ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಬದಲಾವಣೆ ಸೂಚ್ಯಂಕ: ಭಾರತಕ್ಕೆ 9ನೇ ಸ್ಥಾನ

ಮಾಲಿನ್ಯ ನಿಯಂತ್ರಣಕ್ಕೆ ಆಸಕ್ತಿ ತೋರದ ಅಮೆರಿಕ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ
Last Updated 11 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (ಸಿಸಿಪಿಐ) ಇದೇ ಪ್ರಥಮ ಬಾರಿ ಭಾರತ ಮೊದಲ ಹತ್ತು ರಾಷ್ಟ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ.

ಮಂಗಳವಾರ ಇಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ಈ ಬಗ್ಗೆ ವರದಿ ಬಿಡುಗಡೆ ಮಾಡಲಾಯಿತು. ಸೂಚ್ಯಂಕದಲ್ಲಿ ಭಾರತ 9ನೇ ಸ್ಥಾನ ಪಡೆದಿದೆ. ಹವಾಮಾನ ನೀತಿಗೆ ಸಂಬಂಧಿಸಿದಂತೆ ಭಾರತ ಉತ್ತಮ ಕ್ರಮಗಳನ್ನು ಕೈಗೊಂಡಿದ್ದರೂ ಇಂಧನ ಬಳಕೆಯಲ್ಲಿ ಇನ್ನೂ ಮುಂಚೂಣಿಯಲ್ಲಿದೆ ಎಂದು ಸೂಚ್ಯಂಕ ಕುರಿತಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಳೆಯುಳಿಕೆ ಇಂಧನಕ್ಕೆ ನೀಡುವ ಸಬ್ಸಿಡಿಗಳನ್ನು ಹಂತ ಹಂತವಾಗಿ ತೆಗೆದು ಹಾಕುವ ಬಗ್ಗೆ ಭಾರತ ನೀಲನಕಾಶೆ ಸಿದ್ಧಪಡಿಸಬೇಕು. ಇದರಿಂದ, ಕಲ್ಲಿದ್ದಲು ಮೇಲಿನ ಅವಲಂಬನೆಯೂ ತಪ್ಪುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನವೀಕರಿಸಬಹುದಾದ ಇಂಧನ ಕುರಿತಾದ ವರ್ಗದಲ್ಲಿ ಭಾರತ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದಿದೆ. ನವೀಕರಿಸಬಹುದಾದ ಇಂಧನಗಳನ್ನು ಬಳಸಲು ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಇದಕ್ಕಾಗಿಯೇ ಅತ್ಯುತ್ತಮವಾದ ನೀತಿಗಳನ್ನು ಸಹ ರೂಪಿಸಲಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಇನ್ನೊಂದೆಡೆ, ಜಾಗತಿಕವಾಗಿ ಕಲ್ಲಿದ್ದಲು ಬಳಕೆಯೂ ಕಡಿಮೆಯಾಗುತ್ತಿದೆ ಮತ್ತು ನವೀಕರಿಸಬಹುದಾದ ಇಂಧನದ ಬಳಕೆ ಅಪಾರವಾಗಿ ಹೆಚ್ಚುತ್ತಿರುವುದು ಗಮನಾರ್ಹ ಸಂಗತಿ ಎಂದು ವಿವರಿಸಿದ್ದಾರೆ.

ಇಂಗಾಲ ಹೊರಸೂಸುವಿಕೆ ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಹಲವು ಅವಕಾಶಗಳಿವೆ. ಪ್ರಮುಖವಾಗಿ ಚೀನಾ ಮತ್ತು ಅಮೆರಿಕ ಈ ವಿಷಯದಲ್ಲಿ ಮುಖ್ಯ ಪಾತ್ರವಹಿಸಬಹುದು ಎಂದು ವರದಿ ಸಿದ್ಧಪಡಿಸಿದ ತಂಡದಲ್ಲಿದ್ದ ತಜ್ಞ ಉರ್ಸುಲಾ ಹಗೇನ್‌ ಅಭಿಪ್ರಾಯಪಟ್ಟಿದ್ದಾರೆ.

ಅತಿ ಹೆಚ್ಚು ಇಂಗಾಲ ಹೊರಸೂಸುವ ಚೀನಾ ಈ ಬಾರಿ ತನ್ನ ಸಾಧನೆಯನ್ನು ಅಲ್ಪಮಟ್ಟಿಗೆ ಸುಧಾರಿಸಿಕೊಂಡು, 30ನೇ ಸ್ಥಾನ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ ನೀಡುತ್ತಿದೆ. ಆದರೆ, ಇಂಧನದ ಬಳಕೆಯಲ್ಲಿ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಅಧ್ಯಯನಕ್ಕೆ ಮಾನದಂಡ

l ಇಂಗಾಲ ಹೊರಸೂಸುವಿಕೆ

l ನವೀಕರಿಸಬಹುದಾದ ಇಂಧನಗಳು

l ಇಂಧನದ ಬಳಕೆ

l ಹವಾಮಾನ ನೀತಿ

ಮಾಲಿನ್ಯ ನಿಯತಂತ್ರಣಕ್ಕೆ ನಿರಾಸಕ್ತಿ

ಜಾಗತಿಕವಾಗಿ ಹೋಲಿಸಿದರೆ ಹಲವು ರಾಷ್ಟ್ರಗಳಲ್ಲಿನ ಪರಿಸ್ಥಿತಿ ಆತಂಕ ಮೂಡಿಸಿದೆ ಎಂದು ಸಿಸಿಪಿಐ ವರದಿ ತಿಳಿಸಿದೆ. ಒಟ್ಟು 61 ರಾಷ್ಟ್ರಗಳಲ್ಲಿ ಹವಾಮಾನ ಕುರಿತು ಅಧ್ಯಯನ ಕೈಗೊಳ್ಳಲಾಗಿತ್ತು. ಅಧ್ಯಯನಕ್ಕೆ ನಾಲ್ಕು ವರ್ಗಗಳನ್ನು ಮಾಡಿ 14 ಅಂಶಗಳನ್ನು ನಿಗದಿಪಡಿಸಲಾಗಿತ್ತು. ಸೌದಿ ಅರೇಬಿಯಾ ಮತ್ತು ಅಮೆರಿಕ ಅತ್ಯಂತ ಕಳಪೆ ಸಾಮರ್ಥ್ಯ ತೋರಿವೆ. ಎಲ್ಲ ವರ್ಗಗಳಲ್ಲಿಯೂ ಅಮೆರಿಕ ಕಡಿಮೆ ಸಾಮರ್ಥ್ಯ ತೋರಿದೆ. ಸೂಚ್ಯಂಕಕ್ಕೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸದ ಕಾರಣ ಮೊದಲ ಮೂರು ಸ್ಥಾನಗಳನ್ನು ಯಾವುದೇ ರಾಷ್ಟ್ರವು ಪಡೆದಿಲ್ಲ.

ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಮತ್ತು ವಿಶೇಷವಾಗಿ ಅಮೆರಿಕದಲ್ಲಿ ಮಾಲಿನ್ಯ ನಿಯಂತ್ರಣ, ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ನೀತಿಗೆ ಸಂಬಂಧಿಸಿದಂತೆ ಅತ್ಯಂತ ಕಡಿಮೆ ಕಾರ್ಯಕ್ಷಮತೆ ತೋರಿವೆ. ಇದೊಂದು ಕಳವಳದ ಸಂಗತಿ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಮೂರು ರಾಷ್ಟ್ರಗಳ ಸರ್ಕಾರಗಳು, ಕಲ್ಲಿದ್ದಲು ಮತ್ತು ತೈಲ ಲಾಬಿಯಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿವೆ ಎಂದು ತಿಳಿಸಿದ್ದಾರೆ.

ರಾಷ್ಟ್ರ ಮತ್ತುಸ್ಥಾನ

ಸ್ವೀಡನ್‌ 4

ಡೆನ್ಮಾರ್ಕ್‌5

ಮೊರಕ್ಕೊ 6

ಬ್ರಿಟನ್‌ 7

ಕೆನಡಾ 55

ಆಸ್ಟ್ರೇಲಿಯಾ 56

ಇರಾನ್‌ 57

ಕೊರಿಯಾ 58

ತೈವಾನ್‌ 59

ಸೌದಿ ಅರೇಬಿಯಾ 60

ಅಮೆರಿಕ 61

***

ಅತಿ ಹೆಚ್ಚು ಮಾಲಿನ್ಯ ಮಾಡುವ ರಾಷ್ಟ್ರಗಳು ಪರಿವರ್ತನೆಗೆ ಅತ್ಯಂತ ಕಡಿಮೆ ಆಸಕ್ತಿ ತೋರುತ್ತಿವೆ. ಹವಾಮಾನ ಬದಲಾವಣೆಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕಾಗಿದೆ
–ಸ್ಟೆಫನ್‌ ಸಿಂಗರ್‌, ಹವಾಮಾನ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT