ಶುಕ್ರವಾರ, ಫೆಬ್ರವರಿ 21, 2020
24 °C

ಕೊರೊನಾಗೆ 491 ಸಾವು: ಚೀನಾದ 31 ಪ್ರಾಂತಗಳಿಗೆ ಹರಡಿದ ಸೋಂಕು

ಪಿಟಿಐ Updated:

ಅಕ್ಷರ ಗಾತ್ರ : | |

Corona virus

ಬೀಜಿಂಗ್: ಬೀಜಿಂಗ್: ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ 490ಕ್ಕೆ ತಲುಪಿದ್ದು, 24,324 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಬುಧವಾರ ಘೋಷಿಸಿದ್ದಾರೆ.

‘ದೇಶದ 31 ಪ್ರಾಂತಗಳಲ್ಲಿ ಸೋಂಕು ಹರಡಿದೆ. ಮಂಗಳವಾರ 65 ಜನರು ಮೃತಪಟ್ಟಿದ್ದು, ಇವರೆಲ್ಲಾ ಹ್ಯುಬೆ ಪ್ರಾಂತ ಹಾಗೂ ಅದರ ರಾಜಧಾನಿ ವುಹಾನ್‌ಗೆ ಸೇರಿದವರು. 431 ಜನರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. 262 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ವರದಿ ತಿಳಿಸಿದೆ.

10 ಮಂದಿಗೆ ಸೋಂಕು (ಟೋಕಿಯೊ, ಎಎಫ್‌ಪಿ): ‘ಪ್ರವಾಸಿ ಹಡಗು ಡೈಮಂಡ್ ಪ್ರಿನ್ಸೆಸ್‌ನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ 10 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ‍ಪಟ್ಟಿದೆ’ ಎಂದು ಜಪಾನ್‌ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಹಡಗಿನಲ್ಲಿ 3711 ಪ್ರಯಾಣಿಕರಿದ್ದು, ಇವರಲ್ಲಿ 273 ಜನರಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ.

ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಹಾಂಗ್‌ಕಾಂಗ್‌ನಲ್ಲಿ ಇಳಿದ ಬಳಿಕ ಆತನಲ್ಲಿ ಕೊರೊನಾ ಸೋಂಕು ಇರುವುದು ತಿಳಿದುಬಂದಿತ್ತು. ಇದಾದ ಬಳಿಕ ಹಡಗಿನಲ್ಲಿ ಸೋಂಕು ಪತ್ತೆ ಪ್ರಕ್ರಿಯೆ ನಡೆಸಲಾಗುತ್ತಿದೆ.

ನವಜಾತ ಶಿಶುವಿಗೆ ಕೊರೊನಾ ಸೋಂಕು

ವುಹಾನ್‌ನಲ್ಲಿ ಜನಿಸಿದ ಶಿಶುವೊಂದಕ್ಕೆ 30 ತಾಸುಗಳಲ್ಲಿಯೇ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.

‘ಸೋಂಕಿತರಲ್ಲಿ ಈ ಶಿಶುವೇ ಅತ್ಯಂತ ಕಿರಿಯ ವಯಸ್ಸಿನದ್ದಾಗಿದೆ. ತಾಯಿ ಗರ್ಭಿಣಿಯಾಗಿದ್ದ ವೇಳೆ ಅಥವಾ ಜನಿಸಿದ ಬಳಿಕ ಶಿಶುವಿಗೆ ಸೋಂಕು ತಗುಲಿರಬಹುದು. ಮಗುವಿಗೆ ಜನ್ಮ ನೀಡುವ ಮೊದಲು ತಾಯಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು’ ಎಂದು ತಜ್ಞರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಲಾಗಿದೆ.

‘ಸೋಂಕಿನಿಂದ ಮೃತಪಟ್ಟವರಲ್ಲಿ ಶೇ 80 ಜನರು 60 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. 90 ವರ್ಷದ ವ್ಯಕ್ತಿ ಸೋಂಕಿತರಲ್ಲಿ ಹಿರಿಯ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಸೋಂಕು ತಡೆಗೆ ಕ್ರಮ–ಟ್ರಂಪ್: ‘ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೀನಾ ಜತೆ ಸೇರಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಕೊರೊನಾದಿಂದ ಅಮೆರಿಕದ ಪ್ರಜೆಗಳನ್ನು ರಕ್ಷಿಸಲು ನಮ್ಮ ಆಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ’ ಎಂದು ತಿಳಿಸಿದ್ದಾರೆ.

ಹಾಂಗ್‌ಕಾಂಗ್‌: ಪ್ರವಾಸಿಗರಿಗೆ ಪ್ರತ್ಯೇಕ ನಿಗಾ ಕಡ್ಡಾಯ

ಹಾಂಗ್‌ಕಾಂಗ್: ‘ಕೊರೊನಾ ವೈರಸ್ ಸೋಂಕು ಹರಡಿರುವುದರಿಂದಾಗಿ, ಚೀನಾದಿಂದ ಹಾಂಗ್‌ಕಾಂಗ್‌ಗೆ ಬರುವ ಎಲ್ಲರನ್ನೂ ಕಡ್ಡಾಯ ಎರಡು ವಾರಗಳ ಅವಧಿಗೆ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗುತ್ತದೆ’ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರಿ ಲ್ಯಾಂ ತಿಳಿಸಿದ್ದಾರೆ.

‘ಈ ಕುರಿತು ಶೀಘ್ರ ಹೆಚ್ಚಿನ ಮಾಹಿತಿ ತಿಳಿಸಲಾಗುವುದು. ಕ್ರಮ ಕಠಿಣ ಎನಿಸಬಹುದು. ಆದರೆ ಇದೇ 8ರಿಂದ ಈ ನಿಯಮ ಜಾರಿಗೆ ಬರುತ್ತದೆ ಎಂದು ತಿಳಿದ ಬಳಿಕ ಇಲ್ಲಿಗೆ ಭೇಟಿ ನೀಡುವವರ ಪ್ರಮಾಣ ಕಡಿಮೆಯಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ವೇತನರಹಿತ ರಜೆಗೆ ಸೂಚನೆ: ಹಾಂಗ್‌ಕಾಂಗ್‌ನ ವಿಮಾನಯಾನ ಸಂಸ್ಥೆ ಕ್ಯಾಥೆ ಪೆಸಿಫಿಕ್ ತನ್ನ 27 ಸಾವಿರ ಸಿಬ್ಬಂದಿಗೆ ಮೂರು ವಾರಗಳ ಅವಧಿಗೆ ವೇತನರಹಿತ ರಜೆ ಪಡೆಯುವಂತೆ ಸೂಚಿಸಿದೆ.

‘ಕೊರೊನಾ ವೈರಸ್‌ ಸೋಂಕು ಹರಡಿರುವುದರಿಂದ ಸಂಸ್ಥೆ ಬಿಕ್ಕಟ್ಟು ಎದುರಿಸುತ್ತಿದೆ. ಪ್ರಸ್ತುತ ಇರುವ ಸವಾಲುಗಳನ್ನು ಎದುರಿಸಲು ಹಿರಿಯರು ಸೇರಿದಂತೆ ಎಲ್ಲಾ ಉದ್ಯೋಗಿಗಳು ಈ ನಿಟ್ಟಿನಲ್ಲಿ ಸಹಕರಿಸುತ್ತಾರೆ ಎನ್ನುವ ಭರವಸೆ ಇದೆ’ ಎಂದು ಸಿಇಒ ಆಗಸ್ಟಸ್ ಟ್ಯಾಂಗ್ ಅವರು ಜಾಲತಾಣದಲ್ಲಿ ವಿಡಿಯೊ ಸಂದೇಶ ಪೋಸ್ಟ್ ಮಾಡಿದ್ದಾರೆ.

ಚೀನಾದಲ್ಲಿನ ಘಟಕ ತಾತ್ಕಾಲಿಕ ಸ್ಥಗಿತ: ಏರ್‌ಬಸ್

ಪ್ಯಾರಿಸ್: ವಿಮಾನ ತಯಾರಿಕಾ ಸಂಸ್ಥೆ ಯುರೋಪ್‌ನ ‘ಏರ್‌ಬಸ್‘ ಚೀನಾ ರಾಜಧಾನಿ ಬೀಜಿಂಗ್ ಸಮೀಪದ ತಿಯಾಂಜಿನ್‌ನಲ್ಲಿನ ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಿದೆ.

‘ಕೊರೊನಾ ವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಪ್ರಾದೇಶಿಕವಾಗಿ ಹಾಗೂ ವಿಶ್ವದಾದ್ಯಂತ ಇರುವ ಪ್ರವಾಸ ನಿರ್ಬಂಧದಿಂದ ಕೆಲವು ತಾಂತ್ರಿಕ ಸವಾಲುಗಳು ಎದುರಾಗಿವೆ. ಇದರಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಏರ್‌ಬಸ್ ತಿಳಿಸಿದೆ.

ಬಾಲಿ ದ್ವೀಪದಲ್ಲಿ ಸಿಲುಕಿದ ಚೀನಾ ಪ್ರವಾಸಿಗರು

ಬಾಲಿ: ಚೀನಾಗೆ ತೆರಳುವ ಹಾಗೂ ಚೀನಾದಿಂದ ಬರುವ ವಿಮಾನಗಳ ಹಾರಾಟವನ್ನು ಬುಧವಾರ ಮಧ್ಯರಾತ್ರಿಯಿಂದ ನಿಷೇಧಿಸಲಾಗಿದೆ ಎಂದು ಇಂಡೊನೇಷ್ಯಾ ಸರ್ಕಾರ ತಿಳಿಸಿದೆ. ಇದರಿಂದಾಗಿ ಬಾಲಿ ದ್ವೀಪದಲ್ಲಿ ಪ್ರವಾಸದಲ್ಲಿರುವ ಚೀನಾದ ಸುಮಾರು 5 ಸಾವಿರ ಜನರು ಅಲ್ಲಿಯೇ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

‘ವಿಮಾನಗಳ ಹಾರಾಟ ಸ್ಥಗಿತದಿಂದಾಗಿ, ಚೀನಾ ಪ್ರವಾಸಿಗರು ಹೆಚ್ಚಿನ ಅವಧಿಗೆ ವಾಸ್ತವ್ಯ ಹೂಡಬೇಕಾಗುತ್ತದೆ. ಬಾಲಿಯ ವಲಸೆ ಕಚೇರಿ ಇದಕ್ಕೆ ನೆರವು ನೀಡುವ ಭರವಸೆ ಇದೆ’ ಎಂದು ಡೆನ್‌ಪಸಾರ್‌ನಲ್ಲಿನ ಚೀನಾದ ರಾಯಭಾರ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು