ಸೋಮವಾರ, ಸೆಪ್ಟೆಂಬರ್ 23, 2019
27 °C

ಕಾಶ್ಮೀರ ಸಮಸ್ಯೆ: ಪಾಕಿಸ್ತಾನದಿಂದ ಬೇಜವಾಬ್ದಾರಿ ನಡೆ -ಅಘ್ಗಾನಿಸ್ತಾನ ಟೀಕೆ

Published:
Updated:

ವಾಷಿಂಗ್ಟನ್‌/ಕಾಬೂಲ್‌: ಅಮೆರಿಕ ನೇತೃತ್ವದಲ್ಲಿ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಶಾಂತಿ ಪ್ರಕ್ರಿಯೆ ಜತೆ ಕಾಶ್ಮೀರ ಸಮಸ್ಯೆಯನ್ನು ತಳುಕು ಹಾಕುವ ಪಾಕಿಸ್ತಾನದ ಪ್ರಯತ್ನಕ್ಕೆ ಅಫ್ಗಾನಿಸ್ತಾನ ಕಿಡಿಕಾರಿದೆ. 

ಪಾಕಿಸ್ತಾನದ ಈ ನಡೆ ಅಜಾಗರೂಕ, ಅಸಮರ್ಥನೀಯ ಹಾಗೂ ಬೇಜವಾಬ್ದಾರಿಯುತ. ಇದರಿಂದಾಗಿ ರಾಷ್ಟ್ರದಲ್ಲಿನ ಹಿಂಸೆ ಮುಂದುವರಿಸುವ ದುರುದ್ದೇಶವನ್ನು ಪಾಕಿಸ್ತಾನ ಹೊಂದಿದೆ ಎಂದು ಕಾಬೂಲ್‌ ಟೀಕಿಸಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ನಿರ್ಮಾಣವಾಗಿರುವ ಸಂದರ್ಭದಲ್ಲಿ ಅಫ್ಗಾನಿಸ್ತಾನ ಗಡಿಯಿಂದ ತನ್ನ ಸೇನೆಯನ್ನು ಕಾಶ್ಮೀರ ಗಡಿಗೆ ಪಾಕಿಸ್ತಾನ ಸ್ಥಳಾಂತರಿಸಬಹುದು ಎಂದು ಅಮೆರಿಕದಲ್ಲಿನ ಪಾಕಿಸ್ತಾನದ ರಾಯಭಾರಿ ಅಸಾದ್‌ ಮಜೀದ್‌ ಖಾನ್‌ ದಿ ನ್ಯೂಯಾರ್ಕ್‌ ಟೈಮ್ಸ್‌ಗೆ ತಿಳಿಸಿದ್ದರು.

ಇದರಿಂದ ಅಮೆರಿಕ ಮತ್ತು ತಾಲಿಬಾನ್‌ ನಡುವೆ ನಡೆಯುತ್ತಿರುವ ಶಾಂತಿ ಒಪ್ಪಂದ ಮಾತುಕತೆಗೆ ಅಡ್ಡಿಯಾಗಬಹುದು ಎಂದು ಪತ್ರಿಕೆ ಉಲ್ಲೇಖಿಸಿತ್ತು. 

ಈ ಕುರಿತು ಪ್ರಕಟಣೆ ಹೊರಡಿಸಿ ರುವ ಅಮೆರಿಕದಲ್ಲಿನ ಅಫ್ಗಾನಿಸ್ತಾ ನದ ರಾಯಭಾರಿ ರೋಯಾ ರಹಮಾನಿ, ‘ಅಸಾದ್‌ ಮಜೀದ್‌ ಅವರು ನೀಡಿರುವ ಹೇಳಿಕೆಯನ್ನು ಅಫ್ಗಾನಿಸ್ತಾನ ಗಂಭೀರವಾಗಿ ಪ್ರಶ್ನಿಸುತ್ತದೆ. ಕಾಶ್ಮೀರದ ಬಿಕ್ಕಟ್ಟು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ಕಾಶ್ಮೀರದ ಸಮಸ್ಯೆಯನ್ನು ಅಫ್ಗಾನಿಸ್ತಾನದ ಜತೆ ಜೋಡಿಸುವ ಪಾಕಿಸ್ತಾನದ ಪ್ರಯತ್ನ ದುರುದ್ದೇಶಪೂರ್ವಕವಾಗಿದೆ. ತಾಲಿಬಾನ್‌ ಉಗ್ರ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗದ ಪಾಕಿಸ್ತಾನ ಈ ರೀತಿ ಹೇಳಿಕೆ ನೀಡುತ್ತಿದೆ’ ಎಂದು ಟೀಕಿಸಿದ್ದಾರೆ. 

‘ಅಫ್ಗಾನಿಸ್ತಾನದಿಂದ ಪಾಕಿಸ್ತಾನಕ್ಕೆ ಯಾವುದೇ ಅಪಾಯವಿಲ್ಲ. ಹೀಗಾಗಿ ಅಫ್ಗಾನಿಸ್ತಾನ–ಪಾಕಿಸ್ತಾನ ಗಡಿಯಲ್ಲಿ ಸಾವಿರಾರು ಯೋಧರನ್ನು ನಿಯೋಜಿಸುವ ಅವಶ್ಯಕತೆಯೂ ಇಲ್ಲ. ಆದರೆ ಪಾಕಿಸ್ತಾನ ಮೂಲದ ಮತ್ತು ಬೆಂಬಲಿತ ಉಗ್ರ ಸಂಘಟನೆಗಳು ಅಫ್ಗಾನಿಸ್ತಾನದಲ್ಲಿ ಶಾಂತಿ ಕದಡುತ್ತಿವೆ. ಪಾಕಿಸ್ತಾನದಲ್ಲಿ ಈ ಸಂಘಟನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ತಿರುಗೇಟು ನೀಡಿದ್ದಾರೆ. 

Post Comments (+)