ಶುಕ್ರವಾರ, ಜೂನ್ 5, 2020
27 °C

ಮಲೇರಿಯಾ ನಿರೋಧಕ ಔಷಧ ಪೂರೈಸದಿದ್ದರೆ ಪ್ರತೀಕಾರ: ಭಾರತಕ್ಕೆ ಅಮೆರಿಕ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಕೊರೊನಾ ವೈರಸ್‌ ರೋಗಿಗಳ ಚಿಕಿತ್ಸೆಗೆ ನೀಡಲಾಗುವ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತುವಿನ ಮೇಲಿನ ನಿರ್ಬಂಧವನ್ನು ತೆರವುಗೊಳಿಸದೇ ಹೋದರೆ ಪ್ರತೀಕಾರ ತೀರಿಸಿಕೊಳ್ಳುವ ಮುನ್ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ. 

ಇದನ್ನೂ ಓದಿ: ಕೊರೊನಾ ಔಟ್‌ಬ್ರೇಕ್: ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧ ರಫ್ತು ನಿಷೇಧಿಸಿದ ಕೇಂದ್ರ

ವೈಟ್‌ ಹೌಸ್‌ನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಡೊನಾಲ್ಡ್‌ ಟ್ರಂಪ್‌, ಅಮೆರಿಕದೊಂದಿಗೆ ಭಾರತದ ಸಂಬಂಧ ಉತ್ತಮವಾಗಿದೆ. ಮಲೇರಿಯಾ ನಿರೋಧಕ ಔಷಧ ಬೇಕೆಂಬ ಅಮೆರಿಕ ಕೋರಿಕೆಯ ಹೊರತಾಗಿಯೂ ಭಾರತದ ಔಷಧ ರಫ್ತುವಿನ ಮೇಲಿನ ನಿರ್ಬಂಧವನ್ನು ತೆರವು ಮಾಡದೇ ಇರುವುದಕ್ಕೆ ನನಗೆ ಕಾರಣ ತಿಳಿಯುತ್ತಿಲ್ಲ. ಭಾರತದ ನಡೆ ನನಗೆ ಆಶ್ಚರ್ಯ ತರಿಸಿದೆ. ಹಾಗೇನಾದರೂ ಭಾರತ ಮಲೇರಿಯಾ ನಿರೋಧಕ ಔಷಧ ಪೂರೈಸದೇ ಹೋದರೆ ಅದಕ್ಕೆ ಪ್ರತಿಯಾಗಿ ಪ್ರತೀಕಾರವಂತೂ ಇದ್ದೇ ಇರುತ್ತದೆ. ಅಂಥದ್ದೊಂದು ನಿರ್ಧಾರವನ್ನು ಅಮೆರಿಕ ಕೈಗೊಳ್ಳಬಾರದೇಕೆ?’ ಎಂದು ಟ್ರಂಪ್‌ ಪ್ರಶ್ನಿಸಿದ್ದಾರೆ. 

ದೇಶದ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಈಗಾಗಲೇ ಸಲ್ಲಿಸಿರುವ ಬೇಡಿಕೆಯಂತೆ ಹೈಡ್ರಾಕ್ಸಿಕ್ಲೊರೋಕ್ವಿನ್‌ ಮಾತ್ರೆಗಳ ರಫ್ತಿಗೆ ಸಹಕರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದರು. 

‘ಪ್ರಧಾನಿ ಮೋದಿ ಅವರೊಂದಿಗೆ ಶನಿವಾರ ನಾನು ಮಾತನಾಡಿ, ಮಲೇರಿಯಾ ಚಿಕಿತ್ಸೆಗಾಗಿ ಬಳಸುವ ಈ ಮಾತ್ರೆಗಳನ್ನು ಅಮೆರಿಕಕ್ಕೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ. ಭಾರತ ದೊಡ್ಡ ಪ್ರಮಾಣದಲ್ಲಿ ಈ ಮಾತ್ರೆಯನ್ನು ಉತ್ಪಾದಿಸುತ್ತದೆ. ಹೀಗಾಗಿ ನನ್ನ ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ’ ಎಂದು ಟ್ರಂಪ್‌ ಹೇಳಿದ್ದರು. 

 ಅಮೆರಿಕದಲ್ಲಿ 3 ಲಕ್ಷಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 8 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 

ಮಲೇರಿಯಾಕ್ಕೆ ಚಿಕಿತ್ಸೆ ನೀಡಲು ವ್ಯಾಪಕವಾಗಿ ಬಳಸುವ ಈ ಮಾತ್ರೆಯ ರಫ್ತನ್ನು ಭಾರತ ನಿಷೇಧಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು