ಶನಿವಾರ, ಫೆಬ್ರವರಿ 22, 2020
19 °C
ಚೀನಾದಲ್ಲಿ 563ಕ್ಕೆ ತಲುಪಿದ ಮೃತರ ಸಂಖ್ಯೆ

ಕೊರೊನಾ ವೈರಸ್ ಸೋಂಕು: ಚೀನಾದಲ್ಲಿ ಒಂದೇ ದಿನ 73 ಜನ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

coronavirus

ಬೀಜಿಂಗ್‌: ಕೊರೊನಾ ವೈರಸ್‌ ಸೋಂಕಿನಿಂದ ಚೀನಾದಲ್ಲಿ ಬುಧವಾರ ಒಂದೇ ದಿನದಲ್ಲಿ 73 ಜನರು ಬಲಿಯಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 563ಕ್ಕೆ ಏರಿಕೆಯಾಗಿದೆ. 

ಸೋಂಕು ವ್ಯಾಪಿಸಲು ಪ್ರಾರಂಭವಾದ ಬಳಿಕ ಒಂದೇ ದಿನದಲ್ಲಿ ಇಷ್ಟು ರೋಗಿಗಳು ಮೃತಪಟ್ಟಿರುವುದು ಇದೇ ಮೊದಲಾಗಿದೆ. ಸೋಂಕು ದೃಢಪಟ್ಟವರ ಸಂಖ್ಯೆಯೂ 28,018ಕ್ಕೆ ಏರಿಕೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ.

ಬುಧವಾರ ಮೃತಪಟ್ಟ 73 ಜನರ ಪೈಕಿ ಹ್ಯುಬೆ ಪ್ರಾಂತ್ಯದ 70 ಜನರಿದ್ದಾರೆ. ಕೊರೊನಾ ಸೋಂಕಿನ ಮೊದಲ ಪ್ರಕರಣ ಇದೇ ಪ್ರಾಂತ್ಯದ ವುಹಾನ್‌ನಲ್ಲಿ ಕಾಣಿಸಿಕೊಂಡಿತ್ತು. ಬುಧವಾರ ಒಂದೇ ದಿನ 5,328 ಜನರಲ್ಲಿ ಸೋಂಕಿನಗುಣಲಕ್ಷಣಗಳು ಕಂಡುಬಂದಿದ್ದು, ಇದರಲ್ಲಿ ಹ್ಯುಬೆಯ 2,987 ಜನರಿದ್ದರು ಎಂದು ಆಯೋಗ ತಿಳಿಸಿದೆ. ಬುಧವಾರದ ಅಂತ್ಯಕ್ಕೆ ಹಾಂಗ್‌ಕಾಂಗ್‌ನಲ್ಲಿ 21 ಜನರಲ್ಲಿ, ಮಕಾವ್‌ನ 10 ಜನರಲ್ಲಿ ಹಾಗೂ ತೈವಾನ್‌ನ 11 ಜನರಲ್ಲಿ ಸೋಂಕು ದೃಢಪಟ್ಟಿದೆ.

ವಿದೇಶಗಳಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 182ಕ್ಕೆ ಏರಿಕೆಯಾಗಿದ್ದು, ಫಿಲಿಪ್ಪಿನ್ಸ್‌ನಲ್ಲಿ ಸೋಂಕಿನಿಂದ ಸಾವು ಉಂಟಾದ ಮೊದಲ ಪ್ರಕರಣ ದಾಖಲಾಗಿದೆ.

ಟಾಯ್ಲೆಟ್ ಪೇಪರ್ ಖರೀದಿಗೆ ನೂಕುನುಗ್ಗಲು: ಸೋಂಕು ಹರಡಲು ಪ್ರಾರಂಭವಾದ ಬಳಿಕ ಹಾಂಗ್‌ಕಾಂಗ್‌–ಚೀನಾ ಸಂಪರ್ಕದ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ. ಇದರ ಬೆನ್ನಲ್ಲೇ ಟಾಯ್ಲೆಟ್‌ ಪೇಪರ್‌ ಸೇರಿದಂತೆ ಅಗತ್ಯವಸ್ತುಗಳ ಕೊರತೆ ಉಂಟಾಗಲಿದೆ ಎನ್ನುವ ವದಂತಿ ಆನ್‌ಲೈನ್‌ನಲ್ಲಿ ಹರಡುತ್ತಿದ್ದು, ಸಾವಿರಾರು ಜನರು ಸೂಪರ್‌ ಮಾರ್ಕೆಟ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಹತ್ತಾರು ಪ್ಯಾಕೆಟ್‌ ಟಾಯ್ಲೆಟ್‌ ಪೇಪರ್‌ ಖರೀದಿಸುತ್ತಿದ್ದಾರೆ. ಅಕ್ಕಿ ಹಾಗೂ ಪಾಸ್ತಾವನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಖರೀದಿಸುತ್ತಿದ್ದಾರೆ.

ಆಸ್ಟ್ರೇಲಿಯಾದ ವಿ.ವಿಗಳಿಗೆ ನಷ್ಟ!

ಸಿಡ್ನಿ: ಕೊರೊನಾ ವೈರಸ್‌ ಸೋಂಕು ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡುವ ಸಾಧ್ಯತೆ ಇದೆ. ಸರ್ಕಾರವು ಫೆ.1ರಿಂದ ವಿದೇಶಿಗರು ಹಾಗೂ ಚೀನಾದಲ್ಲಿ ವಾಸಿಸುತ್ತಿರುವ ಆಸ್ಟ್ರೇಲಿಯಾ ಪ್ರಜೆಗಳು ಬಾರದಂತೆ ಪ್ರವಾಸ ನಿರ್ಬಂಧ ಹೇರಿದೆ. ಹೀಗಾಗಿ ಇಲ್ಲಿಗೆ ಶಿಕ್ಷಣಕ್ಕಾಗಿ ಬರುವ ಚೀನಾದ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುವ ಮುನ್ಸೂಚನೆ ಇದ್ದು, ಇದರಿಂದ ವಿಶ್ವವಿದ್ಯಾಲಯಗಳಿಗೆ ಅಂದಾಜು ₹14,231 ಕೋಟಿ ನಷ್ಟವಾಗುವ ಸಾಧ್ಯತೆಯಿದೆ.       

ವೈಮಾನಿಕ ಪ್ರದರ್ಶನದಲ್ಲಿ ಚೀನಾ ಭಾಗಿ 

ಸಿಂಗಪುರ: ಚೀನಾದಿಂದ ಬರುವ ಪ್ರವಾಸಿಗರ ಪ್ರವೇಶಕ್ಕೆ ಸಿಂಗಪುರ ನಿಷೇಧ ಹೇರಿದೆ. ಹೀಗಿದ್ದರೂ, ಮುಂದಿನ ವಾರ ನಡೆಯಲಿರುವ ಸಿಂಗಪುರ ವೈಮಾನಿಕ ಪ್ರದರ್ಶನದಲ್ಲಿ ಚೀನಾದ ವಾಯುಸೇನೆ ಭಾಗವಹಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಸಿಂಗಪುರಕ್ಕೆ ಬರಲು ವಾಯುಸೇನೆಯ ಏರೋಬ್ಯಾಟಿಕ್ಸ್‌ ತಂಡ ‘ದಿ ಬಾ ಯಿ’ಗೆ ಅನುಮತಿ ನೀಡಲಾಗಿದೆ. ಸಿಂಗಪುರಕ್ಕೆ ಬರುವ ಮುನ್ನವೇ ತಂಡದ ಸದಸ್ಯರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು