ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ ಬ್ರಿಡ್ಜ್‌ ದಾಳಿ: ಪಿಒಕೆ ಮೂಲದ ಉಗ್ರ ಹತ್ಯೆ

ಚಾಕುವಿನಿಂದ ಇರಿದು ಇಬ್ಬರ ಕೊಂದ ಭಯೋತ್ಪಾದಕ
Last Updated 30 ನವೆಂಬರ್ 2019, 18:23 IST
ಅಕ್ಷರ ಗಾತ್ರ

ಲಂಡನ್: ಲಂಡನ್‌ ಬ್ರಿಡ್ಜ್‌ನಲ್ಲಿ ನಾಗರಿಕರ ಮೇಲೆ ದಾಳಿ ನಡೆಸಿ ಪೊಲೀಸರಿಂದ ಹತನಾದ ಉಗ್ರ ಉಸ್ಮಾನ್‌ ಖಾನ್‌, ಈ ಹಿಂದೆ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೆರೋಲ್‌ನಲ್ಲಿ ಹೊರಬಂದಿದ್ದ ಉಸ್ಮಾನ್‌ ಶುಕ್ರವಾರ ರಾತ್ರಿ ಒಬ್ಬ ಪುರುಷ ಹಾಗೂ ಮಹಿಳೆಯನ್ನು ಇರಿದು ಕೊಂದಿದ್ದ. ಮೂವರು ಗಾಯಗೊಂಡಿದ್ದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮೂಲದವನು ಎನ್ನಲಾದ ಉಸ್ಮಾನ್‌, ಪಿಒಕೆಯ ತನ್ನ ಕುಟುಂಬಹೊಂದಿರುವ ಜಮೀನಿನಲ್ಲಿ ಭಯೋತ್ಪಾದಕ ತರಬೇತಿ ಶಿಬಿರ ಆಯೋಜಿಸಲು ಮತ್ತು ಲಂಡನ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಕಟ್ಟಡದ ಮೇಲೆ ಬಾಂಬ್‌ ದಾಳಿ ನಡೆಸಲು ಸಂಚು ಹೂಡಿದ್ದ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಈತನಿಗೆ ನ್ಯಾಯಾಲಯ 7 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.

ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಾದರಿಯಲ್ಲಿ ಬ್ರಿಟನ್‌ ಸಂಸತ್‌ ಮೇಲೆ ದಾಳಿ ನಡೆಸುವ ಕುರಿತೂ ಈತ ಚರ್ಚೆ ನಡೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಈತ ಸಾರ್ವಜನಿಕರಿಗೆ ಅಪಾಯಕಾರಿ’ ಎಂದು ಉಸ್ಮಾನ್‌ಗೆ ಶಿಕ್ಷೆ ವಿಧಿಸುವ ವೇಳೆ ನ್ಯಾಯಾಧೀಶರು ಹೇಳಿದ್ದರು.

‘28 ವರ್ಷದ ಉಸ್ಮಾನ್‌, ಸ್ಟಾಫೋರ್ಡ್‌ಶಯೆರ್ ಪ್ರದೇಶದಲ್ಲಿ ವಾಸಿಸುತ್ತಿದ್ದ. ಆತ 2018 ಡಿಸೆಂಬರ್‌ನಲ್ಲಿ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದ’ ಎಂದು ಸ್ಕಾಟ್ಲೆಂಡ್‌ಯಾರ್ಡ್‌ನ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಭಾರತೀಯ ಮೂಲದ ಅಧಿಕಾರಿ ನೀಲ್‌ ಬಸು ತಿಳಿಸಿದ್ದಾರೆ.

‘ಅಲ್‌ ಕೈದಾ ಜೊತೆ ಉಸ್ಮಾನ್‌ಗೆ ನಂಟು ಇತ್ತು ಎಂಬುದು ಆತನ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಿ
ದರೆ ದೃಢವಾಗುತ್ತದೆ. ಅಲ್ಲದೆ ಐಎಸ್‌ ಸಂಘಟನೆ ಜೊತೆ ಆತ ಸಂಪರ್ಕ ಹೊಂದಿರುವ ಸಾಧ್ಯತೆಯೂ ಇದೆ’ ಎಂದಿದ್ದಾರೆ.

ಹಿಟ್‌ಲಿಸ್ಟ್‌ನಲ್ಲಿ ಬೋರಿಸ್‌

2012ರಲ್ಲಿ ಪೊಲೀಸರು ಉಸ್ಮಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ, ಈಗಿನ ಬ್ರಿಟನ್‌ ಪ್ರಧಾನಿ ಹಾಗೂ ಅಂದಿನ ಲಂಡನ್‌ ಮೇಯರ್‌ ಆಗಿದ್ದ ಬೋರಿಸ್‌ ಜಾನ್ಸನ್‌ ಅವರು ಕೂಡ ಆತನ ಹಿಟ್‌ಲಿಸ್ಟ್‌ನಲ್ಲಿದ್ದರು ಎಂಬ ವಿಚಾರವು ತಿಳಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT