ಗುರುವಾರ , ಅಕ್ಟೋಬರ್ 17, 2019
21 °C
ಗಂಟೆಗೆ 195 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಭೀಕರ ಚಂಡಮಾರುತ

ಜಪಾನ್‌ನತ್ತ ಧಾವಿಸುತ್ತಿದೆ ಹಗಿಬಿಸ್ ಚಂಡಮಾರುತ: ಭಾರೀ ಮಳೆಗೆ ಒಬ್ಬ ಬಲಿ

Published:
Updated:

ಟೋಕಿಯೊ: ಭೀಕರ ಹಗಿಬಿಸ್ ಚಂಡಮಾರುತ ಜಪಾನ್‌ನತ್ತ ಧಾವಿಸುತ್ತಿದ್ದು ರಾಜಧಾನಿ ಟೋಕಿಯೊ ಸೇರಿ ಹಲವೆಡೆ ಶನಿವಾರ ಭಾರೀ ಮಳೆಯಾಗುತ್ತಿದೆ. ಮಳೆ ಸಂಬಂಧಿ ಅವಘಡಗಳಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಟೋಕಿಯೊ, ಸೈತಮಾ, ಕನಗಾವಾ, ಗುನ್ಮಾ, ಯಮನಶಿ, ನಾಗಾನೊ ಮತ್ತು ಶಿಜುವಾಕಾ ನಗರಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಸ್ಥಳೀಯ ಕಾಲಮಾನ ಇಂದು (ಶನಿವಾರ) ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ ಪ್ರಕಾರ ಸಂಜೆ 5 ಗಂಟೆ) ಟೋಕಿಯೊಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಗಂಟೆಗೆ 195 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದೂ ಇಲಾಖೆ ಮಾಹಿತಿ ನೀಡಿದೆ. ಒಂದು ವಾರದ ಹಿಂದೆಯೇ ಹಗಿಬಿಸ್ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.

ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು ಒಂದೂವರೆ ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 2.9 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಟೋಕಿಯೊ ಮತ್ತು ಸಮೀಪದ ನಗರಗಳ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ರೈಲು ಸಂಚಾರವನ್ನೂ ನಿಲ್ಲಿಸಲಾಗಿದೆ.

Post Comments (+)