ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಉಗ್ರರ ದಮನಕ್ಕೆ ಪಟ್ಟು: ಪಾಕ್‌ಗೆ ಆರ್ಥಿಕ ಪೆಟ್ಟು

Last Updated 21 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಿಕ್ಕ ಧನ ಸಹಾಯವನ್ನು ಭಯೋತ್ಪಾದನಾ ಚಟುವ ಟಿಕೆಗಳಿಗೆ ಬಳಸಿದ ಆರೋಪ ಎದುರಿಸುತ್ತಿ ರುವ ಪಾಕಿಸ್ತಾನವನ್ನು ಇನ್ನೂ ನಾಲ್ಕು ತಿಂಗಳವರೆಗೆ ‘ಬೂದು ಪಟ್ಟಿ’ಯಲ್ಲೇ ಮುಂದುವರಿಸಲು ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ನಿರ್ಧರಿಸಿದೆ. ತಾನು ವಿಧಿಸಿದ 27 ಷರತ್ತುಗಳನ್ನು ಈ ಅವಧಿಯಲ್ಲಿ ಪಾಕಿಸ್ತಾನ ಪೂರೈಸದಿದ್ದರೆ ಅದನ್ನು ‘ಕಪ್ಪು ಪಟ್ಟಿ’ಗೆ ಸೇರ್ಪಡೆ ಮಾಡುವ ಎಚ್ಚರಿಕೆಯನ್ನೂ ನೀಡಿದೆ.

ಪಾಕಿಸ್ತಾನವನ್ನು 2018ರ ಜೂನ್‌ನಲ್ಲಿ ‘ಬೂದು ಪಟ್ಟಿ’ಗೆ ಸೇರಿಸಲಾಗಿತ್ತು. ಭಾರತ ಮಾತ್ರವಲ್ಲದೆ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ, ಪಾಕ್‌ ವಿರುದ್ಧದ ನಿಲುವು ತಾಳಿದ್ದವು. ಆ ಸಮಯದಲ್ಲೇ ಷರತ್ತುಗ ಳನ್ನು ವಿಧಿಸಲಾಗಿತ್ತು.

ಉಗ್ರರಿಗೆ ಸಿಗುತ್ತಿರುವ ಧನಸಹಾಯದ ಕುರಿತು ತನಿಖೆ ನಡೆಸಿ, ಶಿಕ್ಷೆ ವಿಧಿಸುವಲ್ಲಿ ಪಾಕಿಸ್ತಾನ ವಿಫಲವಾಗಿರು
ವುದು ಎಫ್‌ಎಟಿಎಫ್‌ ಅನ್ನು ಕೆರಳಿಸಿದೆ. ಮುಂಬರುವ ಜೂನ್‌ ಒಳಗೆ ಯಾವುದೇ ವಿಶ್ವಾಸಾರ್ಹ ಕ್ರಮ ಕೈಗೊಂಡಿರುವುದು ಮನವರಿಕೆ ಆಗದಿದ್ದರೆ ಪಾಕಿಸ್ತಾನದ ಜತೆಗೆ ಆರ್ಥಿಕ ಸಂಬಂಧಗಳ ಕುರಿತು ಎಚ್ಚರ ವಹಿಸುವಂತೆ ಎಲ್ಲ ಸದಸ್ಯ ರಾಷ್ಟ್ರಗಳಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದೆ. 2019ರ ಅಕ್ಟೋಬರ್‌ನಲ್ಲಿ ಇರಾನ್‌ಗೆ ಎಫ್‌ಎಟಿಎಫ್‌ ಇಂಥದ್ದೇ ಎಚ್ಚರಿಕೆ ನೀಡಿತ್ತು. ಬಳಿಕ ಅದನ್ನು ‘ಕಪ್ಪು ಪಟ್ಟಿ’ಗೆ ಸೇರಿಸಿತ್ತು.

ಪಾಕಿಸ್ತಾನದ ಬೆಂಬಲಕ್ಕೆ ನಿಂತ ದೇಶಗಳು

ಪಾಕಿಸ್ತಾನವನ್ನು ‘ಕಪ್ಪು ಪಟ್ಟಿ’ಗೆ ಸೇರಿಸಲು ಕಳೆದ ವರ್ಷ ಫೆಬ್ರುವರಿಯಲ್ಲಿ ನಡೆದ ಎಫ್‌ಎಟಿಎಫ್‌ ಸಭೆಯಲ್ಲಿ ಬಹುತೇಕ ರಾಷ್ಟ್ರಗಳು ಒಲವು ತೋರಿದ್ದವು. ಆದರೆ, ಚೀನಾ, ಮಲೇಷ್ಯಾ ಮತ್ತು ಟರ್ಕಿ ಬೆಂಬಲದಿಂದ ‘ಕಪ್ಪು ಪಟ್ಟಿ’ಗೆ ಸೇರ್ಪಡೆಯಾಗುವುದನ್ನು ತಪ್ಪಿಸಿಕೊಂಡ ಪಾಕಿಸ್ತಾನ, ‘ಬೂದು ಪಟ್ಟಿ’ಯಲ್ಲಿ ಸ್ಥಾನ ಪಡೆದಿತ್ತು. ಆ ದೇಶ ಬೂದು ಪಟ್ಟಿಯಿಂದಲೂ ಹೊರಬರಬೇಕಾದರೆ ಒಟ್ಟಾರೆ 13 ದೇಶಗಳ ಬೆಂಬಲಬೇಕು. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅದಕ್ಕಾಗಿ ಸಾಕಷ್ಟು ಲಾಬಿ ನಡೆಸಿದರೂ ಆ ಪಟ್ಟಿಯಿಂದ ಹೊರಬರಲು ಸಾಧ್ಯವಾಗಿಲ್ಲ.

ಪಾಕ್‌ ಹೇಳುವುದೇನು?

ಎಫ್‌ಎಟಿಎಫ್‌ ವಿಧಿಸಿದ ಷರತ್ತುಗಳನ್ನು ಪೂರೈಸಲು ದೇಶದ ಪ್ರಮುಖ ಕಾನೂನುಗಳಿಗೆ ಸುಮಾರು 12 ತಿದ್ದುಪಡಿಗಳನ್ನು ಈಗಾಗಲೇ ಮಾಡಲಾಗಿದೆ. ಇನ್ನೂ 13 ತಿದ್ದುಪಡಿಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಷರತ್ತುಗಳನ್ನು ಪೂರೈಸಲಾಗುವುದು ಎಂದು ಪಾಕಿಸ್ತಾನ ಹೇಳಿದೆ.

ಎಫ್‌ಎಟಿಎಫ್‌ ಸಭೆ ಸೇರುವ ಮುನ್ನ ಪಾಕಿಸ್ತಾನ ಎಲ್‌ಇಟಿ ಸಂಘಟನೆಯ ಹಫೀಜ್‌ ಸಯೀದ್‌ನನ್ನು ಬಂಧಿಸಿ, ತನ್ನ ಬದ್ಧತೆಯನ್ನು ತೋರಿಸುವ ಯತ್ನ ಮಾಡಿದೆ. ಎಲ್ಲ ಉಗ್ರ ಸಂಘಟನೆಗಳ ಅಗ್ರ ನಾಯಕರ ವಿರುದ್ಧ ತನಿಖೆ ನಡೆಸಿ, ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಪಾಕಿಸ್ತಾನವು ಕಾರ್ಯಪಡೆಗೆ ಭರವಸೆ ನೀಡಿದೆ.

ಯಾವ ಕಾಯ್ದೆಗಳು ಬರಲಿವೆ?

ಉಗ್ರರ ವಿರುದ್ಧ ಗಟ್ಟಿಯಾದ ಕ್ರಮ ಕೈಗೊಳ್ಳಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಪಾಕಿಸ್ತಾನ ಭಯೋತ್ಪಾದನಾ ತಡೆ ಕಾಯ್ದೆಯನ್ನು ರೂಪಿಸುತ್ತಿದೆ. ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಬೇರೆ ರಾಷ್ಟ್ರಗಳ ಜತೆ ಸಹಕಾರಕ್ಕೂ ಕಾಯ್ದೆ ಮಾಡುತ್ತಿದೆ. ಆರ್ಥಿಕ ಅಕ್ರಮಗಳಲ್ಲಿ ಪಾಲ್ಗೊಂಡವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ಅಂತರರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ನಿಯಮಗಳನ್ನು ಮಾರ್ಪಡಿಸಲಾಗುತ್ತಿದೆ.

ಎಂಟು ಮುಖ್ಯ ಷರತ್ತುಗಳು

1. ಉಗ್ರ ಸಂಘಟನೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಗಳ ವಿರುದ್ಧ ತನಿಖೆ ನಡೆಸಿ ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನಾ ಸಂಘಟನೆಗಳ ಹಣಕಾಸು ನೆರವು ನಿರ್ಬಂಧದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು

2. ಅಕ್ರಮ ಹಣ ಅಥವಾ ಮೌಲ್ಯ ವರ್ಗಾವಣೆ ಸೇವೆಗಳ (ಎಂವಿಟಿಎಸ್) ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದ ಇಲಾಖೆಗಳಿಂದ ಸೂಕ್ತ ಸಹಕಾರ ಸಿಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸಬೇಕು

3. ಗಡಿಯಾಚೆಗಿನ ಅಕ್ರಮ ಆರ್ಥಿಕ ವಹಿವಾಟು, ಹಣ ವರ್ಗಾವಣೆ ನಡೆಯದಂತೆ ಪರಿಣಾಮಕಾರಿ ನಿರ್ಬಂಧವನ್ನು ಅನುಷ್ಠಾನಕ್ಕೆ ತರಬೇಕು

4. ಕಾನೂನು ಜಾರಿ ಏಜೆನ್ಸಿಗಳು ಉಗ್ರರಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ದಂಡಿಸುವುದನ್ನು ಖಚಿತಪಡಿಸಬೇಕು. ಕಾನೂನು ಪ್ರಕಾರ ತನಿಖಾಧಿಕಾರ ಹೊಂದಿದ ಅಧಿಕಾರಿಗಳಿಗೆ ಗುರಿ ನಿಗದಿ ಮಾಡಬೇಕು. ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು

5. ಉಗ್ರರಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳಲ್ಲಿ ಸಿಕ್ಕಿಬಿದ್ದವರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವ ಮೂಲಕ ಸ್ಪಷ್ಟಸಂದೇಶ ರವಾನಿಸಬೇಕು

6. ಉಗ್ರರು ಎಂದು ಘೋಷಿತರಾದ ಎಲ್ಲರ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಬೇಕು. ಅವರು ಹಣ ಸಂಗ್ರಹಿಸದಂತೆ ನಿರ್ಬಂಧಿಸಬೇಕು. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಯಾವುದೇ ಆರ್ಥಿಕ ಸೌಲಭ್ಯಗಳು ಅವರಿಗೆ ಸಿಗದಂತೆ ತಡೆಯಬೇಕು

7. ಉಗ್ರರ ಹಣಕಾಸು ವ್ಯವಹಾರಗಳನ್ನು ತಡೆಗಟ್ಟಲು ಒಕ್ಕೂಟದ ಎಲ್ಲ ಪ್ರಾಧಿಕಾರಿಗಳು, ಜಾರಿ ನಿರ್ದೇಶನಾಲಯ ಜತೆಯಾಗಿ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು

8. ಉಗ್ರ ಎಂದು ಗುರುತಿಸಲಾದ ವ್ಯಕ್ತಿಗೆ ಯಾವುದೇ ಸೌಲಭ್ಯವೂ ಸಿಗದಂತೆ ನೋಡಿಕೊಳ್ಳಬೇಕು

ಬೆಂಬಿಡದ ಭಾರತ

ಉಗ್ರ ಸಂಘಟನೆಗಳಿಗೆ ಪಾಕಿಸ್ತಾನವು ಸ್ವರ್ಗವಾಗಿದೆ ಎಂದು ಅಮೆರಿಕ, ಅಫ್ಗಾನಿಸ್ತಾನ ಹಾಗೂ ಭಾರತ ವಾದಿಸುತ್ತಾ ಬಂದಿವೆ. ಪಾಕಿಸ್ತಾನದ ನೆಲದಿಂದ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಂದ ಅತಿ ಹೆಚ್ಚು ಹಾನಿ ಅನುಭವಿಸಿದ್ದು ಭಾರತ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ವಿವರಗಳನ್ನು, ಉಗ್ರರ ಸಂಘಟನೆಗಳಿಗೆ ಎಲ್ಲಿಂದ, ಹೇಗೆ ಆರ್ಥಿಕ ನೆರವು ಹರಿದುಬರುತ್ತಿದೆ ಎಂಬೆಲ್ಲ ಮಾಹಿತಿಯನ್ನು ಜಾಗತಿಕ ವೇದಿಕೆಗಳಲ್ಲಿ ಭಾರತ ಆಧಾರಸಹಿತವಾಗಿ ವಿವರಿಸುತ್ತಾ ಬಂದಿದೆ.

ಪಾಕಿಸ್ತಾನದ ನೆಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಷ್ಕರ್‌–ಎ ತಯಬ, ಜೈಷೆ ಮಹಮ್ಮದ್‌ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗಳ ಗುರಿ ಹೆಚ್ಚಿನ ಸಂದರ್ಭದಲ್ಲಿ ಭಾರತವೇ ಆಗಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದೆ.

ಉಗ್ರ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ಈಗಲೂ ಆರ್ಥಿಕ ನೆರವು ಲಭ್ಯವಾಗುತ್ತಿದೆ. ಮಸೂದ್‌ ಅಜರ್‌ಗೆ ಶಿಕ್ಷೆ ಘೋಷಿಸಿದ್ದು, ಆತ ಮತ್ತು ಆತನ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ಆಮೇಲೆ ಹೇಳಿದ್ದು... ಇವೆಲ್ಲ ಕಂತೆಪುರಾಣಗಳು ಎಂದು ಭಾರತ ಹೇಳಿದೆ. ಮುಂಬೈ ದಾಳಿಯ ಸಹ ಸಂಚುಕೋರ ಜಕಿ–ಉರ್‌ ಲಖ್ವಿ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ.

ಎಫ್‌ಎಟಿಎಪ್‌ನಲ್ಲಿರುವ ಒಟ್ಟು ಸದಸ್ಯ ರಾಷ್ಟ್ರಗಳು-39

ಎಫ್‌ಎಟಿಎಫ್‌ನಲ್ಲಿರುವ ಪ್ರಾದೇಶಿಕ ಸಂಘಟನೆಗಳು-2

***

ಬೂದುಪಟ್ಟಿಯಿಂದ ಹೊರಬರಲು ಪಾಕಿಸ್ತಾನಕ್ಕೆ ಬೇಕಿರುವ ಮತಗಳು-12

ಕಪ್ಪುಪಟ್ಟಿಗೆ ಸೇರ್ಪಡೆಯಾಗದಂತೆ ತಪ್ಪಿಸಲು ಆ ದೇಶಕ್ಕೆ ಬೇಕಾದ ಮತಗಳು-3

***

ನುಂಗಲಾರದ ತುತ್ತು

ಹಣಕಾಸು ಕಾರ್ಯಪಡೆಯ ನಿರ್ಧಾರ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲಿನ ಅರ್ಥವ್ಯವಸ್ಥೆ ತೀರಾ ಹದಗೆಟ್ಟಿದೆ. ಅದನ್ನು ಸರಿದಾರಿಗೆ ತರಬೇಕಾದರೆ ಅಂತರರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್‌, ಎಡಿಬಿ ಹಾಗೂ ಐರೋಪ್ಯ ಒಕ್ಕೂಟದಿಂದ ಆರ್ಥಿಕ ನೆರವು ಪಡೆಯುವುದು ಅನಿವಾರ್ಯವಾಗಿದೆ. ಆದರೆ ಎಫ್‌ಎಟಿಎಫ್‌ ಬೂದುಪಟ್ಟಿಯಲ್ಲಿ ಇಟ್ಟಿರುವ ರಾಷ್ಟ್ರಗಳಿಗೆ ಈ ಸಂಘಟನೆಗಳು ಆರ್ಥಿಕ ನೆರವು ನೀಡುವುದಿಲ್ಲ.

ಅತ್ತ, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲೂ ಪಾಕಿಸ್ತಾನ ಇಲ್ಲ. ಆ ನೆಲದಿಂದ ಕಾರ್ಯ ನಿರ್ವಹಿಸುವ ಕೆಲವು ಭಯೋತ್ಪಾದಕರು ಹಾಗೂ ಸಂಘಟನೆಗಳು ಪಾಕಿಸ್ತಾನದ ಗಣ್ಯರು ಹಾಗೂ ಸೇನೆಯ ಜೊತೆ ನಿಕಟ ಸಂಪರ್ಕ ಹೊಂದಿವೆ. ಆದ್ದರಿಂದ, ಈ ಸಂಘಟನೆಗಳ ವಿರುದ್ಧ ಕುರುಡಾಗಿರುವುದು ಕಾನೂನು ಜಾರಿ ಮಾಡುವ ಸಂಸ್ಥೆಗಳಿಗೆ ಅನಿವಾರ್ಯವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಪಾಕಿಸ್ತಾನ– ಅಫ್ಗಾನಿಸ್ತಾನ ಗಡಿಯಲ್ಲಿ ಹೊಸ ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಳ್ಳುತ್ತಿರುವುದು ಜಗತ್ತಿನ ಆತಂಕಕ್ಕೆ ಇನ್ನೊಂದು ಕಾರಣವಾಗಿದೆ.

ಭಯೋತ್ಪಾದನೆಯ ತವರೂರು

ಪಾಕಿಸ್ತಾನವು ಭಯೋತ್ಪಾದಕದ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ. ಆಫ್ಗನ್ ಗಡಿಗೆ ಹೊಂದಿಕೊಂಡಂತೆ ಇರುವ ಬುಡಕಟ್ಟು ಪ್ರದೇಶವು ಉಗ್ರರ ಸ್ವರ್ಗವಾಗಿದೆ ಎಂಬ ಆರೋಪವನ್ನು ಹಲವು ದೇಶಗಳು ಮಾಡಿವೆ.

ಪಾಕ್‌ನಲ್ಲಿರುವ ಕೆಲವು ಉಗ್ರ ಸಂಘಟನೆಗಳು

ಅಲ್ ಕೈದಾ

ಹಿಜ್ಬುಲ್ ಮುಜಾಹಿದೀನ್

ಹರ್ಕತ್ ಉಲ್ ಮುಜಾಹಿದೀನ್

ಲಷ್ಕರ್–ಇ–ಒಮರ್

ಲಷ್ಕರ್–ಎ–ತಯಬಾ

ಜೈಷೆ ಮೊಹಮ್ಮದ್

ಸಿಫಾ–ಎ–ಸಹಾಬಾ

ಜೈಷ್–ಉಲ್–ಅಡ್ಲ್

ಅಲ್–ಬದ್ರ್ ಮುಜಾಹಿದೀನ್

ತೆಹ್ರಿಕ್–ಎ–ತಾಲಿಬಾನ್ ಪಾಕಿಸ್ತಾನ

ತೆಹ್ರಿಕ್–ಎ–ಜಫೇರಿಯಾ ಪಾಕಿಸ್ತಾನ್

ತೆಹ್ರಿಕ್–ಎ–ನಫಾಜ್–ಎ–ಷರಿಯತ್–ಎ–ಮೊಹಮ್ಮದಿ

ಲಷ್ಕರ್–ಎ–ಝಾಂಗ್ವಿ

ಸಿಫಾ–ಎ–ಮೊಹಮ್ಮದ್ ಪಾಕಿಸ್ತಾನ್

ಜಮಾತ್ ಉಲ್ ಫುರ್ಕಾ ಹಾಗೂ ಇತರೆ

––––––

ಉಗ್ರರ ನೆಲೆ: ಪಾಕ್ ಒಪ್ಪಿಗೆ

*ವಿಶ್ವಸಂಸ್ಥೆ ಘೋಷಿಸಿರುವ 16 ಉಗ್ರರು ದೇಶದವರು ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಈ ಪೈಕಿ 7 ಮಂದಿ ಮೃತಪಟ್ಟಿದ್ದು, 9 ಮಂದಿ ಜೀವಂತವಾಗಿದ್ದಾರೆ

*ಎಲ್‌ಇಟಿ ಮುಖ್ಯಸ್ಥಹಫೀಜ್‌ಸಯೀದ್, ಹಾಜಿ ಮುಹಮ್ಮದ್ ಅಶ್ರಫ್,ಜಾಫರ್ ಇಕ್ಬಾಲ್,ಹಫೀಜ್‌ ಅಬ್ದುಲ್ ಸಲಾಂ ಭುಟ್ಟಾವಿ,ಯಹ್ಯಾ ಮೊಹಮ್ಮದ್ ಮುಜಾಹಿದ್,ಆರಿಫ್ ಖಾಸ್ಮಾನಿ,ಅಲ್‌ ಕೈದಾ ಸಂಘಟನೆಯ ಅಬ್ದುಲ್ ರೆಹಮಾನ್ ಈ ಪಟ್ಟಿಯಲ್ಲಿದ್ದಾರೆ

*ದೇಶದಲ್ಲಿ 30 ಸಾವಿರದಿಂದ 40 ಸಾವಿರ ಮಂದಿ ತರಬೇತಿ ಪಡೆದ, ಶಸ್ತ್ರಸಜ್ಜಿತ ಉಗ್ರರಿದ್ದಾರೆ ಎಂದುಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು 2019ರ ಅಮೆರಿಕ ಭೇಟಿ ವೇಳೆ ಒಪ್ಪಿಕೊಂಡಿದ್ದರು

*1990ರ ದಶಕದಲ್ಲಿ ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಲಷ್ಕರ್ ಸೇರಿದಂತೆ ಉಗ್ರ ಸಂಘಟನೆಗಳಿಗೆ ಸರ್ಕಾರ ಬೆಂಬಲ ಹಾಗೂ ತರಬೇತಿ ನೀಡುತ್ತಿತ್ತು ಎಂದು ಪಾಕ್ ಅಧ್ಯಕ್ಷರಾಗಿದ್ದ ಜನರಲ್ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದರು

*2014ರಲ್ಲಿ ಬಿಬಿಸಿ ಉರ್ದು ವಾಹಿನಿಗೆ ಸಂದರ್ಶನ ನೀಡಿದ್ದ ಪಾಕ್ ಪ್ರಧಾನಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್, ಆಫ್ಗನ್ ತಾಲಿಬಾನ್ ಮತ್ತು ಹಕ್ಕಾನಿ ಉಗ್ರರು ಪಾಕಿಸ್ತಾನದ ಭದ್ರತೆಗೆ ಅಪಾಯಕಾರಿಗಳಲ್ಲ ಎಂದು ಹೇಳಿದ್ದರು

*2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನ ಮನೆಯಲ್ಲಿ ಅಡಗಿದ್ದ ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ರಹಸ್ಯ ಕಾರ್ಯಪಡೆ ಸಿಬ್ಬಂದಿ ಹತ್ಯೆ ಮಾಡಿತ್ತು

ಐಎಸ್‌ಐ ಹಾಗೂ ಭಯೋತ್ಪಾದನೆ

* ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೂ ಭಯೋತ್ಪಾದನೆಗೂ ನಂಟು. ಕಾಶ್ಮೀರ ಸೇರಿದಂತೆ ಸಂಸತ್ ಮೇಲಿನ ದಾಳಿ, ವಾರಾಣಸಿ ಬಾಂಬ್‌ ಸ್ಫೋಟ, ಹೈದರಾಬಾದ್‌ ಬಾಂಬ್ ಸ್ಫೋಟ, 2008ರ ಮುಂಬೈ ಮೇಲಿನ ದಾಳಿಯಲ್ಲಿ ಐಎಸ್‌ಐ ಕೈವಾಡವಿದೆ ಎಂಬುದು ಭಾರತದ ಆರೋಪ

*ಪಾಕಿಸ್ತಾನದಲ್ಲಿ ಸಾಕಷ್ಟು ಉಗ್ರರ ಶಿಬಿರಗಳು ಸಕ್ರಿಯವಾಗಿವೆ ಎಂದು ಎಫ್‌ಬಿಐ ಸ್ಯಾಟಲೈಟ್ ಚಿತ್ರಗಳನ್ನು ಉಲ್ಲೇಖಿಸಿ ಹೇಳಿತ್ತು. ಕಾಶ್ಮೀರದಲ್ಲಿ ಅಲ್‌ಕೈದಾ, ಜೈಷ್ ಉಗ್ರ ಸಂಘಟನೆಗಳ ಚಟುವಟಿಕೆಗಳಿಗೆ ಐಎಸ್‌ಐ ರಹಸ್ಯವಾಗಿ ಬೆಂಬಲ ನೀಡುತ್ತಿದೆ ಎಂಬ ಆರೋಪಗಳಿವೆ

*ಅಫ್ಗಾನಿಸ್ತಾನದಲ್ಲಿ ದಾಳಿ ಎಸಗುವ ಉಗ್ರರು ಪಾಕ್‌ನಲ್ಲಿ ಅವಿತಿದ್ದಾರೆ ಎಂದು ಆಫ್ಗನ್ ಅಧ್ಯಕ್ಷ ಹಮೀದ್ ಕರ್ಜೈ ಆರೋಪಿಸಿದ್ದರು. ಪಾಕ್‌ನ ಬೆಟ್ಟಪ್ರದೇಶಗಳು ಹಾಗೂ ಬುಡಕಟ್ಟು ವಲಯದಲ್ಲಿ ಬೀಡುಬಿಟ್ಟಿರುವ ಉಗ್ರರನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಅವರು ಕೋರಿದ್ದರು

ಲಷ್ಕರ್ ಮತ್ತು ಜೆಯುಡಿ

2008ರ ಮುಂಬೈ ಮೇಲಿನ ದಾಳಿಗೆ ಲಷ್ಕರ್ ಮತ್ತು ಜಮಾತ್ ಉದ್ ದವಾ (ಜೆಯುಡಿ) ಕಾರ್ಯತಂತ್ರ ರೂಪಿಸಿದ್ದವು. ಹಫೀಜ್‌ ಸಯೀದ್‌ ತಲೆಗೆ ಅಮೆರಿಕವು ₹70 ಕೋಟಿ ಬಹುಮಾನ ಘೋಷಿಸಿತ್ತು. ಸಯೀದ್ ಮುಖ್ಯಸ್ಥನಾಗಿರುವ ಜೆಯುಡಿ ಸಂಘಟನೆಯನ್ನು ಅಮೆರಿಕ, ಭಾರತ, ರಷ್ಯಾಗಳು ನಿಷೇಧಿಸಿವೆ

ಹಕ್ಕಾನಿ ಜಾಲ

ಪಾಕಿಸ್ತಾನ ಐಎಸ್‌ಐನ ನಿಜವಾದ ಬಲ ಎಂದರೆ ಅದು ಹಕ್ಕಾನಿ ಉಗ್ರರ ಜಾಲ ಎಂದು ಅಮೆರಿಕ ಹೇಳಿತ್ತು. 2011ರಲ್ಲಿ ಕಾಬೂಲ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲಿನ ದಾಳಿ, ನ್ಯಾಟೋ ಟ್ರಕ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಹಕ್ಕಾನಿ ಕೈವಾಡವಿದೆ ಎಂದು ಆರೋಪಿಸಿತ್ತು.2017ರ ಕಾಬೂಲ್ ದಾಳಿಯಲ್ಲಿ ಬಂಡುಕೋರರ ಸಂಘಟನೆ ಹಕ್ಕಾನಿ ಜಾಲದ ಕೈವಾಡವಿದೆ ಎಂದು ಆಫ್ಗನ್ ನೇರವಾಗಿ ಆರೋಪಿಸಿತ್ತು.

ಮೋಸ್ಟ್ ವಾಂಟೆಂಡ್ ಉಗ್ರರು

ಜೈಷ್ ಮುಖ್ಯಸ್ಥ ಮಸೂದ್ ಅಜರ್, ಲಷ್ಕರ್ ಸ್ಥಾಪಕ ಹಫೀಸ್ ಸಯೀದ್, ಝಕೀರ್ ಉರ್ ರಹಮಾನ್ ಲಖ್ವಿ ಹಾಗೂ ದಾವೂದ್ ಇಬ್ರಾಹಿಂ– ಈ ನಾಲ್ವರು ಭಾರತಕ್ಕೆ ಬೇಕಿರುವ ಪ್ರಮುಖ ಉಗ್ರರ ಪಟ್ಟಿಯಲ್ಲಿದ್ದಾರೆ. ಇವರಿಗೆ ಯುಎಪಿಎ 1967ರ ಕಾಯ್ದೆಯಡಿ ಉಗ್ರರು ಎಂದು ಹಣೆಪಟ್ಟಿ ಕಟ್ಟಲಾಗಿದೆ.

ಅಜರ್:

2001ರ ಜಮ್ಮು ಕಾಶ್ಮೀರ ವಿಧಾನಸಭೆ ಸಂಕೀರ್ಣದ ಮೇಲಿನ ದಾಳಿ, 2001ರ ಸಂಸತ್‌ ಮೇಲಿನ ದಾಳಿ, 2016ರ‍ಪಠಾಣ್‌ಕೋಟ್ ದಳಿ, 2017ರಲ್ಲಿ ಶ್ರೀನಗರದ ಬಿಎಸ್‌ಎಫ್ ಶಿಬಿರದ ಮೇಲಿನ ದಾಳಿ, ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬಸ್‌ ಸ್ಫೋಟ ಪ್ರಕರಣಗಳಲ್ಲಿ ಅಜರ್ ಆರೋಪಿ. ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದ ಈತ, ತಪ್ಪಿಸಿಕೊಂಡಿದ್ದಾನೆ ಎಂದು ಪಾಕ್ ಸರ್ಕಾರ ತಿಳಿಸಿದೆ.

ಹಫೀಜ್‌:

2000 ಕೆಂಪುಕೋಟೆ, ರಾಂಪುರದ ಸಿಆರ್‌ಪಿಎಫ್ ಶಿಬಿರ, 2008 ಮುಂಬೈ, 2015ರಲ್ಲಿ ಉಧಂಪುರದ ಬಿಎಸ್‌ಎಫ್ ಬೆಂಗಾವಲು ಪಡೆ ಮೇಲಿನ ದಾಳಿಯಲ್ಲಿ ಹಫೀಜ್ ಆರೋಪಿ. ಜಮಾತ್ ಉದ್ ದವಾ (ಜೆಯುಡಿ) ಸಂಘಟನೆಯ ಸ್ಥಾಪಕ.

ಲಖ್ವಿ

ಎಲ್‌ಇಟಿ ಕಮಾಂಡರ್ ಲಖ್ವಿಯು ಕೆಂಪು ಕೋಟೆ ಮೇಲಿನ ದಾಳಿ, ರಾಂಪುರ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ, 2008ರ ಮುಂಬೈ ದಾಳಿ, ಉಧಂಪುರದ ಬಿಎಸ್ಎಫ್ ಬೆಂಗಾವಲು ಪಡೆ ಮೇಲಿನ ದಾಳಿಯಲ್ಲಿ ಆರೋಪಿಯಾಗಿದ್ದಾನೆ.

ದಾವೂದ್ ಇಬ್ರಾಹಿಂ

1993ರ ಮುಂಬೈ ಸರಣಿ ಸ್ಫೋಟದ ಆರೋಪಿಯಾಗಿರುವ ದಾವೂದ್, ಅಂತರರಾಷ್ಟ್ರೀಯ ಭೂಗತ ಜಗತ್ತಿನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಭಯೋತ್ಪಾದನೆ, ಧಾರ್ಮಿಕ ಮೂಲಭೂತವಾದಕ್ಕೆ ಕುಮ್ಮಕ್ಕು, ಉಗ್ರರಿಗೆ ಹಣಕಾಸು ನೆರವು, ಶಸ್ತ್ರಾಸ್ತ್ರ ಕಳ್ಳಸಾಗಣೆ, ಖೋಟಾನೋಟು ಚಲಾವಣೆ, ಅಕ್ರಮ ಹಣ ವರ್ಗಾವಣೆ, ಬೇನಾಮಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT