ್ಪಟ್ಟು. ಶ್ರೀಮಂತ ರಾಷ್ಟ್ರಗಳಲ್ಲಿ ಜನರು ಬಹುಸಮಯವನ್ನು ಒಳಾಂಗಣದಲ್ಲಿಯೇ ಕಳೆಯುತ್ತಿದ್ದಾರೆ. ಕಚೇರಿ ಕೆಲಸಗಳಲ್ಲಿ ಅಧಿಕ ಸಮಯ, ಅಧಿಕ ಕ್ಯಾಲೊರಿ ಹೊಂದಿರುವ ಆಹಾರಗಳ ಸೇವನೆ, ಇದರೊಂದಿಗೆ ಅತಿ ಕಡಿಮೆ ದೈಹಿಕ ಚಟುವಟಿಕೆಯಿಂದ ಆರೋಗ್ಯ ಮಟ್ಟ ಕುಸಿಯುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. 

ನಗರ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುವವರು ಕೆಲಸಗಳ ಒತ್ತಡದಲ್ಲಿ ವ್ಯಾಯಾಮವನ್ನು ಬದಿಗೊತ್ತಿ ಬದುಕುತ್ತಿದ್ದಾರೆ. ಕುವೈತ್‌, ಅಮೆರಿಕನ್‌ ಸಾಮೋಆ, ಸೌದಿ ಅರೇಬಿಯಾ ಮತ್ತು ಇರಾಕ್‌ ರಾಷ್ಟ್ರಗಳ ವಯಸ್ಕರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ದೈಹಿಕ ಆಲಸ್ಯ ಹೊಂದಿದ್ದಾರೆ. ಕುವೈತ್‌ನಲ್ಲಿ ಸಾಮಾನ್ಯವಾಗಿ 45 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯನ್ನು ಹೊಂದಿದ್ದು, ಶೇ 67ರಷ್ಟು ಮಂದಿ ವ್ಯಾಯಾಮದ ಸಹವಾಸದಿಂದ ದೂರ ಉಳಿದಿದ್ದಾರೆ. 

ಮನೆಯ ಕೆಲಸಗಳು, ಮಕ್ಕಳನ್ನು ಗಮನಿಸುವುದರಲ್ಲಿ ಪೂರ್ಣ ಸಮಯ ಕಳೆದುಕೊಳ್ಳುವ ಕಾರಣ ವ್ಯಾಯಾಮ ಅವರ ಪಾಲಿಗೆ ಕನಸಿನ ಮಾತಾಗಿದೆ. ಬಾಂಗ್ಲಾದೇಶ, ಭಾರತ, ಎರಿಟ್ರಿಯಾ, ಇರಾಕ್‌ ಹಾಗೂ ಫಿಲಿಪ್ಪೀನ್ಸ್‌ಗಳಲ್ಲಿ ಪುರಷರಿಗಿಂತ ಮಹಿಳೆಯರು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವ ಪ್ರಯಾಣ ಅತಿ ಕಡಿಮೆ ಎನ್ನಲಾಗಿದೆ. 

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು