ಮಂಗಳವಾರ, ಮೇ 26, 2020
27 °C

131 ರಾಷ್ಟ್ರಗಳಲ್ಲಿ ಲಾಕ್‍ಡೌನ್ ಪಾಲನೆಯಾಗುತ್ತಿದೆಯೇ? ಮಾಹಿತಿ ಪ್ರಕಟಿಸಿದ ಗೂಗಲ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

google

ಓಕ್‌ಲ್ಯಾಂಡ್: ಆಲ್ಫಾಬೆಟ್ ಇಂಕ್‌ನ ಗೂಗಲ್ ಸಂಸ್ಥೆ  131 ರಾಷ್ಟ್ರಗಳಲ್ಲಿ ಎಲ್ಲೆಲ್ಲಿ ಲಾಕ್‌ಡೌನ್ ಪಾಲನೆಯಾಗುತ್ತಿದೆ ಎಂಬುದರ ಬಗ್ಗೆ ಗುರುವಾರ ಮಾಹಿತಿ ಪ್ರಕಟಿಸಿದೆ.

ಮೊಬೈಲ್ ಬಳಕೆದಾರರ ಲೊಕೇಷನ್ ಮಾಹಿತಿ ಬಳಸಿ ಜನರು ಮನೆಯೊಳಗೆ ಕುಳಿತಿದ್ದೀರಾ? ಅಥವಾ ಹೊರಗಡೆ ಹೋಗುತ್ತಿದ್ದಾರಾ? ಎಂಬುದರ ಬಗ್ಗೆ ಗೂಗಲ್ ವಿಶ್ಲೇಷಣೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಸಬ್‌ವೇ, ರೈಲು, ಬಸ್ ನಿಲ್ದಾಣ, ದಿನಸಿ ಅಂಗಡಿ ಮತ್ತು ಇತರ ಪ್ರದೇಶಗಳಿಗೆ ಜನರು ಭೇಟಿ ನೀಡಿದ ಮಾಹಿತಿ ಮತ್ತು ಅದಕ್ಕಿಂತ ಮುಂಚಿನ 5 ವಾರಗಳಲ್ಲಿನ ಮಾಹಿತಿಯನ್ನು ಹೋಲಿಕೆ ಮಾಡಿ ಗೂಗಲ್ ಈ ವರದಿ ತಯಾರಿಸಿದೆ. ಕೆಲವೊಂದು ದೇಶಗಳಲ್ಲಿ ಗೂಗಲ್ ಸ್ಥಳೀಯ ಮಾಹಿತಿಯ್ನೂ ಬಳಸಿಕೊಂಡಿದೆ.

ಗೂಗಲ್‌ನಂತೆಯೇ ಶತಕೋಟಿ ಬಳಕೆದಾರರು ಇರುವ ಫೇಸ್‌ಬುಕ್ ಇಂಕ್ ಕೂಡಾ ಇದೇ ರೀತಿಯ ಮಾಹಿತಿಗಳನ್ನು ಕಲೆ ಹಾಕಲು ಸರ್ಕಾರೇತರ ಅಧ್ಯಯನಕಾರರಿಗೆ ಮಾಹಿತಿ ನೀಡಿತ್ತು. ಆದರೆ ಫೇಸ್‌ಬುಕ್ ಈ ಬಗ್ಗೆ ಯಾವುದೇ ವರದಿ ಪ್ರಕಟಿಸಿಲ್ಲ.

ಜಾಗತಿಕ ಮಟ್ಟದಲ್ಲಿ 1 ದಶಲಕ್ಷಕ್ಕಿಂತಲೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಕೋವಿಡ್ ರೋಗದಿಂದ 52,000 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಯಿಟರ್ಸ್ ಅಂಕಿಅಂಶಗಳು ಹೇಳಿವೆ.

ಗೂಗಲ್ ಸೇವೆಗಳನ್ನು ಬಳಸುವ ಮುನ್ನ ಗ್ರಾಹಕರು ಕೆಲವೊಂದು ಮಾಹಿತಿಗಳನ್ನು ನೀಡಬೇಕಾಗುತ್ತದೆ. ಅದರಲ್ಲಿ ಭೌಗೋಳಿಕ ಮಾಹಿತಿಯೂ ಇದೆ. ಏತನ್ಮಧ್ಯೆ ನಾವು ಭೌಗೋಳಿಕ ಮಾಹಿತಿ ಬಳಸಿಲ್ಲ ಎಂದು ಗೂಗಲ್ ಹೇಳಿದ್ದು, ಈಗಿನ ವರದಿಗೆ ಹೆಚ್ಚಿನ ಮಾಹಿತಿಗಳನ್ನು ಸೇರಿಸಲು ನಾವು ಸಿದ್ಧ ಎಂದು ಗೂಗಲ್ ಹೇಳಿದೆ.

ನಮ್ಮ ಕಠಿಣ ಗೌಪ್ಯತೆ ಶಿಷ್ಟಾಚಾರ ಮತ್ತು ನೀತಿಗಳಿಗೆ ಬದ್ಧವಾಗಿದ್ದುಕೊಂಡೇ ಈ ವರದಿಗಳನ್ನು ತಯಾರಿಸಲಾಗಿದೆ ಎಂದು ಗೂಗಲ್ ಹೆಲ್ತ್‌ನ ಹಿರಿಯ ಆರೋಗ್ಯಾಧಿಕಾರಿ ಡಾ.ಕರೇನ್ ಡಿ ಸಾಲ್ವೊ ಮತ್ತು ಗೂಗಲ್ ಜಿಯೊದ ಹಿರಿಯ ಉಪಾಧ್ಯಕ್ಷ   ಜೆನ್ ಫಿಚ್ಜ್‌ಪಾಟ್ರಿಕ್ ತಮ್ಮ ಬ್ಲಾಗ್‌ನಲ್ಲಿ ಹೇಳಿದ್ದಾರೆ.

ರೋಗ ಮತ್ತಷ್ಟು ವ್ಯಾಪಿಸದಂತೆ ಗೌಪತ್ಯೆ ಮತ್ತು ಟ್ರ್ಯಾಕಿಂಗ್ ಅನ್ನು ಸಮತೋಲನಗೊಳಿಸುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆದಿದ್ದು ಆ ಮಾಹಿತಿ ಏನನ್ನು ನೀಡುತ್ತದೆ ಎಂಬುದರ ಬಗ್ಗೆ ಯಾವುದೇ ಗೊಂದಲವನ್ನು ತಪ್ಪಿಸಲು ವರದಿಗಳನ್ನು ಪ್ರಕಟಿಸಿದೆ ಎಂದು ಗೂಗಲ್ ಹೇಳಿದೆ.

ಚೀನಾ, ಸಿಂಗಾಪುರ್ , ದಕ್ಷಿಣ ಕೊರಿಯಾ ಮತ್ತು ಇತರ ರಾಷ್ಟ್ರಗಳು ಜನರಲ್ಲಿ ಆ್ಯಪ್‌ಗಳನ್ನು ಬಳಸುವಂತೆ ಹೇಳಿದ್ದು ಕ್ವಾರಂಟೈನ್ ವೇಳೆ ಜನರು ಅದರ ಪಾಲನೆ ಮಾಡುತ್ತಿದ್ದಾರೋ ಎಂದು ನಿಗಾವಹಿಸಿತ್ತು. ಆದರೆ ಇದು ಜನರ ಗೌಪ್ಯತೆಯನ್ನು ಕಸಿಯುತ್ತದೆ ಎಂದು ಕಾರ್ಯಕರ್ತರು ಆಕ್ಷೇಪ ವ್ಯಕ್ತ ಪಡಿಸಿದ್ದರು.

ಗೂಗಲ್‌ನ  ಲೊಕೇಶನ್ ಹಿಸ್ಟರಿ ಎನೇಬಲ್ ಮಾಡಿರುವ ಬಳಕೆದಾರರ ಮಾಹಿತಿಯನ್ನು ಮಾತ್ರ ಗೂಗಲ್ ಬಳಸಿದೆ. ಈ ವರದಿ ಮೂಲಕ ಯಾವುದೇ ಬಳಕೆದಾರರ ಮಾಹಿತಿ ಪತ್ತೆ ಹಚ್ಚಲಾಗದಂತೆ ನಾವು ತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಗೂಗಲ್ ಹೇಳಿದೆ.

ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಈ ಕಾರ್ಯಕ್ಕಾಗಿ ನಮಗೆ ಸಹಾಯ ನೀಡಿದೆ ಎಂದು ಗೂಗಲ್ ಹೇಳಿದ್ದು, ಈ ಜಾಗತಿಕ ಪಿಡುಗು ವಿರುದ್ಧದ ಹೋರಾಟಕ್ಕಾಗಿ ಹೆಚ್ಚಿನ ಮಾಹಿತಿ ಪೂರೈಕೆ ಮಾಡುವಂತೆ ಕಾನೂನಾತ್ಮಕವಾಗಿ ಯಾವುದಾದರೂ ಬೇಡಿಕೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಗೂಗಲ್ ನಿರಾಕರಿಸಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು