ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್: ಮತ್ತೆ ಪ್ರತಿಭಟನೆ

ಆಡಳಿತ ವಿರೋಧಿ ನೀತಿಗೆ ಖಂಡನೆ l ಬೇಡಿಕೆ ಈಡೇರಿಕೆಗೆ ಒತ್ತಾಯ
Last Updated 1 ಡಿಸೆಂಬರ್ 2019, 18:43 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್ : ಆಡಳಿತ ವಿರೋಧಿ ನೀತಿ ಖಂಡಿಸಿ ಹಾಂಗ್‌ಕಾಂಗ್‌ನಲ್ಲಿ ಭಾನುವಾರ ಸಾರ್ವಜನಿಕರು ಪುನಃ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಪರ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಚುನಾವಣೆ ಮುಕ್ತಾಯವಾದ ಬಳಿಕ, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನಕಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಭಾನುವಾರ ನಿರಂತರವಾಗಿ ಪ್ರತಿಭಟನಾ ರ‍್ಯಾಲಿಗಳು ನಡೆದವು. ಈ ನಡುವೆ ಪೊಲೀಸರು ಮತ್ತು ಪ್ರತಿಭ
ಟನಕಾರರ ನಡುವೆ ಮಾತಿನ ಚಕಿಮಕಿಯೂ ನಡೆಯಿತು. ನ. 24ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಪೊಲೀಸ್ ಬ್ಯಾರಿಕೇಡ್ ಮುರಿಯಲು ಯತ್ನಿಸಿದ್ದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ. ಅಶ್ರುವಾಯು ಪ್ರಯೋಗವನ್ನು ವಿರೋಧಿಸಿ ಕೆಲಕಾಲ ಪ್ರತಿಭಟನೆ ನಡೆಯಿತು. ‘ಮತ್ತೆ ಅಶ್ರುವಾಯು ಪ್ರಯೋಗ ಬೇಡ: ಮಕ್ಕಳನ್ನು ರಕ್ಷಿಸಿ’ ಎನ್ನುವ ಘೋಷಣಾ ಫಲಕಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.

‘ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಪರ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದರೂ, ನಮ್ಮ ಹೋರಾಟ ಇಲ್ಲಿಗೇ ಮುಕ್ತಾಯವಾಗಿಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಪ್ರತಿಭಟನಕಾರರೊಬ್ಬರು ತಿಳಿಸಿದರು.

ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಪರ ಅಭ್ಯರ್ಥಿಗಳು ಜಯ ಗಳಿಸಿದ್ದರೂ, ಹಾಂಗ್‌ಕಾಂಗ್‌ನ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾರಿ ಲ್ಯಾಮ್ ಇದುವರೆಗೆ ಪ್ರತಿಭಟನಕಾರರ ಯಾವುದೇ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿಲ್ಲ.

ಏಪ್ರಿಲ್‌ನಲ್ಲಿ ಹಾಂಗ್‌ಕಾಂಗ್ ಆರೋಪಿಗಳ ಗಡಿಪಾರು ಮಸೂದೆಯನ್ನು ಮಂಡಿಸಿತ್ತು. ಇದನ್ನು ವಿರೋಧಿಸಿ ನಿತ್ಯವೂ ಸಾವಿರಾರು ಮಂದಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಟ್ರಂಪ್‌ಗೆ ಧನ್ಯವಾದ:ಈ ನಡುವೆ ಪ್ರತಿಭಟನೆಯನ್ನು ಬೆಂಬಲಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರತಿಭಟನಕಾರರು ಧನ್ಯವಾದ ತಿಳಿಸಿದ್ದು, ಭಾನುವಾರ ಅಮೆರಿಕದ ಧ್ವಜ ಮತ್ತು ಟ್ರಂಪ್ ಚಿತ್ರಗಳನ್ನು ಪ್ರದರ್ಶಿಸಿದರು. ‘ಟ್ರಂಪ್ ಅವರೇ ಹಾಂಗ್‌ಕಾಂಗ್‌ ಅನ್ನು ಸ್ವತಂತ್ರಗೊಳಿಸಿ’ ಎನ್ನುವ ಘೋಷಣಾ ಫಲಕಗಳನ್ನೂ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT