ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಶಾಲೆಯಲ್ಲಿ ನವೀನ ಪ್ರಯೋಗ

ಗೋಡೆಯಲ್ಲಿ ಅರಳಿದ ಪಠ್ಯಪುಸ್ತಕ ಪೂರಕ ಮಾದರಿ
Last Updated 20 ಏಪ್ರಿಲ್ 2018, 10:30 IST
ಅಕ್ಷರ ಗಾತ್ರ

ಬೈಂದೂರು: ಒಂದರಿಂದ ಐದನೆ ತರಗತಿಯ 39 ಮಕ್ಕಳು ಕಲಿಯುವ ಈ ಪುಟ್ಟ ಸರ್ಕಾರಿ ಶಾಲೆಗೆ ಬಸ್ ಹೊಂದುವ ಭಾಗ್ಯ ಸದ್ಯಕ್ಕಿಲ್ಲ. ಆದರೆ, ಮುಖ್ಯೋಪಾಧ್ಯಾಯ ಗಣಪ ಬಿಲ್ಲವ ಮತ್ತು ಸಹಶಿಕ್ಷಕಿ ಸುಲೇಖಾ ಈ ಶಾಲೆಯನ್ನೇ ಬಸ್ ಆಗಿ ಚಿತ್ರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಹೆದ್ದಾರಿಯ ಅಂಚಿನಲ್ಲಿ ನಾವುಂದ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿರುವ ಮಸ್ಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರತ್ಯೇಕವಾಗಿರುವ ಒಂದು ಕೊಠಡಿಯ ಹೊರಭಾಗವನ್ನು ಶಾಲಾ ಬಸ್‌ನಂತೆ ಕಾಣುವ ಹಾಗೆ ಚಿತ್ರಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕಿರಿಮಂಜೇಶ್ವರ ಗ್ರಾಮದ ನಾಗೂರು ಸರ್ಕಾರಿ ಉರ್ದು ಶಾಲೆಯ ಕಟ್ಟಡವನ್ನು ರೈಲಿನಂತೆ ಚಿತ್ರಿಸಲಾಗಿತ್ತು. ಅದನ್ನು ನೋಡಿದ ಬಳಿಕ ತಮ್ಮ ಶಾಲೆಯ ಒಂದು ಕೊಠಡಿಯನ್ನು ಬಸ್‌ನಂತೆ ಚಿತ್ರಿಸುವ ಪ್ರೇರಣೆ ದೊರೆಯಿತು ಎನ್ನುತ್ತಾರೆ ಉಭಯ ಅಧ್ಯಾಪಕರು. ಇದು ಶಾಲಾ ಕಟ್ಟಡವನ್ನು ಸ್ವಚ್ಛವೂ, ಸುಂದರವೂ ಆಗಿ ಇಡುತ್ತದೆ. ಇದನ್ನು ನೋಡಿ ಮಕ್ಕಳು ಸಂತಸ ಪಡುತ್ತಿದ್ದಾರೆ. ಒಳಗಡೆ ಲವಲವಿಕೆಯಿಂದ ಇರುತ್ತಾರೆ. ಪೋಷಕರೂ ಶಾಲೆಯತ್ತ ಒಲವು ತೋರುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳೂ ಬೆನ್ನುತಟ್ಟಿದ್ದಾರೆ ಎನ್ನುವ ಅವರು ಇದು ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವೃದ್ಧಿಗೆ ಕಾರಣವಾಗಬಹುದು ಎನ್ನುವ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಪಠ್ಯವಸ್ತು ಮಾದರಿಗಳು : ಇದರೊಂದಿಗೆ ಶಾಲೆಯ ಇನ್ನುಳಿದ ಕೊಠಡಿಗಳ ಎಲ್ಲ ಗೋಡೆಗಳ ಮೇಲೆ ತರಗತಿಗಳ ವಿವಿಧ ಪಠ್ಯಗಳಲ್ಲಿರುವ ಕಲಿಕಾ ವಸ್ತುಗಳಿಗೆ ಸಂಬಂಧಿಸಿದ ಚಿತ್ರ ಮತ್ತು ಮಾಹಿತಿಗಳನ್ನು ಬರೆದು ಅವುಗಳನ್ನು ಪಠ್ಯ ಪೂರಕ ಮಾದರಿಗಳಾಗಿ ಬಳಸಿಕೊಳ್ಳುವ ಪ್ರಯತ್ನವನ್ನೂ ಇಲ್ಲಿ ಮಾಡಲಾಗಿದೆ. ಯಾಂತ್ರಿಕ ಮತ್ತು ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಾದ ಉಳುಮೆ, ಬಿತ್ತನೆ, ನೀರು ಪೂರೈಕೆ, ನಾಟಿ, ಕಳೆ ನಿವಾರಣೆ, ಕಟಾವು, ಧಾನ್ಯ ಸಂಗ್ರಹಣೆಯಂತಹ ದೃಶ್ಯಗಳನ್ನು, ಸೂರ್ಯಮಂಡಲ, ಜಲಚಕ್ರ, ಅಳತೆಯ ಮಾನಗಳು, ರೇಖಾ ಗಣಿತದ ಆಕೃತಿಗಳು, ಸ್ವಾಭಾವಿಕ ಬೌಗೋಳಿಕ ವಿಭಾಗಗಳ ಚಿತ್ರಗಳ ಜತೆಗೆ ರಾಷ್ಟ್ರೀಯ ಮಹತ್ವದ ವಿಷಯಗಳ, ದಿನಗಳ, ವಿಜ್ಞಾನಿಗಳ, ಸಂಶೋಧನೆಗಳ, ವ್ಯಕ್ತಿಗಳ ಮಾಹಿತಿಗಳನ್ನು ಬರೆಯಲಾಗಿದೆ.

ಇವೆಲ್ಲವೂ ಪಠ್ಯಪೂರಕ ಸಾಮಗ್ರಿಗಳು ಎನ್ನುವ ಶಿಕ್ಷಕರು ಪಾಠ ಮಾಡುವ ಹಂತದಲ್ಲಿ ಮಕ್ಕಳನ್ನು ಅವುಗಳ ಬಳಿಗೊಯ್ದು ವಿವರಣೆ ನೀಡುವು
ದರಿಂದ ಅವುಗಳನ್ನು ಪ್ರತ್ಯಕ್ಷ ನೋಡಿದ ಅನುಭವ ಅವರಿಗಾಗುತ್ತದೆ. ಈ ಶಾಲೆಗೆ ಬರುವವರು ಮೀನುಗಾರ ಕುಟುಂಬದ ಮಕ್ಕಳು. ಅವರಿಗೆ ಗ್ರಾಮದ ಅನ್ಯ ಪ್ರದೇಶದ, ಚಟುವಟಿಕೆಗಳ ಪರಿಚಯ ಹಾಗೂ ಅನುಭವ ಕಡಿಮೆ ಇರುವುದರಿಂದ ಅವರ ಕಲಿಕೆಗೆ ತುಂಬ ಸಹಾಯ
ಕವಾಗುತ್ತದೆ ಎನ್ನುತ್ತಾರೆ.

ಎಲ್ಲ ಚಿತ್ರಗಳನ್ನು ಉಪ್ಪುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ಶಿಕ್ಷಕ ಕಾಳಿದಾಸ ಬಿ. ಬಡಿಗೇರ ಮತ್ತು ನಾವುಂದ ಸರ್ಕಾರಿ ಪದವಿ
ಪೂರ್ವ ಕಾಲೇಜಿನ ಕಲಾ ಶಿಕ್ಷಕ ಈರಯ್ಯ ಹಿರೇಮಠ್ ತಮ್ಮ ಬಿಡುವಿನ ವೇಳೆಯಲ್ಲಿ ರಚಿಸಿಕೊಟ್ಟಿದ್ದಾರೆ. ವೆಚ್ಚವನ್ನು ಯೋಜನೇತರ ಅನುದಾನ ಹಾಗೂ ವಂತಿಗೆಯಿಂದ ಭರಿಸಲಾಗಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಘು ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅವರು ಈ ಉಪಕ್ರಮವನ್ನು ಮೆಚ್ಚಿಕೊಂಡು ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಗಣಪ ಬಿಲ್ಲವ.

**

ಶಿಕ್ಷಕರ ಈ ಉಪಕ್ರಮ ಶಾಲಾ ಸೌಂದರ್ಯ ಹೆಚ್ಚಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಕೂಡಾ ಅಗತ್ಯ – ನರಸಿಂಹ ದೇವಾಡಿಗ, ಗ್ರಾಮ ಪಂಚಾಯಿತಿ ಅಧ್ಯಕ್ಷ.

**

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT