ಗುರುವಾರ , ಏಪ್ರಿಲ್ 9, 2020
19 °C
ಅಮೆರಿಕದ ಸರಕುಗಳ ಮೇಲೆ ಸುಂಕ: ಟ್ರಂಪ್‌ ಮತ್ತೆ ಆಕ್ಷೇಪ

ಭಾರತದ ಹೊಡೆತ ಬಲು ಜೋರು: ಟ್ರಂಪ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ (ಪಿಟಿಐ): ‘ಭಾರತ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ವ್ಯಾಪಾರ ವಿಚಾರವಾಗಿ ಮಾತುಕತೆ ನಡೆಸಲಾಗುವುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

‘ಭಾರತವು ಕಳೆದ ಹಲವು ವರ್ಷಗಳಿಂದ ವ್ಯಾಪಾರ ವಿಚಾರದಲ್ಲಿ ನಮಗೆ ಭಾರಿ ಹೊಡೆತ ನೀಡುತ್ತಿದೆ. ಜಗತ್ತಿನ ಯಾವ ರಾಷ್ಟ್ರವೂ ವಿಧಿಸದಷ್ಟು ದುಬಾರಿ ಸುಂಕವನ್ನು ಅವರು ನಮ್ಮ ಉತ್ಪನ್ನಗಳ ಮೇಲೆ ವಿಧಿಸುತ್ತಿದ್ದಾರೆ. ಈ ಬಗ್ಗೆ ನಾವು ಚರ್ಚಿಸಬೇಕಾಗಿದೆ. ಮುಂದಿನ ವಾರ ನಾನು ಭಾರತಕ್ಕೆ ಹೋಗುತ್ತಿದ್ದೇನೆ. ಅಲ್ಲಿ ವ್ಯಾಪಾರ ವಿಚಾರವಾಗಿ ಮಾತುಕತೆ ನಡೆಸಲಾಗುವುದು. ನನ್ನ ಭೇಟಿಯ ಬಳಿಕ ‘ಮೇಡ್‌ ಇನ್‌ ಯುಎಸ್‌ಎ’ ಲೇಬಲ್‌ ಹೊಂದಿರುವ ಇನ್ನಷ್ಟು ಉತ್ಪನ್ನಗಳು ಭಾರತದಲ್ಲಿ ಲಭ್ಯವಾಗಲಿವೆ’ ಎಂದು ಅವರು ಕೊಲೆರಾಡೊದಲ್ಲಿ ಆಯೋಜಿಸಿದ್ದ ‘ಕೀಪ್‌ ಅಮೆರಿಕ ಗ್ರೇಟ್‌’ ರ್‍ಯಾಲಿಯಲ್ಲಿ ಮಾತನಾಡುತ್ತ ಹೇಳಿದರು.

ಟ್ರಂಪ್‌ ಅವರ ಭಾರತ ಭೇಟಿಯ ವೇಳೆ ಎರಡು ರಾಷ್ಟ್ರಗಳ ಮಧ್ಯೆ ವಾಣಿಜ್ಯ ಒಪ್ಪಂದಗಳು ನಡೆಯಲಿವೆ ಎಂದು ಮಾಧ್ಯಮಗಳು ಬಿಂಬಿಸಿದ್ದವು. ಆದರೆ ಸದ್ಯದಲ್ಲಿ ಅಂಥ ಮಹತ್ವದ ಒಪ್ಪಂದ ನಡೆಯುವ ಸಾಧ್ಯತೆ ಇಲ್ಲ ಎಂಬ ಸೂಚನೆಯನ್ನು ಟ್ರಂಪ್‌ ಅವರು ಎರಡು ದಿನಗಳ ಹಿಂದೆ ನೀಡಿದ್ದರು. ‘ಎರಡು ರಾಷ್ಟ್ರಗಳು ಅದ್ಭುತವಾದ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲಿವೆ. ಆದರೆ ತುರ್ತಾಗಿ ಯಾವುದೂ ನಡೆಯಲಾರದು. ಅಂಥ ಒಪ್ಪಂದಕ್ಕಾಗಿ ಚುನಾವಣೆ ಮುಗಿಯುವವರೆಗೂ ಕಾಯಬೇಕಾಗಬಹುದು’ ಎಂದು ಅವರು ಹೇಳಿದ್ದರು.

ಸ್ವಾಗತಕ್ಕೆ ಕೋಟಿ ಜನ!: ಭಾರತದಲ್ಲಿ ತಮ್ಮ ಸ್ವಾಗತಕ್ಕೆ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಕೊಲೆರಾಡೊದ ಸಭೆಯಲ್ಲಿ ಮಾತನಾಡಿದ ಟ್ರಂಪ್‌, ‘ನನ್ನ ಸ್ವಾಗತಕ್ಕೆ ಒಂದು ಕೋಟಿ ಜನರು ಸೇರಲಿದ್ದಾರೆ ಎಂಬ ಸುದ್ದಿ ಇದೆ. ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ, ಜಗತ್ತಿನ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿರುವ ‘ನಮಸ್ತೆ ಟ್ರಂಪ್‌’ ಸಮಾರಂಭವು ರೋಮಾಂಚನ ಉಂಟುಮಾಡಲಿದೆ’ ಎಂದರು.

‘ಅಷ್ಟು ಜನ ಸೇರಿದರೂ ನನಗೆ ಸಮಾಧಾನ ಆಗದು. ಭಾರತದಂಥ ರಾಷ್ಟ್ರದಲ್ಲಿ ಒಂದು ಕೋಟಿ ಜನ ಸೇರಿದರೆ ಸಮಾಧಾನಪಡುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು