ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೋವಿದ್‌–19’ ವೈರಸ್‌ : ಏರ್‌ಲೈನ್ಸ್‌ಗಳ ವಹಿವಾಟಿಗೆ ಧಕ್ಕೆ

ಚೀನಾಗೆ ವಿಮಾನಗಳ ಹಾರಾಟ ಸ್ಥಗಿತ: ಆದಾಯದಲ್ಲಿ ಕುಸಿತ: ಮತ್ತೆ 97 ಮಂದಿ ಸಾವು
Last Updated 12 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೀಜಿಂಗ್‌, ಸಿಂಗಪುರ: ಚೀನಾದಲ್ಲಿ ‘ಕೋವಿದ್‌–19’ ವೈರಸ್‌ ಹಬ್ಬಿದ ಬಳಿಕ ವೈಮಾನಿಕ ಕ್ಷೇತ್ರದ ವಹಿವಾಟಿಗೆ ತೀವ್ರ ಧಕ್ಕೆಯಾಗಿದೆ.

ಏರ್‌ಲೈನ್ಸ್‌ ಮತ್ತು ವಿಮಾಗಳ ತಯಾರಿಕೆ ಕ್ಷೇತ್ರಗಳ ಆರ್ಥಿಕ ವಹಿವಾಟು ಕುಸಿಯುತ್ತಿರುವುದು ಆತಂಕ ಮೂಡಿಸಿದೆ.

‘ಕೋವಿದ್‌–19’ ವೈರಸ್‌ ಕಾಣಿಸಿಕೊಂಡ ಬಳಿಕ ಹಲವು ಏರ್‌ಲೈನ್ಸ್‌ಗಳು ಚೀನಾಗೆ ತೆರಳುವ ಸಾವಿರಾರು ವಿಮಾನ
ಗಳ ಸಂಚಾರವನ್ನು ರದ್ದುಪಡಿಸಿವೆ. ಇದರಿಂದ, ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆಯಿಂದ ದೊರೆಯುತ್ತಿದ್ದ ಆದಾಯಕ್ಕೆ ಪೆಟ್ಟು ನೀಡಿದೆ. ಚೀನಾದ ಬಹುತೇಕ ನಗರಗಳಲ್ಲಿ ಸಾರ್ವಜನಿಕ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ವಿಮಾನಗಳ ಹಾರಾಟವೂ ಸ್ಥಗಿತಗೊಂಡಿದೆ.

ಜನವರಿ ತಿಂಗಳಲ್ಲಿ ಬೋಯಿಂಗ್‌ ಕಂಪನಿಗೆ ವಿಮಾನ ಖರೀದಿಸುವ ಒಂದೂ ಆದೇಶ ಬಂದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಿಮಾನಗಳ ಖರೀದಿಗೂ ಯಾರೂ ಆಸಕ್ತಿ ವಹಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ, ವಹಿವಾಟಿನಲ್ಲಿ ಕುಸಿಯಬಹುದು ಎಂದು ಬೋಯಿಂಗ್‌ ಕಂಪನಿಯ ಉಪಾಧ್ಯಕ್ಷ ರ‍್ಯಾಂಡಿ ಟಿನ್ಸೆಥ್‌ ತಿಳಿಸಿದ್ದಾರೆ.

ಮತ್ತೆ 97 ಮಂದಿ ಸಾವು: ’ಕೋವಿದ್‌–19‘ ವೈರಸ್‌ನಿಂದ ಚೀನಾದಲ್ಲಿ ಮತ್ತೆ 97 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ, ಇದುವರೆಗೆ ಸಾವಿಗೀಡಾದವರ ಸಂಖ್ಯೆ 1,113ಕ್ಕೆ ಏರಿದೆ.

ವೈರಸ್‌ ಮೊದಲು ಕಾಣಿಸಿಕೊಂಡಿದ್ದ ಹುಬೈ ಪ್ರಾಂತ್ಯದಲ್ಲೇ 94 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ, ಒಟ್ಟು 44,653 ಮಂದಿ ವೈರಸ್‌ ಸೋಂಕಿಗೆ ಒಳಗಾಗಿದ್ದು,. 8,204 ಮಂದಿ ಪರಿಸ್ಥಿತಿ ಗಂಭೀರವಾಗಿದೆ.

ಸಿಂಗಪುರ ಬ್ಯಾಂಕ್‌ ಕಚೇರಿ ತೆರವು: ಸಿಬ್ಬಂದಿಯೊಬ್ಬರಿಗೆ ವೈರಸ್‌ ಸೋಂಕು ಕಾಣಿಸಿಕೊಂಡಿದ್ದರಿಂದ ಸಿಂಗಪುರ ಬ್ಯಾಂಕ್‌ ‘ಡಿಬಿಎಸ್‌’ ಇಲ್ಲಿನ ತನ್ನ ಕಚೇರಿಯನ್ನು ತೆರವುಗೊಳಿಸಿದೆ.

ಮನೆಯಿಂದಲೇ ಕಾರ್ಯನಿರ್ವಹಿಸುವಂತೆ 300 ಸಿಬ್ಬಂದಿಗೆ ಬ್ಯಾಂಕ್‌ ಸೂಚಿಸಿದೆ.ಸಿಂಗಪುರದಲ್ಲಿ 47 ಮಂದಿಗೆ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

ಆತ್ಮಹತ್ಯೆ ಬೆದರಿಕೆ: ಬೀಜಿಂಗ್‌ ಜನ್ಮ ದಿನ ಆಚರಿಸಿಕೊಳ್ಳಲು ಅವಕಾಶ ನೀಡದಿರುವುದಕ್ಕೆ ಬೇಸರಗೊಂಡ ವ್ಯಕ್ತಿಯೊಬ್ಬ ಪೆಟ್ರೋಲ್‌ ಸುರಿದುಕೊಂಡು ಮತ್ತು ಸೊಂಟಕ್ಕೆ ಪಟಾಕಿ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೀನಾದ ಚೊಂಗ್‌ಕಿಂಗ್‌ ಪ್ರಾಂತ್ಯದಲ್ಲಿ ನಡೆದಿದೆ.

ವಿಯಟ್ನಾಂ: ₹43 ಕೋಟಿ ಡಾಲರ್‌ನಷ್ಟ

ಹನೋಯಿ: ‘ಕೋವಿದ್‌–19’ ವೈರಸ್‌ನಿಂದ ವಿಯಟ್ನಾಂ ಏರ್‌ಲೈನ್ಸ್‌ಗೆ 43 ಕೋಟಿ ಡಾಲರ್‌ (₹ 30,701.42) ನಷ್ಟವಾಗಿದೆ.

ವಿಯಟ್ನಾಂ ಮತ್ತು ಚೀನಾ ನಡುವೆ ಸಂಪರ್ಕ ಸ್ಥಗಿತಗೊಳಿಸಿರುವುದರಿಂದ ವಿಯಟ್ನಾಂ ಏರ್‌ಲೈನ್ಸ್‌ ಆದಾಯದಲ್ಲಿ ಕುಸಿತವಾಗಿದೆ ಎಂದು ಸರ್ಕಾರ ತಿಳಿಸಿದೆ.

ಫೆಬ್ರುವರಿ 1ರಂದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದ ವಿಯಟ್ನಾಂ, ಚೀನಾಗೆ ತೆರಳುವ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿತು. ಈ ನಿಷೇಧದಿಂದ ಪ್ರತಿ ತಿಂಗಳು 4 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗಿದೆ. ಎಲ್ಲ ಅಂತರರಾಷ್ಟ್ರೀಯ ವಿಮಾನಗಳಲ್ಲಿಯೂ ಫೆಬ್ರುವರಿ ಮೊದಲ ವಾರದಲ್ಲಿ ಶೇಕಡ 14.1ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದೆ.

ಜಪಾನ್‌: ಇಬ್ಬರು ಭಾರತೀಯರಲ್ಲಿ ವೈರಸ್‌

ಯೊಕಹಾಮಾ: ಜಪಾನ್‌ನ ಯೊಕಹಾಮಾ ಬಂದರಿನಲ್ಲಿರುವ ಐಷಾರಾಮಿ 'ಡೈಮಂಡ್‌ ಪ್ರಿನ್ಸೆಸ್‌' ಹಡಗಿನಲ್ಲಿರುವ ಇಬ್ಬರು ಭಾರತೀಯರಲ್ಲಿ ‘ಕೋವಿದ್‌–19’ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಕಳೆದ ವಾರ ಬಂದರಿಗೆ ಹಡಗು ಆಗಮಿಸಿದಾಗ ಅದರಲ್ಲಿದ್ದ 3,700 ಪ್ರಯಾಣಿಕರನ್ನು ಸೋಂಕಿನ ಶಂಕೆಯ ಮೇರೆಗೆ 300 ಜನರನ್ನು ಅಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಇವರಲ್ಲಿ ಒಟ್ಟು 174 ಮಂದಿಗೆ ಸೋಂಕು ತಲುಪಿರುವುದು ದೃಢಪಟ್ಟಿದೆ. ಹಡಗಿನಲ್ಲಿ 6 ಪ್ರಯಾಣಿಕರು ಹಾಗೂ 132 ಸಿಬ್ಬಂದಿ ಸೇರಿ ಒಟ್ಟು 138 ಭಾರತೀಯರು ಇದ್ದಾರೆ.

ಹೆಚ್ಚಿದ ಆನ್‌ಲೈನ್‌ ವಹಿವಾಟು

ಶಾಂಘೈ: ವೈರಸ್‌ ಭೀತಿಯಿಂದಾಗಿ ಚೀನಾದಲ್ಲಿ ಮನೆಯಿಂದ ಹೊರಗೆ ಬರುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸರ್ಕಾರವು ಸಹ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸುತ್ತಿದೆ.

ಇದರಿಂದಾಗಿ, ನಾಗರಿಕರು ಬಹುತೇಕ ಕಾರ್ಯಗಳಿಗೆ ಆನ್‌ಲೈನ್‌ ಮೊರೆ ಹೋಗಿದ್ದಾರೆ. ಇದರಿಂದ, ಅಲಿಬಾಬಾ, ಟೆನ್‌ಸೆಂಟ್‌ ಮತ್ತು ಹುವೈ ಮುಂತಾದ ಕಂಪನಿಗಳ ನೂರಾರು ಪಟ್ಟು ವಹಿವಾಟು ಹೆಚ್ಚಾಗಿದೆ.

ಹಡಗಿನಲ್ಲಿದ್ದ 174 ಮಂದಿಗೆ ವೈರಸ್‌

ಯೊಕಹಾಮಾ : ಜಪಾನ್‌ನ ಯೊಕಹಾಮಾ ಬಂದರಿನಲ್ಲಿರುವ ಐಷಾರಾಮಿ ಹಡಗಿನಲ್ಲಿರುವ ಇನ್ನೂ 39 ಮಂದಿಗೆ ‘ಕೋವಿದ್‌–19’ ವೈರಸ್‌ ತಗುಲಿರುವುದು ದೃಢಪಟ್ಟಿದೆ. ಇದರಿಂದ ಸೋಂಕಿಗೆ ಒಳಗಾದವರ ಸಂಖ್ಯೆ 174ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ಬಂದರಿಗೆ ಹಡಗು ಆಗಮಿಸಿದಾಗ ಅದರಲ್ಲಿದ್ದ 3,700 ಪ್ರಯಾಣಿಕರಲ್ಲಿ ಸೋಂಕಿನ ಶಂಕೆಯ ಮೇರೆಗೆ 300 ಜನರನ್ನು ಅಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಇವರಲ್ಲಿನ 300ರಲ್ಲಿ ಒಟ್ಟು 174 ಮಂದಿಗೆ ಸೋಂಕು ತಲುಪಿರುವುದು ದೃಢಪಟ್ಟಿದೆ.

ಹಡಗಿನಲ್ಲಿರುವ ಸಿಬ್ಬಂದಿಗಳು ಕಳೆದ 14 ದಿನಗಳಿಂದಲೂ ಅಲ್ಲಿಯೇ ಕಾಲ ಕಳೆಯುತ್ತಿದ್ದು, ಎಲ್ಲರನ್ನೂ ಸ್ವಲ್ಪ ಸಮಯ ಮಾತ್ರ ಹೊರಗೆ ಬಿಡಲಾಗುತ್ತಿದೆ.

’ನೀವು ಬಾಲ್ಕನಿಯಲ್ಲಿ ಕುಳಿತುಕೊಂಡರೆ ಒಳಗೆ ಇರುವವರು ಕೆಮ್ಮುವುದನ್ನು ಕೇಳುತ್ತೀರಿ‘ ಎಂದು ಬ್ರಿಟಿಷ್ ಪ್ರಯಾಣಿಕರೊಬ್ಬರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದು ರಜಾ ದಿನವಂತೂ ಅಲ್ಲ. ಆದರೆ, ಸಂಪೂರ್ಣ ವಿಶ್ರಾಂತಿಯ ಸಮಯ ಎಂದೂ ಅವರು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಪಾನ್‌ ಆರೋಗ್ಯ ಸಚಿವ ಕಾಸ್ತುನೊಬ್, ಈಗಾಗಲೇ 53 ಪ್ರಯಾಣಿಕರನ್ನು ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 39 ಮಂದಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT