ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯೂಸ್ಟನ್‌: ಹೂ ಎತ್ತಿಕೊಟ್ಟ ಮೋದಿ

ಹುರುಪು ಮೂಡಿಸಿದ ಹೌಡಿ ಮೋದಿ
Last Updated 23 ಸೆಪ್ಟೆಂಬರ್ 2019, 2:30 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಹ್ಯೂಸ್ಟನ್‌ನ ಜಾರ್ಜ್‌ ಬುಷ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮಗೆ ನೀಡಿದ ಹೂಗುಚ್ಛದಿಂದ ಕೆಳಗೆ ಬಿದ್ದ, ಹೂವೊಂದನ್ನು ಪ್ರಧಾನಿ ನರೇಂದ್ರ ಮೋದಿ ಬಗ್ಗಿ ಎತ್ತಿಕೊಟ್ಟರು.

ವಿಮಾನದಿಂದ ಇಳಿದ ಮೋದಿ ಅವರನ್ನು ರಾಜತಾಂತ್ರಿಕರು ಬರಮಾಡಿಕೊಂಡರು. ಈ ವೇಳೆ ಅವರಿಗೆ ಹೂಗುಚ್ಛ ನೀಡಲಾಯಿತು. ಅದರಿಂದ ಒಂದು ಹೂವಿನ ದಂಟು ಕೆಳಗೆ ಬಿತ್ತು. ಹೂಗುಚ್ಚವನ್ನು ಮೋದಿ ಅವರು ತಮ್ಮ ಭದ್ರತಾ ಸಿಬ್ಬಂದಿಗೆ ನೀಡಿದರು. ಒಂದು ಹೆಜ್ಜೆ ಮುಂದೆ ಇಟ್ಟಿದ್ದ ಮೋದಿ ಅವರು, ಕೆಳಗೆ ಬಿದ್ದಿದ್ದ ದಂಟನ್ನು ಎತ್ತಿಕೊಂಡರು. ನಂತರ ಅದನ್ನೂ ತಮ್ಮ ಭದ್ರತಾ ಸಿಬ್ಬಂದಿಗೆ ನೀಡಿದರು.

ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೋದಿ ಅವರು ಸಣ್ಣ ವಿಷಯಗಳಿಗೂ ಗಮನ ನೀಡುತ್ತಾರೆ ಎಂದು, ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಲಾಗಿದೆ. ಕೆಲವರು, ‘ಇದು ಸ್ವಚ್ಛ ಭಾರತದ ಅಭಿಯಾನದ ಪ್ರತೀಕ’ ಎಂದೂ ಹೊಗಳಿದ್ದಾರೆ.

‘ಹೌಡಿ ಮೋದಿ’ ಸಮಾವೇಶ

‘ಹೌಡಿ ಮೋದಿ’ ಸಮಾವೇಶದ ಬಗ್ಗೆ ಭಾರತೀಯ ಅಮೆರಿಕನ್ನರಲ್ಲಿ ಭಾರಿ ಹುರುಪು ಇದೆ. ಈ ಸಮಾವೇಶವು ಎರಡು ದೇಶಗಳ ಸಂಬಂಧವನ್ನು ಹೊಸ ಎತ್ತರಕ್ಕೆ ಏರಿಸ ಬಲ್ಲುದು ಎಂಬ ನಿರೀಕ್ಷೆ ಅವರಲ್ಲಿ ಇದೆ.

‘ಜಗತ್ತಿನ ಎರಡು ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಗಳ ಸಮಾನ ಮೌಲ್ಯಗಳು ಮತ್ತು ತತ್ವಗಳನ್ನು ಜಗತ್ತಿನ ಮುಂದೆ ತೆರೆದಿಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಸಿಕ್ಕ ಸುವರ್ಣ ಅವಕಾಶ ಇದು’ ಎಂದು ಡಲ್ಲಾಸ್‌ನ ಅಶೋಕ್‌ ಮಾಗೊ ಹೇಳುತ್ತಾರೆ.

ಜತೆಗೆ, ಅಮೆರಿಕದ ವಿದೇಶ ನೀತಿಯಲ್ಲಿ ಭಾರತಕ್ಕೆ ಮಹತ್ವ ಹೆಚ್ಚುತ್ತಿರುವ ಸಂಕೇತ ಇದು ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಭಾರತ–ಅಮೆರಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಬಯಕೆ ಟ್ರಂಪ್‌ ಅವರಿಗೆ ಇದೆ ಮತ್ತು ಅವರು ಅದಕ್ಕೆ ಬದ್ಧರಾಗಿದ್ದಾರೆ ಎಂಬುದನ್ನು ‘ಹೌಡಿ ಮೋದಿ’ ತೋರಿಸುತ್ತದೆ. ಅಮೆರಿಕಕ್ಕೆ ಭೇಟಿ ನೀಡಿದ ವಿದೇಶಿ ನಾಯಕರೊಬ್ಬರ ಕಾರ್ಯಕ್ರಮದಲ್ಲಿ ಟ್ರಂಪ್‌ ಅವರು ಈ ರೀತಿಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು ಆಗಿರಬಹುದು’ ಎಂದು ಮಾಗೊ ಹೇಳಿದ್ದಾರೆ.

ಎರಡೂ ದೇಶಗಳ ನಡುವಣ ಸಂಬಂಧ ವೃದ್ಧಿಯಲ್ಲಿ ಮಾಗೊ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಟ್ರಂಪ್‌ ಅವರು ಹ್ಯೂಸ್ಟನ್‌ಗೆ ಬಂದಿಳಿದಾಗ ಸ್ವಾಗತಿಸುವುದಕ್ಕಾಗಿ ಅಲ್ಲಿನ ಸರ್ಕಾರ ಆಹ್ವಾನಿಸಿದ ನಾಲ್ವರು ಪ್ರಮುಖರಲ್ಲಿ ಮಾಗೊ ಅವರೂ ಒಬ್ಬರು.

‘ಇದು ಕನಸು ನನಸಾದ ಕ್ಷಣ’ ಎಂದು ಮಾಗೊ ಜತೆಗಿದ್ದ ಪೀಯೂಷ್‌ ಪಟೇಲ್‌ ಹೇಳಿದ್ದಾರೆ. ಇಂತಹ ಕಾರ್ಯಕ್ರಮದಿಂದಾಗಿ ಭಾರತ–ಅಮೆರಿಕ ಸಂಬಂಧವು ಹೊಸ ಮಜಲಿಗೆ ಏರುತ್ತದೆ ಎಂಬುದು ಅವರ ಅಭಿಪ್ರಾಯ.

ಯುರೋಪ್‌ನ ಪ್ರಮುಖ ದೇಶಗಳ ಹಾಗೆಯೇ ಭಾರತಕ್ಕೂ ‘ಅತ್ಯಂತ ನೆಚ್ಚಿನ ರಾಷ್ಟ್ರ’ ಎಂಬ ಸ್ಥಾನವನ್ನು ಅಮೆರಿಕ ನೀಡಬೇಕು ಎಂದು ಅವರು ಹೇಳುತ್ತಾರೆ.

ಕಾಶ್ಮೀರಿ ಪಂಡಿತರಿಗೆ ಸಾಂತ್ವನ

ಹ್ಯೂಸ್ಟನ್‌ನಲ್ಲಿ ಕಾಶ್ಮೀರಿ ಪಂಡಿತರ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.‘ನಾವು ಹೊಸ ಕಾಶ್ಮೀರವನ್ನು ನಿರ್ಮಿಸುತ್ತಿದ್ದೇವೆ. ಬದುಕಲು ಅಲ್ಲಿ ಎಲ್ಲರಿಗೂ ಅವಕಾಶವಿರಲಿದೆ’ ಎಂದು ಮೋದಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT