ಶನಿವಾರ, ಜನವರಿ 18, 2020
20 °C
ಉಕ್ರೇನ್‌ನ ಜೆಟ್‌ಲೈನರ್‌ ವಿಮಾನ ದುರಂತ

ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಬೋಯಿಂಗ್‌ಗೆ ಆಹ್ವಾನ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೆಹರಾನ್‌: ಉಕ್ರೇನ್‌ನ ಜೆಟ್‌ಲೈನರ್‌ ವಿಮಾನ ದುರಂತದ ಕುರಿತ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಬೋಯಿಂಗ್‌ ಕಂಪನಿಗೆ ಇರಾನ್‌ನ ಅಧಿಕಾರಿಗಳು ಆಹ್ವಾನ ನೀಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತನಿಖೆಯಲ್ಲಿ ಭಾಗಿಯಾಗುವಂತೆ ಉಕ್ರೇನ್‌ಗೂ ಆಹ್ವಾನ ನೀಡಿದ್ದೇವೆ. ಇತರ ದೇಶಗಳ ತಜ್ಞರಿಗೂ ಸ್ವಾಗತ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್‌ ಮೌಸವಿ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಮಾನ ದುರಂತದಲ್ಲಿ 176 ಮಂದಿ ಮೃತಪಟ್ಟಿದ್ದರು.

ದತ್ತಾಂಶ ನೀಡಿದ ಅಮೆರಿಕ ಅಧಿಕಾರಿಗಳು: ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮಹತ್ವದ ದತ್ತಾಂಶವನ್ನು ಅಮೆರಿಕದ ಅಧಿಕಾರಿಗಳು ನೀಡಿದ್ದಾರೆ ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ವಾದಿಮ್ ಪ್ರಿಸ್ಟೈಕೊ ಹೇಳಿದ್ದಾರೆ.

ವಿಡಿಯೊ ವೈರಲ್: ವಿಮಾನಕ್ಕೆ ಕ್ಷಿಪಣಿ ಬಡಿದ ಸಂದರ್ಭದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಹಾರಿಸಿದ್ದ ಕ್ಷಿಪಣಿಗಳ ಪೈಕಿ ಒಂದು ಆಕಸ್ಮಿಕವಾಗಿ ವಿಮಾನಕ್ಕೆ ಬಡಿದು ದುರಂತ ಸಂಭವಿಸಿದೆ ಎಂದು ಅಮೆರಿಕ, ಕೆನಡಾ ಹಾಗೂ ಇಂಗ್ಲೆಂಡ್‌ ಅಧಿಕಾರಿಗಳು ಆರೋಪಿಸಿದ್ದಾರೆ.

ಆರೋಪ ತಳ್ಳಿಹಾಕಿದ ಇರಾನ್‌: ವಿಮಾನವು ಕ್ಷಿಪಣಿ ದಾಳಿಯಿಂದ ಪತನಗೊಂಡಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಇರಾನ್‌, ಈ ಬಗ್ಗೆ ಮಾಹಿತಿ ಇದ್ದರೆ ಅದನ್ನು ಹಂಚಿಕೊಳ್ಳುವಂತೆ ಅಮೆರಿಕ ಮತ್ತು ಕೆನಡಾಕ್ಕೆ ಕೋರಿದೆ.

‘ವಿಮಾನಕ್ಕೆ ಕ್ಷಿಪಣಿ ಅಪ್ಪಳಿಸಿಲ್ಲ’ ಎಂದು ಇರಾನ್‌ನ ನಾಗರಿಕ ವಿಮಾನಯಾನ ಸಂಸ್ಥೆಯ ಮುಖ್ಯಸ್ಥ ಅಲಿ ಅಬೆದ್‌ಜಾದೆ ಶುಕ್ರವಾರ ಹೇಳಿದ್ದಾರೆ.

‘ಕಪ್ಪು ಪೆಟ್ಟಿಗೆಯಿಂದ ಲಭಿಸುವ ಮಾಹಿತಿಯನ್ನು ಹೊರತುಪಡಿಸಿ ಇತರ ಯಾವುದೇ ಹೇಳಿಕೆಗಳು ಅಧಿಕೃತವಲ್ಲ’ ಎಂದಿದ್ದಾರೆ.

‘ವಿಮಾನದ ಕಪ್ಪುಪೆಟ್ಟಿಗೆಯಲ್ಲಿರುವ ದತ್ತಾಂಶವನ್ನು ಪಡೆಯಲು ಒಂದು ತಿಂಗಳ ಸಮಯ ಬೇಕು. ಅದನ್ನು ಪಡೆಯಲು ಸಾಧ್ಯವಾಗದಿದ್ದರೆ, ಅಂತರರಾಷ್ಟ್ರೀಯ ಮಟ್ಟದ ತಜ್ಞರ ಸಹಕಾರ ಕೋರಲಾಗುವುದು’ ಎಂದು ಇರಾನ್‌ನ ತನಿಖಾ ತಂಡದ ಮುಖ್ಯಸ್ಥ ಹಸನ್‌ ರೆಜೈಫರ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು