ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಅಮೆರಿಕ–ಇರಾನ್‌ ನಡುವಣ ಶಾಂತಿಯತ್ನಕ್ಕೆ ಭಾರತಕ್ಕಿದು ಸಕಾಲ, ಲಾಭದಾಯಕ

ವಿಶ್ಲೇಷಣೆ
Last Updated 15 ಜನವರಿ 2020, 10:04 IST
ಅಕ್ಷರ ಗಾತ್ರ

ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆಯ (ಜ.3) ನಂತರ ಕೊತಕೊತ ಕುದಿಯುತ್ತಾ, ಪ್ರತೀಕಾರಕ್ಕೆ ಹಂಬಲಿಸುತ್ತಿದ್ದಇರಾನ್‌ನ ಮನಸ್ಸುಗಳು ಅಮೆರಿಕ ನೆಲೆಗಳ ಮೇಲೆಕ್ಷಿಪಣಿಗಳು ಸ್ಫೋಟಗೊಂಡ ನಂತರ ತುಸು ತಣಿದಿವೆ. ಸುಲೇಮಾನಿಯಂಥ ‘ರಾಜಾಹುಲಿ’ಯನ್ನು ಹೊಡೆದ ಹುಮ್ಮಸ್ಸಿನಲ್ಲಿದ್ದ ಅಮೆರಿಕಕ್ಕೆ ಇರಾನ್‌ ಎದುರು ಹಾಕಿಕೊಂಡು ಮಧ್ಯಪ್ರಾಚ್ಯದಲ್ಲಿ ವಾಣಿಜ್ಯ ಹಿತಾಸಕ್ತಿಗಳನ್ನು ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಮನವರಿಕೆಯಾಗಿದೆ.

ಆರ್ಥಿಕ ದಿಗ್ಬಂಧನಗಳಿಂದ ಹೈರಾಣಾಗಿರುವ ಇರಾನ್‌ನ ಸರ್ಕಾರಕ್ಕೆ ಯುದ್ಧಬೇಕಿಲ್ಲ. ಆದರೆ ತಾವು ಆರಾಧಿಸುತ್ತಿದ್ದ ನಾಯಕನ ಅಗಲಿಕೆಯ ನೋವಿನಲ್ಲಿರುವ ಜನರು ಯುದ್ಧದ ಪರವಾಗಿದ್ದಾರೆ. ಆದರೆ ಅಮೆರಿಕದಲ್ಲಿ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತ. ಅಲ್ಲಿನ ಜನರಿಗೆ ಮತ್ತು ಬಹುತೇಕ ಜನಪ್ರತಿನಿಧಿಗಳಿಗೆ ಯುದ್ಧಬೇಕಿಲ್ಲ. ಆದರೆ ವಾಗ್ದಂಡನೆಯ ತೂಗುಗತ್ತಿಯಡಿ ಇರುವ ಮತ್ತುಮತ್ತೊಂದು ಚುನಾವಣೆಗೆ ಜನಾಭಿಪ್ರಾಯ ಸಿದ್ಧಪಡಿಸಬೇಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಸಂಘರ್ಷಬೇಕಿದೆ.

ವಿಶ್ವಸಂಸ್ಥೆಯಲ್ಲಿ ಎರಡೂ ದೇಶಗಳ ರಾಯಭಾರಿಗಳು ನೀಡಿರುವ ಪ್ರತಿಕ್ರಿಯೆ ಮತ್ತು ಎರಡೂ ದೇಶಗಳ ಪ್ರಭಾವಿ ನಾಯಕರುಗಳು ಇರಾನ್ ದಾಳಿಯ ನಂತರ ನಡೆದುಕೊಂಡ ರೀತಿ ಗಮನಿಸಿದರೆ ಅಲ್ಲಿ ಇನ್ನೊಂದು ಕಥನ ಕಾಣಿಸುತ್ತದೆ. ‘ಬೇಷರತ್ ಮಾತುಕತೆ ಆರಂಭಿಸಲು ಬದ್ಧ’ ಎಂದು ಅಮೆರಿಕ ಘೋಷಿಸಿದ್ದರೆ, ‘ಉದ್ವಿಗ್ನತೆ ಶಮನಗೊಳಿಸಲು ಬದ್ಧ’ ಎಂದು ಇರಾನ್ ನುಡಿದಿದೆ. ಎರಡರ ಅರ್ಥವೂ ಒಂದೇ ಅಲ್ಲವೇ?ತುಸುವೇ ಮುತುವರ್ಜಿ ವಹಿಸಿದರೂ ಭಾರತಕ್ಕೆ ಈ ಕಥನದಲ್ಲಿ ಮುಖ್ಯ ಪಾತ್ರ ವಹಿಸುವ ಅವಕಾಶವೂ ನಿಚ್ಚಳವಾಗಿದೆ.

ಶಾಂತಿಗಾಗಿ ತುಡಿಯುತ್ತಿರುವ ಎರಡೂ ದೇಶಗಳಿಗೆ ಈಗ ನಂಬಲರ್ಹ, ವಿಶ್ವ ಒಪ್ಪಿಕೊಳ್ಳಬಲ್ಲ ಮತ್ತು ತಕ್ಕಮಟ್ಟಿಗೆ ಪ್ರಬಲ ದೇಶಗಳಲ್ಲಿ ಪ್ರಭಾವಿ ಎನಿಸಿರುವಸಂಧಾನಕಾರನೊಬ್ಬ ಬೇಕಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಪಾತ್ರ ನಿರ್ವಹಿಸಬಲ್ಲರು ಎಂಬ ಅಭಿಪ್ರಾಯ ಅಲ್ಲಲ್ಲಿ ಕೇಳಿಬರಲು ಆರಂಭಿಸಿದೆ.

ಗಲ್ಫ್‌ನಲ್ಲಿ ಯುದ್ಧವಾದರೆ ಅಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಭಾರತೀಯರಿಗೆ ಸಂಕಷ್ಟ. ಹಿಂದೆ ಕುವೈತ್‌ ಮೇಲೆ ಇರಾಕ್‌ ಆಕ್ರಮಣ ಮಾಡಿದಾಗ 1.70 ಲಕ್ಷ ಭಾರತೀಯರನ್ನು ವಿಮಾನಗಳಲ್ಲಿ ಸ್ವದೇಶಕ್ಕೆ ಕರೆತರುವಂತಾದ ಸಂಕಷ್ಟವನ್ನು ಭಾರತ ಇಂದಿಗೂ ಮರೆತಿಲ್ಲ. ಭಾರತದ ಆರ್ಥಿಕ ಸದೃಢತೆಯ ಚಾಲನಾ ಶಕ್ತಿಯಾಗಿರುವ ಇಂಧನ ಭದ್ರತೆ ಕಾಪಾಡಿಕೊಳ್ಳಲೂ ಗಲ್ಫ್‌ ದೇಶಗಳಲ್ಲಿ ಶಾಂತಿ ನೆಲೆಸುವುದು ಅನಿವಾರ್ಯ.

ಅಪನಂಬಿಕೆ, ಸಂಘರ್ಷದ ನಂತರ ಇದೀಗ ಸಂಧಾನಘಟ್ಟಕ್ಕೆ ಮುಟ್ಟಿದಂತೆ ಕಾಣಿಸುತ್ತಿರುವಅಮೆರಿಕ ಮತ್ತು ಇರಾನ್‌ಗಳೊಂದಿಗೆ ಭಾರತಕ್ಕೆ ಮೊದಲಿನಿಂದಲೂಉತ್ತಮ ಸಂಬಂಧವಿದೆ. ಅಫ್ಗಾನಿಸ್ತಾನಕ್ಕೆ ಸಮುದ್ರಮಾರ್ಗದ ನಂಟು ಕಲ್ಪಿಸುವಇರಾನ್‌ನ ಚಾಬಹಾರ್ ಬಂದರು ಅಭಿವೃದ್ಧಿಗಾಗಿ ಭಾರತ ದೊಡ್ಡಮೊತ್ತದ ಹಣ ಹೂಡಿದೆ. ಇದು ಪಾಕಿಸ್ತಾನದ ಗ್ವಾದರ್‌ನಲ್ಲಿ ಚೀನಾ ನಿರ್ಮಿಸುತ್ತಿರುವ ಬಂದರಿಗೆ ಸಮೀಪದಲ್ಲಿದ್ದು, ಈ ಬಂದರಿನ ಕಾರ್ಯಚಟುವಟಿಕೆ,ಚೀನಾ ನೌಕಾಪಡೆಯ ಕಾರ್ಯಾಚರಣೆಯ ಮೇಲೆ ಕಣ್ಣಿಡಲು ಭಾರತಕ್ಕೆ ಚಾಬಹಾರ್‌ ಅನಿವಾರ್ಯ.

ಅಫ್ಗಾನಿಸ್ತಾನದಲ್ಲಿ ಭಾರತದ ಹೂಡಿಕೆ ಗಣನೀಯ ಪ್ರಮಾಣದಲ್ಲಿದೆ. ಪಾಕಿಸ್ತಾನದ ಹಿಡಿತದಲ್ಲಿರುವ ತಾಲಿಬಾನ್‌ ಮತ್ತೆ ಅಲ್ಲಿ ಪ್ರಭಾವಿಯಾಗದಂತೆ ತಡೆಯಲು ಭಾರತದ ಗುಪ್ತಚರ ಸಂಸ್ಥೆ ‘ರಾ’ಶ್ರಮಿಸುತ್ತಿರುವ ವಿಚಾರ ಹಲವು ಬಾರಿ ವಿವಿಧ ವೇದಿಕೆಗಳಲ್ಲಿ ಪ್ರಸ್ತಾಪವಾಗಿದೆ. ಭಾರತದಿಂದ ಅಫ್ಗಾನಿಸ್ತಾನಕ್ಕೆ ನೇರ ಭೂಮಾರ್ಗ ಇಲ್ಲ. ಚಾಬಹಾರ್ ಬಂದರು ಮೂಲಕ ಅಫ್ಗಾನಿಸ್ತಾನದ ಜೊತೆಗೆ ವಾಣಿಜ್ಯ ಸಂಪರ್ಕ ಬೆಳೆಸುವುದು ಭಾರತದ ತಂತ್ರವಾಗಿತ್ತು. ಇರಾನ್ ವಿರುದ್ಧ ಅಮೆರಿಕ ದಿಗ್ಬಂಧನ ಹೇರಿದಾಗಲೂಚಾಬಹಾರ್‌ಗೆ ವಿನಾಯಿತಿ ದಕ್ಕಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು.

ಪಾಕಿಸ್ತಾನಕ್ಕೆ ಭಾರತ ಪೂರ್ವದಲ್ಲಿದ್ದರೆ ಇರಾನ್ ಮತ್ತು ಅಫ್ಗಾನಿಸ್ತಾನ ಪಶ್ಚಿಮದಲ್ಲಿವೆ. ತನ್ನ ಪೂರ್ವ ಗಡಿಯಲ್ಲಿ ಕಿರಿಕಿರಿಯಿದ್ದರೆ ಅದು ಅಲ್ಲಿನ ಸೇನಾ ನಿಯೋಜನೆಯನ್ನುಪಶ್ಚಿಮ ಗಡಿಯತ್ತ ಸ್ಥಳಾಂತರಿಸಲು ಆಗುವುದಿಲ್ಲ ಎನ್ನುವುದು ಮತ್ತೊಂದು ಲೆಕ್ಕಾಚಾರ. ಇವೆಲ್ಲವೂ ಸಾಧ್ಯವಾಗಲು ಭಾರತಕ್ಕೆ ಇರಾನ್‌ನ ಜೊತೆಗೆ ಸೌಹಾರ್ದ ಸಂಬಂಧ ಬೇಕು. ಇರಾನ್ ಜೊತೆಗೆ ಸಂಬಂಧ ಬೆಳೆಸಿಕೊಳ್ಳುವುದನ್ನೇ ನೆಪ ಮಾಡಿಕೊಂಡು ಅಮೆರಿಕ ಭಾರತದಿಂದ ದೂರವಾಗದಂಥ ಎಚ್ಚರಿಕೆಯೂ ಬೇಕು.

ನರೇಂದ್ರ ಮೋದಿ ಅವರಿಗೆ ಸದ್ಯದ ಮಟ್ಟಿಗೆ ಸಂಧಾನದ ಪ್ರಯತ್ನ ಆರಂಭಿಸುವ ಶಕ್ತಿ ಖಂಡಿತ ಇದೆ. ಭಾರತ ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಿ,ಸಮಾನ ಮನಸ್ಕ ದೇಶಗಳಾದ ಜಪಾನ್, ಸೌದಿ ಅರೇಬಿಯಾ, ಬ್ರಿಟನ್‌ನಂಥ ದೇಶಗಳುಸಂಧಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿದರೆ ಅದು ಇನ್ನಷ್ಟು ಪರಿಣಾಮಕಾರಿಯಾಗಬಲ್ಲದು. ಆಗ ಇಂಥ ಶಾಂತಿಯತ್ನಗಳನ್ನು ಅಮೆರಿಕದ ಅಧ್ಯಕ್ಷಡೊನಾಲ್ಡ್‌ ಟ್ರಂಪ್ ಅಥವಾ ಇರಾನ್‌ನ ಸರ್ವೋಚ್ಚ ನಾಯಕ ಆಯಾತ್‌ಉಲ್ಲಾ ಅಲಿಖೊಮೇನಿ ಸಾರಾಸಗಟಾಗಿ ತಳ್ಳಿಹಾಕಲು ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT