ಬುಧವಾರ, ಜನವರಿ 22, 2020
19 °C

ದೇಶವನ್ನು ನಡುಗಿಸಿದ್ದ ಅತ್ಯಾಚಾರ ಪ್ರಕರಣಗಳು

ಪಿಟಿಐ Updated:

ಅಕ್ಷರ ಗಾತ್ರ : | |

ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಕ್ಕೆ ದೇಶದಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಆದರೆ, ಇನ್ನೂ ಹಲವು ಅತ್ಯಾಚಾರ ಪ್ರಕರಣಗಳು ಇದೇ ರೀತಿ ದೇಶದಾದ್ಯಂತ ತಲ್ಲಣ ಮೂಡಿಸಿದ್ದವು. ಆ ಪ್ರಕರಣಗಳ ಸ್ಥಿತಿಗತಿಯ ವಿವರ

ನಿರ್ಭಯಾ

2012ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಅರೆವೈದ್ಯಕೀಯ ಕೋರ್ಸ್‌ನ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ. ಅತ್ಯಾಚಾರದಿಂದಾದ ಗಾಯಗಳ ತೀವ್ರತೆಗೆ ಯುವತಿ ಸಾವು. ದೇಶದಾದ್ಯಂತ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದ ಸಂತ್ರಸ್ತೆಗೆ ‘ನಿರ್ಭಯಾ’ ಎಂದೇ ನಾಮಕರಣ ಮಡಲಾಯಿತು.

* ಪ್ರಕರಣದ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಒಬ್ಬ ಬಾಲಾರೋಪಿ ಶಿಕ್ಷೆ ಪೂರೈಸಿ, ಬಿಡುಗಡೆಯಾಗಿದ್ದಾನೆ. ತಮಿಳುನಾಡಿನಲ್ಲಿ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ದರ್ಜಿಯಾಗಿ ದುಡಿಯುತ್ತಿದ್ದಾನೆ

* ಪ್ರಕರಣದ ಉಳಿದ ನಾಲ್ವರಿಗೆ ದೆಹಲಿ ಹೈಕೋರ್ಟ್‌ ಮರಣದಂಡನೆ ಶಿಕ್ಷೆ ಘೋಷಿಸಿದೆ. ಈ ಅದೇಶದ ವಿರುದ್ಧ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ

* ಪ್ರಮುಖ ಆರೋಪಿ ತಿಹಾರ್ ಜೈಲಿನಲ್ಲಿ ಇದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ರಾಷ್ಟ್ರಪತಿಗೆ ಕ್ಷಮಾಪಣಾ ಅರ್ಜಿ ಸಲ್ಲಿಸುವುದಷ್ಟೇ ಉಳಿದ ಮೂವರ ಮುಂದಿರುವ ಆಯ್ಕೆ

* ಕ್ಷಮಾಪಣೆಯನ್ನು ಒಪ್ಪಿಕೊಳ್ಳದಂತೆ ದೆಹಲಿ ಮತ್ತು ಕೇಂದ್ರ ಸರ್ಕಾರ ಶಿಫಾರಸು ಮಾಡಿವೆ

ಉನ್ನಾವ್

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಶಾಸಕನಾಗಿದ್ದ ಕುಲದೀಪ್‌ ಸಿಂಗ್ ಸೆಂಗರ್ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ದೂರು ನೀಡಲು ತೆರಳಿದ್ದ ಸಂತ್ರಸ್ತ ಬಾಲಕಿಯ ತಂದೆಯನ್ನು ಪೊಲೀಸರು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದರು. ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಮೃತಪಟ್ಟಿದ್ದರು. ಆರೋಪಿ ಶಾಸಕನ ಸಂಬಂಧಿಗಳು ಸಂತ್ರಸ್ತೆಯ ಒಬ್ಬ ಚಿಕ್ಕ‍ಪ್ಪನನ್ನು ಕೊಲೆ ಮಾಡಿದ್ದರು. ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ಸಂತ್ರಸ್ತೆಯ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು. ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರು ಮೃತಪಟ್ಟಿದ್ದರು

* ಅತ್ಯಾಚಾರ, ಪೊಲೀಸ್ ಕಸ್ಟಡಿಯಲ್ಲಿ ಸಾವು, ಕೊಲೆ ಮತ್ತು ಅಪಘಾತಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ

* ಸಿಬಿಐ ಈ ಪ್ರಕರಣಗಳ ತನಿಖೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ದೆಹಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಈ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ

* ಸಾರ್ವಜನಿಕರ ತೀವ್ರ ಆಕ್ರೋಶದ ನಂತರ ಬಿಜೆಪಿ, ತನ್ನ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನನ್ನು ಪಕ್ಷದಿಂದ ಉಚ್ಛಾಟನೆ/ ಮಾಡಿದೆ. ಸೆಂಗರ್ ಈಗ ಜೈಲಿನಲ್ಲಿ ಇದ್ದಾನೆ

* ಈ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್‌ ಸಿಂಗ್‌ ಸೆಂಗರ್‌ನ ಜನ್ಮದಿನಕ್ಕೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಶುಭಾಶಯದ ಟ್ವೀಟ್ ಮಾಡಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ

ಕಠುವಾ ಬಾಲಕಿ ಅತ್ಯಾಚಾರ

ಜಮ್ಮುವಿನ ಕಠುವಾ ಗ್ರಾಮದಲ್ಲಿ ಮುಸ್ಲಿಂ ಅಲೆಮಾರಿ ಜನಾಂಗದ 8 ವರ್ಷದ ಬಾಲಕಿಯನ್ನು ದೇವಾಲಯವೊಂದರಲ್ಲಿ ಒಂದು ವಾರ ಕೂಡಿಹಾಕಿ ಅತ್ಯಾಚಾರ ನಡೆಸಲಾಗಿತ್ತು. ನಂತರ ಕೊಲೆ ಮಾಡಲಾಗಿತ್ತು. ಮುಸ್ಲಿಂ ಅಲೆಮಾರಿ ಜನರನ್ನು ಆ ಪ್ರದೇಶದಿಂದ ಓಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿತ್ತು ಎಂಬುದನ್ನು ಅರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಮತ್ತು ಇನ್ನೂ ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ 

ಮುಜಪ್ಫರ್‌ಪುರ ಲೈಂಗಿಕ ಹಗರಣ

ಮುಜಪ್ಫರ್‌ಪುರದ ಪುನರ್ವಸತಿ ಕೇಂದ್ರದಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. 2018ರ ಮೇನಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು. ಬಿಹಾರ ಪೀಪಲ್ಸ್ ಪಾರ್ಟಿಯ ಪ್ರಜೇಶ್ ಠಾಕೂರ್, ಜೆಡಿಯು ನಾಯಕಿ ಮತ್ತು ಮಾಜಿ ಸಚಿವೆ ಮಂಜು ವರ್ಮಾ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು.

* ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ದೆಹಲಿಯ ಸಾಕೇತ್‌ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ

* ಇದೇ 12ಕ್ಕೆ ತೀರ್ಪು ಪ್ರಕಟವಾಗಲಿದೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು