ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಹಬ್ಬಕ್ಕೆ ರಾಜಧಾನಿ ಸಜ್ಜು

ಹೊರಗಿನವರ ಪ್ರವೇಶ ತಡೆಗೆ 81 ಚೆಕ್‌ಪೋಸ್ಟ್
Last Updated 10 ಮೇ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಗುರುವಾರ ಸಂಜೆ 6 ಗಂಟೆಗೆ ಅಂತ್ಯಗೊಂಡಿದ್ದು, ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಆ ಕ್ಷೇತ್ರದಿಂದ ಹೊರ ಹೋಗಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎಂ.ಮಹೇಶ್ವರ ರಾವ್, ‘ಮತದಾನಕ್ಕೆ 48 ಗಂಟೆಗಳ ಮುನ್ನವೇ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಆನಂತರ ಅಭ್ಯರ್ಥಿಗಳು ಸಭೆ, ಮೆರವಣಿಗೆಗಳನ್ನು ಮಾಡುವಂತಿಲ್ಲ. ಮನೆ ಮನೆಗೆ ತೆರಳಿ ಮತಯಾಚಿಸಬಹುದು. ನಿಯಮ ಉಲ್ಲಂಘಿಸಿದರೆ ಜನಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

‘ಹೊರ ರಾಜ್ಯಗಳ ರಾಜಕೀಯ ನಾಯಕರು ಪ್ರಚಾರದ ಉದ್ದೇಶಕ್ಕಾಗಿ ನಗರಕ್ಕೆ ಬರುವಂತಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಹೋಟೆಲ್, ಲಾಡ್ಜ್ ಹಾಗೂ ಅತಿಥಿ ಗೃಹಗಳಲ್ಲಿ ಪರಿಶೀಲನೆ ನಡೆಸಲಾಗುವುದು. ‌ಹೊರಗಿನವರ ಪ್ರವೇಶ ತಡೆಯಲು 81 ಚೆಕ್‌ಪೋಸ್ಟ್‌
ಗಳನ್ನು ಹಾಕಲಾಗಿದೆ.'

‘ಈ 48 ತಾಸುಗಳ ಅವಧಿಯಲ್ಲಿ ಸಮೀಕ್ಷೆ‌, ಅಭ್ಯರ್ಥಿಗಳ ಪ್ರಚಾರ.. ಸೇರಿದಂತೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂಥ ಯಾವುದೇ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುವಂತಿಲ್ಲ’ ಎಂದರು.

ನಿಷೇಧಾಜ್ಞೆ, ಮದ್ಯ ನಿರ್ಬಂಧ: ಗುರುವಾರ ಸಂಜೆ 6ರಿಂದ ಮೇ 13ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಐದಕ್ಕಿಂತ ಹೆಚ್ಚು ಜನ ಗುಂಪುಗೂಡುವಂತಿಲ್ಲ. ಹಾಗೆಯೇ, ಮೇ 12ರ (ಮತದಾನದ ದಿನ) ಮಧ್ಯರಾತ್ರಿವರೆಗೆ ಹಾಗೂ ಮೇ 15ರಂದು (ಮತ ಎಣಿಕೆ ದಿನ) ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಪೂಜೆ ಮಾಡಿದರೆ ಕ್ರಮ!: ಮತಗಟ್ಟೆಯಿಂದ 100 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ಪ್ರಚಾರ ನಡೆಸುವಂತಿಲ್ಲ. ಮತಗಟ್ಟೆ ಬಳಿ ಪೂಜೆ ಮಾಡುವುದು, ಅಗರಬತ್ತಿ ಹಚ್ಚುವುದು, ತೆಂಗಿನಕಾಯಿ ಒಡೆಯುವುದನ್ನು ಮಾಡಿದರೆ ಆಯೋಗದ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಲಿದ್ದಾರೆ.

ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು 200 ಮೀಟರ್ ದೂರದಲ್ಲಿ ಟೇಬಲ್, ಎರಡು ಕುರ್ಚಿ ಹಾಗೂ ಸಣ್ಣ ಬ್ಯಾನರ್ ಹಾಕಿಕೊಳ್ಳಬಹುದು. ಶಾಮಿಯಾನ, ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ.

ಅಭ್ಯರ್ಥಿ, ಚುನಾವಣಾ ಏಜೆಂಟ್ ಹಾಗೂ ಕಾರ್ಯಕರ್ತರು ತಲಾ ಒಂದೊಂದು ವಾಹನ ಬಳಸಲು ಅನುಮತಿ ನೀಡಲಾಗುವುದು. ಆದರೆ, ಅದರಲ್ಲಿ ಚಾಲಕ ಸೇರಿ ಐದಕ್ಕಿಂತ ಹೆಚ್ಚು ಮಂದಿ ಇರುವಂತಿಲ್ಲ. ವಾಹನ ಬಳಕೆಗೆ ಪಡೆದಿರುವ ಅನುಮತಿ ಪತ್ರವನ್ನು ಮುಂಭಾಗದ ಗಾಜಿನ ಮೇಲೆ ಅಂಟಿಸುವುದು ಕಡ್ಡಾಯ.

ವಿಶೇಷ ವ್ಯವಸ್ಥೆ: ‘ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ 100 ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗುವುದು. ಅಲ್ಲಿ ಮಹಿಳಾ ಸಿಬ್ಬಂದಿಯೇ ಇರಲಿದ್ದಾರೆ. ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆ ದಿನ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಿ ಆದೇಶ ಹೊರಡಿಸಲಾಗಿದೆ’ ಎಂದು ಮಹೇಶ್ವರ್‌ರಾವ್ ಮಾಹಿತಿ ನೀಡಿದರು.

‘ಜಯನಗರ ಕ್ಷೇತ್ರ ಹೊರತುಪಡಿಸಿ ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿ ಶೇ 80ರಷ್ಟು ಮತಚೀಟಿ ಹಾಗೂ ವೋಟರ್‌ ಗೈಡ್ ವಿತರಣೆ ಮಾಡಲಾಗಿದೆ. ಶುಕ್ರವಾರ ಸಂಜೆಯೊಳಗೆ ಎಲ್ಲರಿಗೂ ತಲುಪಿಸುವ ಗುರಿ ಹೊಂದಿದ್ದೇವೆ. ಪ್ರತಿ ಬೂತ್‌ ಮಟ್ಟದಲ್ಲೂ ಮತದಾನದ ಚೀಟಿ ದೊರೆಯಲಿದೆ’ ಎಂದರು.

ಪೊಲೀಸರು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಚಾಲಕರಿಗೆ ಪೋಸ್ಟಲ್‌ ಬ್ಯಾಲೆಟ್ ಪೇಪರ್‌ (ಅಂಚೆ ಮತಪತ್ರ) ಮೂಲಕ ಮತದಾನದ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಕಾರ್ಯಾಚರಣೆ

ನೀತಿಸಂಹಿತೆ ಜಾರಿಯಾದ ದಿನನಿಂದ ಈವರೆಗೆ ವಿವಿಧ ಸ್ಕ್ವಾಡ್‌ಗಳು ₹ 6.84 ಕೋಟಿ ನಗದು, ₹5.29 ಕೋಟಿ ಮೌಲ್ಯದ 11,699 ಲೀಟರ್ ಮದ್ಯ ಹಾಗೂ ₹ 19,43 ಕೋಟಿ ಮೌಲ್ಯದ ಇತರೆ ಸರಕು ಜಪ್ತಿ ಮಾಡಿವೆ.

ಅಂಕಿ ಅಂಶ

* 431 ಬೆಂಗಳೂರಿನಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು

*‌ 91 ಲಕ್ಷ ಮತದಾರರು

* 8,489 ಮತಗಟ್ಟೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT