ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಿಂ ಸುಲೇಮಾನಿ ಅಂತಿಮ ಯಾತ್ರೆ ವೇಳೆ ಕಾಲ್ತುಳಿತ: 35ಕ್ಕೂ ಹೆಚ್ಚು ಜನ ಸಾವು

Last Updated 7 ಜನವರಿ 2020, 16:11 IST
ಅಕ್ಷರ ಗಾತ್ರ

ಟೆಹರಾನ್:ಅಮೆರಿಕದ ಕ್ಷಿಪಣಿ ದಾಳಿಯಲ್ಲಿ ಹತ್ಯೆಯಾದ ಇರಾನಿನರೆವಲ್ಯೂಷನರಿ ಗಾರ್ಡ್ಸ್‌ನ ಕುದ್ಸ್‌ ಪಡೆಯ ಮುಖ್ಯಸ್ಥ ಮೇಜರ್‌ ಜನರಲ್‌ ಖಾಸಿ ಸುಲೇಮಾನಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೆಳೆ ಸಂಭವಿಸಿದ ಕಾಲ್ತುಳಿತದಲ್ಲಿ 35 ಮಂದಿ ಮೃತಪಟ್ಟಿದ್ದಾರೆ. 190 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿ ಹೇಳಿದೆ.

ಸುಲೇಮಾನಿ ಮೃತದೇಹವನ್ನು ಅಂತ್ಯಕ್ರಿಯೆಗೆ ಅವರ ಹುಟ್ಟೂರು ಕರ್ಮನ್‌ಗೆ ಮಂಗಳವಾರ ಮೆರವಣಿಗೆಯಲ್ಲಿ ತರಲಾಗಿತ್ತು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಈ ಘಟನೆ ನಡೆದಿದೆ.

‘ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಇದರಿಂದ ಸಾವು–ನೋವುಗಳು ಸಂಭವಿಸಿದ್ದು, ಸುಲೇಮಾನಿ ಅವರ ಅಂತ್ಯಕ್ರಿಯೆ ವಿಳಂಬವಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ಐಎಸ್‌ಎನ್‌ಎ ಸುದ್ದಿ ಸಂಸ್ಥೆ ಹೇಳಿದೆ. ಆದರೆ, ಅಂತ್ಯಕ್ರಿಯೆ ಯಾವಾಗ ನಡೆಯಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

‘ಅಂತಿಮ ಯಾತ್ರೆ ವೇಳೆ ಅನೇಕರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಇರಾನ್ ತುರ್ತು ವೈದ್ಯಕೀಯ ಸೇವೆಗಳ ಮುಖ್ಯಸ್ಥ ಪಿರ್‌ಹೋಸಿನ್ ಕೂಲಿವಾಂಡ್ ತಿಳಿಸಿದ್ದಾರೆ.

ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸುಲೇಮಾನಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಇಂದಿಗೆಮೂರು ದಿನಗಳ ಶೋಕಾಚರಣೆ ಮುಕ್ತಾಯವಾಗಿದ್ದು, ಅಂತ್ಯಕ್ರಿಯೆಗಾಗಿಪಾರ್ಥಿವ ಶರೀರವನ್ನು ಕರ್ಮನ್‌ಗೆ ತರಲಾಗಿದೆ. ಶೋಕತಪ್ತರಾದ ಲಕ್ಷಾಂತರ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸುಲೇಮಾನಿಗೆ ಜನಸಾಗರಭಾವನಾತ್ಮಕ ಗೌರವ ಸಲ್ಲಿಸಿತು.

ಹೆಚ್ಚಿದ ಆತಂಕ

ವಾಷಿಂಗ್ಟನ್‌ : ಸುಲೇಮಾನಿ ಹತ್ಯೆ ನಂತರ ಅಮೆರಿಕ ಮತ್ತು ಇರಾನ್‌ ನಡುವೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇರಾನ್‌ನಲ್ಲಿ ಅಮೆರಿಕನ್ನರ ಕುಟುಂಬಗಳ ಆತಂಕವನ್ನು ಹೆಚ್ಚಿಸಿದೆ.

ಇರಾನ್‌ನಲ್ಲಿ ಒತ್ತೆಯಾಳಾಗಿದ್ದ ನ್ಯೂ ಜೆರ್ಸಿಯ ವಿದ್ಯಾರ್ಥಿಯೊಬ್ಬ ಬಿಡುಗಡೆಯಾದ ನಂತರ, ಇತರೆ ಒತ್ತೆಯಾಳುಗಳು ಬಿಡುಗಡೆಯಾಗಬಹುದು ಎಂಬ ಭರವಸೆ ಮೂಡಿತ್ತು. ಆದರೆ, ಈಗಿನ ಪರಿಸ್ಥಿತಿಯು ಆತಂಕವನ್ನು ಹೆಚ್ಚಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು, ವಿದೇಶದಲ್ಲಿ ಒತ್ತೆಯಾಳಾಗಿರುವ ಅಮೆರಿಕನ್ನರನ್ನು ವಾಪಸು ಕರೆತರುವಲ್ಲಿ ಆದ್ಯತೆ ನೀಡಿದೆ. ಆದರೆ, ಇರಾನ್‌ನಲ್ಲಿ ಬೆರಳೆಕೆಯಷ್ಟಿರುವ ಅಮೆರಿಕದ ಒತ್ತೆಯಾಳುಗಳನ್ನು ವಾಪಸು ತರುವ ನಿರೀಕ್ಷೆ ಮಂಕಾದಂತೆ ಕಂಡುಬರುತ್ತಿದೆ.

ಅಮೆರಿಕನ್ನರನ್ನು ಇರಾನ್‌ನಿಂದ ಮುಕ್ತಗೊಳಿಸಲು ಟ್ರಂಪ್‌ ಆಡಳಿತವು ಬದ್ಧವಾಗಿದೆ ಎಂದು ಹೇಳಿದೆ. ಇಸ್ಲಾಮಿಕ್ ಗಣರಾಜ್ಯದ ಯಾವುದೇ ದಾಳಿಯನ್ನು ಎದುರಿಸಲು ಸಿದ್ಧ ಎಂದೂ ಹೇಳಿದೆ.

ಇರಾನ್‌ಗೆ ಬೆದರಿಕೆಯೊಡ್ಡಬೇಡಿ: ಟ್ರಂಪ್‌ಗೆ ರೌಹಾನಿ ಎಚ್ಚರಿಕೆ

‘ಎಂದಿಗೂ ಇರಾನ್‌ಗೆ ಬೆದರಿಕೆಯೊಡ್ಡಬೇಡಿ’ ಎಂದು ಅಧ್ಯಕ್ಷ ಹಸನ್‌ ರೌಹಾನಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಇರಾನ್‌ ನಡುವಣ ಸಂಘರ್ಷ ಸ್ಥಿತಿ ಇನ್ನಷ್ಟು ಉಲ್ಬಣಗೊಂಡಿದೆ. ಇರಾನ್‌ನ ಕಮಾಂಡರ್‌ ಖಾಸಿಂ ಸುಲೇಮಾನಿ ಹತ್ಯೆಗೆ ಯಾವುದೇ ರೀತಿಯಲ್ಲಿ ಪ್ರತೀಕಾರಕ್ಕೆ ಮುಂದಾದರೆ ಹಿಂದೆಂದೂ ಕಾಣದ ರೀತಿಯ ಪ್ರತಿದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ಕೊಟ್ಟಿದ್ದಾರೆ. ದಾಳಿ ನಡೆಸುವುದಕ್ಕಾಗಿ ಇರಾನ್‌ನ 52 ಸ್ಥಳಗಳನ್ನು ಗುರುತಿಸಿರುವುದಾಗಿಯೂ ಅವರು ಹೇಳಿದ್ದಾರೆ. ಈ ಹೇಳಿಕೆಗೆ ರೌಹಾನಿ ತಿರುಗೇಟು ನೀಡಿದ್ದಾರೆ.

‘52 ಎಂದು ಸಂಖ್ಯೆಯನ್ನು ಉಲ್ಲೇಖಿಸುವವರು 290 ಎಂಬ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇರಾನ್‌ಗೆ ಬೆದರಿಕೆ ಹಾಕಬೇಡಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 1988ರ ಜುಲೈನಲ್ಲಿ ಅಮೆರಿಕದ ಯುದ್ಧನೌಕೆಯು ಇರಾನ್‌ ಏರ್‌–655 ಪ್ರಯಾಣಿಕರ ವಿಮಾನವನ್ನು ಕೊಲ್ಲಿಯಲ್ಲಿ ಹೊಡೆದುರುಳಿಸಿದಾಗ 290 ಮಂದಿ ಮೃತಪಟ್ಟಿದ್ದರು.

ಅಮೆರಿಕದ ಯೋಧರು ಅಥವಾ ಸೊತ್ತುಗಳ ಮೇಲೆ ಇರಾನ್‌ನಿಂದ ಯಾವುದೇ ರೀತಿಯ ದಾಳಿ ನಡೆದರೆ ಆ ದೇಶಕ್ಕೆ ಮುಖ್ಯವಾಗಿರುವ ಕೇಂದ್ರಗಳು ಮತ್ತು ಇರಾನ್‌ ಸಾಂಸ್ಕೃತಿಕ ಕೇಂದ್ರಗಳ ಮೇಲೆ ಬಹುದೊಡ್ಡ ದಾಳಿ ನಡೆಸಲಾಗುವುದು ಎಂದು ಟ್ರಂಪ್‌ ಹೇಳಿದ್ದಾರೆ.

ಎಲ್ಲೆಡೆ ಪ್ರಕ್ಷುಬ್ಧತೆ: ಗುಟೆರಸ್‌ ಕಳವಳ

ವಿಶ್ವಸಂಸ್ಥೆ : ಅಮೆರಿಕ–ಇರಾನ್‌ ನಡುವೆ ಸಂಘರ್ಷ ಪರಿಸ್ಥಿತಿ ಉಂಟಾಗಿರುವ ನಡುವೆಯೇ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಬಗ್ಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಇಂಥ ಘರ್ಷಣೆಗಳು ಶತಮಾನದಲ್ಲಿಯೇ ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗುತ್ತವೆ. ಅನಿರೀಕ್ಷಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಹೆಚ್ಚಿನ ತೊಂದರೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

‘ಹೊಸ ವರ್ಷವು ಜಗತ್ತಿನಲ್ಲಿಯೇ ಗೊಂದಲದ ವಾತಾವರಣವನ್ನು ಸರಷ್ಟಿಸಿದೆ. ಸದ್ಯ ಅತ್ಯಂತ ಅಪಾಯಕಾರಿ ಕಾಲದಲ್ಲಿದ್ದೇವೆ. ಎಲ್ಲೆಡೆ ಪ್ರಕ್ಷುಬ್ಧತೆ ಹೆಚ್ಚುತ್ತಿದೆ. ಇದನ್ನು ಶಮನಗೊಳಿಸುವ ಅಗತ್ಯವಿದೆ’ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT