ಶುಕ್ರವಾರ, ಮೇ 27, 2022
28 °C
ಸಿರಿಯಾದ ಇದ್ಲಿಬ್‌ನಲ್ಲಿ ಅಮೆರಿಕ ಸೇನೆ ಕಾರ್ಯಾಚರಣೆ

ಐಎಸ್‌ ಸ್ಥಾಪಕ ಅಬುಬಕರ್‌ ಅಲ್‌ ಬಗ್ದಾದಿ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ : ಅಮೆರಿಕದ ವಿಶೇಷ ಪಡೆ ಸಿರಿಯಾದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಉಗ್ರರ ಸಂಘಟನೆಯಾದ ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಸಂಸ್ಥಾಪಕ, ವಿಶ್ವದ ‘ನಂಬರ್ ಒನ್‌’ ಭಯೋತ್ಪಾದಕ ಅಬುಬಕರ್‌ ಅಲ್‌ ಬಗ್ದಾದಿ ಹತನಾಗಿದ್ದಾನೆ.

ಶನಿವಾರ ರಾತ್ರಿ ಸಿರಿಯಾದ ವಾಯವ್ಯ ಭಾಗದಲ್ಲಿ ಕಾರ್ಯಾಚರಣೆ ನಡೆದಿದೆ. ಸೇನೆ, ಶ್ವಾನಪಡೆ ಬೆನ್ನಟ್ಟಿದಾಗ ತಪ್ಪಿಸಿಕೊಳ್ಳುವ ಮಾರ್ಗ ಇಲ್ಲದಾಗ ಬಾಗ್ದಾದಿ ಸ್ವತಃ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಆತನ ಮೂವರು ಮಕ್ಕಳು ಸತ್ತಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ದೃಢಪಡಿಸಿದರು. ‘ವಿಶ್ವದ ನಂಬರ್‌ ಒನ್‌ ಉಗ್ರನಿಗೆ ಅಮೆರಿಕ ಶನಿವಾರ ರಾತ್ರಿ ‘ನ್ಯಾಯ’ ಒದಗಿಸಿದೆ. ಆತ ಸತ್ತಿದ್ದಾನೆ’ ಎಂದು ಪ್ರಕಟಿಸಿದರು.

‘48 ವರ್ಷ ವಯಸ್ಸಿನ ಬಗ್ದಾದಿ ನಾಯಿಯಂತೆ, ಹೇಡಿಯಂತೆ ಸತ್ತಿದ್ದಾನೆ. ತನ್ನ ಬದುಕಿನ ಕಡೆಯ ಕ್ಷಣಗಳಲ್ಲಿ ಆತ ರಕ್ಷಣೆಗಾಗಿ ಅಂಗಲಾಚುತ್ತಿದ್ದ. ರೋಧಿಸುತ್ತಿದ್ದ. ಅಳುತ್ತಿದ್ದ’ ಎಂದರು.

‘ನಾನು, ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಇಡೀ ಕಾರ್ಯಾಚರಣೆಯ ನೇರ ಪ್ರಸಾರವನ್ನು ಶ್ವೇತಭವನದಲ್ಲಿ ವೀಕ್ಷಿಸಿದೆವು. ಚಲನಚಿತ್ರಕ್ಕಿಂತಲೂ ಉತ್ತಮವಾಗಿತ್ತು’ ಎಂದು ಬಣ್ಣಿಸಿದರು.

ಸಿರಿಯಾದ ಇದ್ಲಿಬ್‌ ಭಾಗದಲ್ಲಿ ಕಾರ್ಯಾಚರಣೆ ನಡೆದಿದೆ. ಸೇನಾ ಹೆಲಿಕಾಪ್ಟರ್‌ಗಳ ನೆರವು ಪಡೆಯಲಾಗಿತ್ತು. ಪೂರಕವಾಗಿ ಸೇನೆಯ ರೊಬೊಟ್‌ ಅನ್ನು ಸಜ್ಜಾಗಿ ಇಡಲಾಗಿತ್ತು. ಆದರೆ, ಅದನ್ನು ಬಳಸಲಿಲ್ಲ.

‘ಅಬುಬಕರ್‌ ಅಲ್‌ ಬಗ್ದಾದಿ ಐಎಸ್‌ ಉಗ್ರ ಸಂಘಟನೆ ಸ್ಥಾಪಕ. ನಿರ್ದಯಿ ಮತ್ತು ಹಿಂಸಾತ್ಮಕ ಕೃತ್ಯ ನಡೆಸುವ ಸಂಘಟನೆ ಎಂದೇ ಐಎಸ್‌ ಹೆಸರಾಗಿತ್ತು. ಅಮೆರಿಕ ಸೇನೆ ಈತನ ನೆಲೆ ಪತ್ತೆ
ಹಚ್ಚಲು ಬೆನ್ನತ್ತಿತ್ತು. ಜೀವಂತವಾಗಿ ಬಂಧಿಸುವುದು ಅಥವಾ ಹತ್ಯೆ ಮಾಡುವುದು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ನನ್ನ ಆಡಳಿತದ ಅತ್ಯುನ್ನತ ಗುರಿಯಾಗಿತ್ತು’ ಎಂದರು.

ಸುರಂಗ ಮಾರ್ಗದಲ್ಲಿ ವಿಶೇಷ ಪಡೆ ಬೆನ್ನಟ್ಟಿದಾಗ ಬಾಗ್ದಾದಿ ಪಾರಾಗಲು ಓಡುತ್ತಿದ್ದ. ಅನ್ಯರನ್ನು ದುಃಸ್ವಪ್ನವಾಗಿ ಕಾಡಿದ್ದ ಆತ ತನ್ನ ಕಡೆಯ ಅವಧಿಯಲ್ಲಿ ಭಯಭೀತನಾಗಿದ್ದ. ಅಂತಿಮವಾಗಿ ಅಮೆರಿಕ ಪಡೆಗಳು ಆತನಿಗೆ ನ್ಯಾಯ ಒದಗಿಸಿದವು’ ಎಂದು ಟ್ರಂಪ್‌ ಘಟನೆಯನ್ನು ವಿವರಿಸಿದರು. 

‘ಬಾಗ್ದಾದಿ ಹತ್ಯೆ ಉಗ್ರರ ನಾಯಕರನ್ನು ಹತ್ತಿಕ್ಕುವಲ್ಲಿ ಅಮೆರಿಕದ ಬದ್ಧತೆಯನ್ನು ತೋರಿಸಿದೆ. ಈ ಘಟನೆ ಐಎಸ್‌ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳ ಒಟ್ಟು ಸೋಲಾಗಿದೆ’ ಎಂದು ಟ್ರಂಪ್‌ ಬಣ್ಣಿಸಿದರು.

‘ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆಯ ಯಾರೊಬ್ಬರೂ ಮೃತಪಟ್ಟಿಲ್ಲ. ಬಾಗ್ದಾದಿಯ ಅಸಂಖ್ಯ ಬೆಂಬಲಿಗರು ಸತ್ತಿದ್ದಾರೆ. ಕೆಲವರನ್ನು ಬಂಧಿಸಿದ್ದೇವೆ. ಇದು ರಹಸ್ಯ ಕಾರ್ಯಾಚರಣೆ ಆಗಿತ್ತು. ಶನಿವಾರ ಸ್ಥಳೀಯ ಕಾಲಮಾನ ಸಂಜೆ 5ಕ್ಕೆ ಆರಂಭವಾಯಿತು. ರಷ್ಯಾದ ಜೊತೆಗೂ ಚರ್ಚಿಸಿದ್ದೆವು. ಆದರೆ, ವಸ್ತುಸ್ಥಿತಿ ತಿಳಿಸಿರಲಿಲ್ಲ. ‘ನಿಮಗೆ ಸಂತೋಷವಾಗಲಿದೆ’ ಎಂದಷ್ಟೇ ಹೇಳಿದ್ದೆವು. ಕಾರ್ಯಾಚರಣೆ ಆರಂಭದಲ್ಲಿ ಗುಂಡಿನ ಪ್ರತಿರೋಧ ಎದುರಾದರೂ ಸೇನೆ ಯಶಸ್ವಿಯಾಗಿ ಎದುರಿಸಿತು’ ಎಂದು ಟ್ರಂಪ್‌ ವಿವರಿಸಿದರು.

 
ಟ್ರಂಪ್‌ಗೆ ರಾಜಕೀಯ ಗೆಲುವು; ಶೀಘ್ರ ಕಾರ್ಯಾಚರಣೆ ವಿವರ ಬಹಿರಂಗ?

ವಾಷಿಂಗ್ಟನ್‌ (ಪಿಟಿಐ): ಬಾಗ್ದಾದಿ ಹತ್ಯೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ದೊರೆತ ಪ್ರಮುಖ ರಾಜಕೀಯ ಗೆಲುವು ಎಂದೇ ಬಣ್ಣಿಸಲಾಗಿದೆ.

ಅಮೆರಿಕ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಡೆಮಾಕ್ರಟಿಕ್ ಪಕ್ಷದಿಂದ ಟ್ರಂಪ್‌ ವಿರುದ್ಧ ವಾಗ್ದಂಡನೆ ನಿರ್ಣಯದ ವಿಚಾರಣೆಗೆ ಚಾಲನೆ ನೀಡಿರುವ ಹೊತ್ತಿನಲ್ಲಿಯೇ ಈ ಬೆಳವಣಿಗೆ ನಡೆದಿದೆ.

ಈ ನಡುವೆ ಕಾರ್ಯಾಚರಣೆಗೆ ಬೆಂಬಲ ನೀಡಿದ ರಷ್ಯಾ, ಟರ್ಕಿ, ಸಿರಿಯಾ ಮತ್ತು ಇರಾಕ್‌ಗೆ ಟ್ರಂಪ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ಸಿರಿಯಾದ ಕುರ್ದಿಶ್‌ ಸಂಘಟನೆ ನೀಡಿದ ಸುಳಿವು ಈ ಕಾರ್ಯಾಚರಣೆಗೆ ನೆರವಾಯಿತು. ಆದರೆ, ಆ ಸಂಘಟನೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರಲಿಲ್ಲ ಎಂದರು.

ಐಎಸ್‌ ಸ್ಥಾಪಕ ಬಾಗ್ದಾದಿಯ ಕಡೆಯ ಕ್ಷಣಗಳನ್ನು ಒಳಗೊಂಡ, ಅಮೆರಿಕ ಸೇನೆ  ಕೈಗೊಂಡ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.

‘ಆತ ಹೇಗೆ ಸತ್ತ ಎಂದು ಎಲ್ಲರೂ ನೋಡಬೇಕು. ಆತ ನಾಯಕನಂತಲ್ಲ, ಹೇಡಿಯಂತೆ ಪ್ರಾಣಬಿಟ್ಟಿದ್ದಾನೆ. ಅದು, ಸುರಂಗಮಾರ್ಗದ ಒಂದು ಕೊನೆ. ಸಾಯಲು ಸೂಕ್ತವಾದ ಸ್ಥಳವೂ ಅಲ್ಲ’ ಎಂದರು.

ವಿವಿಧ ದಾಖಲೆ, ವಸ್ತುಗಳು ವಶಕ್ಕೆ 

ವಾಷಿಂಗ್ಟನ್‌ (ಪಿಟಿಐ): ಬಾಗ್ದಾದಿ ವಿರುದ್ಧದ ಕಾರ್ಯಾಚರಣೆ ವೇಳೆ ಅನೇಕ ದಾಖಲೆಗಳು, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಲ ಸೂಕ್ಷ್ಮ ಮಾಹಿತಿಗಳು ಲಭ್ಯವಾಗಿವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ಪಾರಾಗಲು ಯತ್ನಿಸಿದ ಸುರಂಗ ಮಾರ್ಗದಲ್ಲಿ ಸ್ಫೋಟ ಸಂಭವಿಸಿದಾಗ ಬಾಗ್ದಾದಿ ದೇಹವೂ ಛಿದ್ರವಾಗಿದೆ. ವಿಶೇಷ ಪಡೆ ಆತನ ಡಿಎನ್‌ಎ ಮಾದರಿ ಸಂಗ್ರಹಿಸಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ಸಾಬೀತಾಗಿದೆ. 

ಕಾರ್ಯಾಚರಣೆ ಸ್ಥಳದಲ್ಲೇ ಅಮೆರಿಕ ಸೇನೆ ಡಿಎನ್‌ಎ ಪರೀಕ್ಷೆ ನಡೆಸಿತು. ಘಟನೆಯಲ್ಲಿ ಸತ್ತಿರುವ ಇತರೆ ನಾಯಕರ ದೇಹದ ಭಾಗಗಳನ್ನು ತರಲಾಗಿದೆ.

ನಡುವಂಗಿ ಧರಿಸಿದ್ದ ಬಾಗ್ದಾದಿಯ ಇಬ್ಬರು ಪತ್ನಿಯರು ಘಟನೆಯಲ್ಲಿ ಸತ್ತಿದ್ದಾರೆ. ಆದರೆ, ಅವರು ನಡುವಿಗೆ  ಸ್ಫೋಟಕಗಳನ್ನು ಕಟ್ಟಿಕೊಂಡಿರಲಿಲ್ಲ ಎಂದು ಟ್ರಂಪ್‌ ತಿಳಿಸಿದರು. 

 

ಬಾಗ್ದಾದಿ ತಲೆಗೆ ಇತ್ತು ₹ 175 ಕೋಟಿ ಬಹುಮಾನ!

ವಾಷಿಂಗ್ಟನ್‌ (ಪಿಟಿಐ): ಅಬು ಬಕ್ರ್ ಅಲ್‌ ಬಾಗ್ದಾದಿ ಪತ್ತೆ ಮಾಡಿ, ಅಂತ್ಯ ಹಾಡಲು ಆತನ ನೆಲೆಯ ಸುಳಿವು ಪತ್ತೆಗೆ ಅಮೆರಿಕ ಸೇನೆ ಹಾಗೂ ವಿಶ್ವದ ಅತ್ಯುತ್ತಮ ಗುಪ್ತದಳ ಸಂಸ್ಥೆಗಳು ಹಲವು ವರ್ಷಗಳಿಂದ ಬೆನ್ನತ್ತಿದ್ದವು. 

ಈತನ ಇರುವಿಕೆ ಕುರಿತು ಸುಳಿವು ನೀಡಿದವರಿಗೆ 25 ಮಿಲಿಯನ್‌ ಡಾಲರ್ ಅಂದರೆ ₹ 175 ಕೋಟಿ ಬಹುಮಾನವನ್ನು ಅಮೆರಿಕ ಘೋಷಿಸಿತ್ತು. ಆತ ಯಾರೊಬ್ಬರಿಗೂ ಸುಳಿವು ಸಿಗದಂತೆ ತಲೆಮರೆಸಿಕೊಂಡಿದ್ದ.

ಕಳೆದ ಐದು ವರ್ಷಗಳಲ್ಲಿ ಆತನ ಇರುವಿಕೆ ಕುರಿತಂತೆ ಕೆಲವೊಂದು ಮಾಹಿತಿ ಸಿಕ್ಕಿತ್ತು. ಹಿಂದೆ ಹಲವು ಬಾರಿ ಕಾರ್ಯಾಚರಣೆಯಲ್ಲಿ ಆತ ಸತ್ತಿದ್ದಾನೆ ಇಲ್ಲವೆ ಗಾಯಗೊಂಡಿದ್ದಾನೆ ಎಂದು ಅನಧಿಕೃತವಾಗಿ ಪ್ರಕಟಿಸಲಾಗಿತ್ತು.

2014ರಲ್ಲಿ ಮುನ್ನೆಲೆಗೆ ಬಂದಿದ್ದ ಬಾಗ್ದಾದಿ ಇರಾಕ್‌ ಮತ್ತು ಸಿರಿಯಾ ಭಾಗದಲ್ಲಿ ತಾನು ಸಂಘಟನೆ ಸ್ಥಾಪಿಸಿದ್ದನ್ನು ಪ್ರಕಟಿಸಿದ್ದ. ಇಸ್ಲಾಮಿಕ್‌ ಸ್ಟೇಟ್ ಈ ಭಾಗದಲ್ಲಿ ಹಲವು ಬಾರಿ ದಾಳಿ ನಡೆಸಿದ್ದು, ಸಾವಿರಾರು ಮಂದಿ ಸತ್ತಿದ್ದರು.

ಬಾಗ್ದಾದಿ ಮೊದಲು ಇರಾಕ್‌ನಲ್ಲಿ ಅಲ್‌ಖೈದಾ ಸಂಘಟನೆ ಸೇರಿಕೊಂಡಿದ್ದ. ಬಳಿಕ ಇದನ್ನು ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಗಳ ಜೊತೆಗೆ ವಿಲೀನ ಮಾಡಲಾಗಿತ್ತು. 2010ರಲ್ಲಿ ಆತ ಸಂಘಟನೆಯ ನಾಯಕತ್ವ ವಹಿಸಿಕೊಂಡಿದ್ದ. ಬಳಿಕ 2013ರಲ್ಲಿ ‘ಇಸ್ಟಾಮಿಕ್‌ ಸ್ಟೇಟ್ ಆಫ್‌ ಇರಾಕ್‌ ಅಂಡ್‌ ಲೆವಂಟ್‌ (ಐಸಿಸ್‌) ಎಂದು ಮರುನಾಮಕರಣ ಮಾಡಿದ್ದು, ತನ್ನ ಆಡಳಿತವನ್ನು ಘೋಷಿಸಿಕೊಂಡಿದ್ದ.

 

 

ಕಾರ್ಯಾಚರಣೆ ನಡೆದದ್ದು ಹೀಗೆ...

–ಐಎಸ್‌ ನಾಯಕ ಅಬು ಬಕ್ರ್‌ ಅಲ್‌ ಬಾಗ್ದಾದಿ ಇರುವಿಕೆ ಕುರಿತು ಒಂದು ತಿಂಗಳ ಹಿಂದೆ ಅಮೆರಿಕಕ್ಕೆ ಖಚಿತ ಮಾಹಿತಿ ಲಭ್ಯ. ಸಿರಿಯಾ ಕುರ್ದಿಶ್‌ ಸಂಘಟನೆಯಿಂದಲೂ ಪೂರಕ ವಿವರ.

–ಇದರ ಆಧಾರದಲ್ಲಿ ಎರಡು ವಾರದ ಹಿಂದೆ ಅಮೆರಿಕ ಸೇನೆಯಿಂದ ಬಾಗ್ದಾದಿಯ ನೆಲೆ ಪತ್ತೆ. ಮೂರು ದಿನಗಳ ಹಿಂದೆ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕಾರ್ಯಾಚರಣೆ ಕುರಿತ ಮಾಹಿತಿ.

–ಕಾರ್ಯಾಚರಣೆ ಜಾರಿಗೆ ಪೂರಕವಾಗಿ ತಮ್ಮ ಪರಿಮಿತಿಯ ವಾಯುಮಾರ್ಗದಲ್ಲಿ ಸಂಚರಿಸಲು ರಷ್ಯಾ, ಇರಾಕ್‌, ಟರ್ಕಿ ದೇಶಗಳಿಗೆ ಅಮೆರಿಕದಿಂದ ಅನುಮತಿ ಕೋರಿಕೆ.

–ಶನಿವಾರ ಸಂಜೆ 4.30 ಗಂಟೆಗೆ (ಸಿರಿಯಾ ಕಾಲಮಾನ ರಾತ್ರಿ 10.30) ಶ್ವೇತಭವನದಲ್ಲಿ ಕಾರ್ಯಾಚರಣೆ ನೇರ ವೀಕ್ಷಣೆಗೆ ಗೌಪ್ಯ ಕೊಠಡಿಗೆ ಅಧಿಕಾರಿಗಳ ಜೊತೆಗೆ ಟ್ರಂಪ್‌ ಆಗಮನ.

–ಆ ನಂತರ ಮಧ್ಯಪೂರ್ವದ ಹೆಸರು ಬಹಿರಂಗಪಡಿಸದ ಸೇನಾನೆಲೆಯಿಂದ ಎಂಟು ಹೆಲಿಕಾಪ್ಟರ್‌ಗಳಲ್ಲಿ ಅಮೆರಿಕದ ಡೆಲ್ಟಾ ಪಡೆಗೆ ಸೇರಿದ ಯೋಧರು, ಶ್ವಾನದಳದ ರವಾನೆ.

–ಬಾಗ್ದಾದಿ ನೆಲೆಸಿದ್ದ ತಾಣವನ್ನು ಹೆಲಿಕಾಪ್ಟರ್ ತಲುಪಿದಾಗ ಗುಂಡಿನ ದಾಳಿ ಪ್ರತಿರೋಧ. ಇದನ್ನು ಸಮರ್ಪಕವಾಗಿ ಎದುರಿಸಿದ ಸೇನೆಯಿಂದ ಯಶಸ್ವಿಯಾಗಿ ಭೂಸ್ಪರ್ಶ.

–ಮುಖ್ಯದ್ವಾರವಿದ್ದ ಗೋಡೆಯನ್ನು ಸ್ಫೋಟಿಸುವ ಮೂಲಕ ಸೇನೆಯಿಂದ ಒಳ ಪ್ರವೇಶ. ಅಲ್ಲಿದ್ದ ಜನರನ್ನು ಕೊಲ್ಲುವ ಅಥವಾ ಶರಣಾಗತಿ ಪಡೆಯುವ ಮೂಲಕ ಪರಿಸ್ಥಿತಿಯ ಪೂರ್ಣ ನಿಯಂತ್ರಣ.

–ಅಲ್ಲಿದ್ದ 13 ಮಕ್ಕಳನ್ನು ರಕ್ಷಿಸಲಾಯಿತು. ಅಲ್ಲದೆ, ಇಸ್ಲಾಮಿಕ್‌ ಸ್ಟೇಟ್‌ಗೆ ಸೇರಿದ ಅನೇಕ ಹೋರಾಟಗಾರರನ್ನು ಬಂಧಿಸಲಾಯಿತು.

–ಈ ಹಂತದಲ್ಲಿ ಕಟ್ಟಡದ ಒಳಗಿದ್ದ ಸುರಂಗ ಮಾರ್ಗದ ಮೂಲಕ ತನ್ನ ಮೂವರು ಮಕ್ಕಳ ಜೊತೆ ಪರಾರಿಗೆ ಬಾಗ್ದಾದಿ ಯತ್ನ. ಶರಣಾಗಲು ಅಮೆರಿಕ ಸೇನೆಯಿಂದ ಎಚ್ಚರಿಕೆ. ಸ್ಪಂದಿಸದಿದ್ದಾಗ ಸೇನೆಯ ಸೂಚನೆಯಂತೆ ಬೆನ್ನಟ್ಟಿದ ನಾಯಿಗಳು.

–ಸುರಂಗದ ಕೊನೆಯಲ್ಲಿ ಪಾರಾಗಲು ಮಾರ್ಗ ಇಲ್ಲದಿದ್ದಾಗ ಅನ್ಯಮಾರ್ಗವಿಲ್ಲದೆ ಸೊಂಟಕ್ಕೆ ಕಟ್ಟಿಕೊಂಡಿದ್ದ ಸ್ಫೋಟಕಗಳನ್ನು ಸಿಡಿಸಿಕೊಂಡು ಸಾವು. ಸ್ಫೋಟದ ರಭಸಕ್ಕೆ ಆತನ ಮೂವರು ಮಕ್ಕಳು ಸತ್ತಿದ್ದು, ಸುರಂಗ ಕುಸಿದಿದೆ. ಈ ಹಂತದಲ್ಲಿ ಸೇನಾ ಸಿಬ್ಬಂದಿ ಪಾರಾದರೂ ಒಂದು ನಾಯಿ ಗಂಭೀರವಾಗಿ ಗಾಯಗೊಂಡಿತು.

–ಸ್ಫೋಟದಿಂದ ಬಾಗ್ದಾದಿ ದೇಹ ಛಿದ್ರವಾಗಿತ್ತು. ಸ್ಥಳದಲ್ಲೇ 15 ನಿಮಿಷ ಕಾಲ ಡಿಎನ್‌ಎ ಪರೀಕ್ಷೆಯನ್ನು ನಡೆಸಿ ಸತ್ತಿರುವುದು ಬಾಗ್ದಾದಿಯೇ ಎಂದು ಖಾತರಿಪಡಿಸಿಕೊಳ್ಳಲಾಯಿತು.

–ಸೇನಾ ಕಮಾಂಡರ್‌ ‘ಶೇ 100ರಷ್ಟು ವಿಶ್ವಾಸವಿದೆ. ಜಾಕ್‌ಪಾಟ್‌’ ಎಂದು ಹೇಳುವ ಮೂಲಕ ಕಾರ್ಯಾಚರಣೆ ಯಶಸ್ವಿ ಆಗಿದೆ ಎಂದು ಘೋಷಿಸಿದರು.

–ಬಳಿಕ ಅಮೆರಿಕ ಸೇನೆ  ಸುಮಾರು ಎರಡು ಗಂಟೆ ಕಾಲ ನೆಲೆಯನ್ನು ಸುತ್ತುವರಿದು ಶೋಧಿಸಿತು.‌ ಇಸ್ಲಾಮಿಕ್ ಸ್ಟೇಟ್‌ನ ಸ್ಥಾಪನೆ, ಭವಿಷ್ಯದ ಯೋಜನೆಗಳು ಕುರಿತ ಮಾಹಿತಿಗಳನ್ನು ಒಳಗೊಂಡ ಅನೇಕ ದಾಖಲೆಗಳನ್ನು ವಶಕ್ಕೆ ಪಡೆಯಲಾಯಿತು.

_ಬಾಗ್ದಾದಿಯ ದೇಹವನ್ನು ‘ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ’ ಮಾಡಲಾಯಿತು. 2011ರಲ್ಲಿ ಒಸಾಮಾ ಬಿನ್‌ ಲಾಡೆನ್‌ ಹತ್ಯೆ ಮಾಡಿದಾಗಲೂ ಇದೇ ಶಿಷ್ಟಾಚಾರ ಪಾಲಿಸಲಾಗಿತ್ತು. 

–ಇಸ್ಲಾಮಿಕ್‌ ಧಾರ್ಮಿಕ ವಿಧಿ ಕುರಿತು ಪರಿಣಿತರ ಅಭಿಪ್ರಾಯ ಪಡೆದ ಬಳಿಕ ಅಮೆರಿಕ ಅಧಿಕಾರಿಗಳು ಅಲ್‌ಖೈದಾ ನಾಯಕನ ದೇಹವನ್ನು ಸಮುದ್ರದಲ್ಲಿ ಹಾಕಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು