ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಹೋಟೆಲ್‌ನಲ್ಲಿ ಉಳಿಯಲ್ಲ: ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌

ಜುಲೈ 21ರಿಂದ ಅಮೆರಿಕ ಪ್ರವಾಸ
Last Updated 8 ಜುಲೈ 2019, 20:15 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಆರ್ಥಿಕ ಸಂಕಷ್ಟ ಪ್ರಧಾನಿ ಇಮ್ರಾನ್‌ ಖಾನ್‌ಗೂ ತಟ್ಟಿದೆ.ಜುಲೈ 21ರಿಂದ ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಇಮ್ರಾನ್‌, ಪ್ರವಾಸದ ವೆಚ್ಚ ತಗ್ಗಿಸಲು ಮುಂದಾಗಿದ್ದಾರೆ.

ಪ್ರವಾಸದ ವೇಳೆ ಐಷಾರಾಮಿ ಹೋಟೆಲ್‌ಗಳ ಬದಲಾಗಿ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿಯ ಅಧಿಕೃತ ನಿವಾಸದಲ್ಲೇ ಉಳಿದುಕೊಳ್ಳಲು ಇಮ್ರಾನ್‌ ನಿರ್ಧರಿಸಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳು ಪಾಕಿಸ್ತಾನದ ರಾಯಭಾರ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ.

ಕಳೆದ ವರ್ಷ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರರಾಷ್ಟ್ರದ ಆರ್ಥಿಕ ಮುಗ್ಗಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಇಮ್ರಾನ್‌ ತೆಗೆದುಕೊಂಡಿದ್ದರು.ಕಳೆದ ವಾರ ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್‌)ಕಾರ್ಯನಿರ್ವಹಣಾ ಮಂಡಳಿ ಪಾಕಿಸ್ತಾನಕ್ಕೆ 6 ಬಿಲಿಯನ್‌ ಯುಎಸ್‌ ಡಾಲರ್‌(ಅಂದಾಜು ₹41,215 ಕೋಟಿ)ನೆರವು ನೀಡಲು ಒಪ್ಪಿಗೆ ನೀಡಿತ್ತು. ಈ ಮೂಲಕಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ದೊರಕಿತ್ತು. ನೆರವು ನೀಡುವ ಸಂದರ್ಭದಲ್ಲಿ ಕಠಿಣ ಷರತ್ತುಗಳನ್ನು ವಿಧಿಸಿದ್ದ ಐಎಂಎಫ್‌, ವೆಚ್ಚ ತಗ್ಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.

ಸಹಮತಿ ಸೂಚಿಸದ ಅಮೆರಿಕ: ಇಮ್ರಾನ್‌ ಈ ನಿರ್ಧಾರಕ್ಕೆ ಅಮೆರಿಕ ಗುಪ್ತಚರ ವಿಭಾಗ ಹಾಗೂ ನಗರಾಡಳಿತ ಸಹಮತಿ ಸೂಚಿಸಿಲ್ಲ. ಅಮೆರಿಕಕ್ಕೆ ಆಗಮಿಸುವ ಗಣ್ಯರ ರಕ್ಷಣಾ ಕಾರ್ಯ ಗುಪ್ತಚರ ವಿಭಾಗದ ಹೊಣೆಯಾಗಿದ್ದರೆ, ಸಂಚಾರ ನಿಯಂತ್ರಣದ ಹೊಣೆ ನಗರಾಡಳಿತದ್ದಾಗಿದೆ. ಪಾಕಿಸ್ತಾನದ ರಾಯಭಾರಿಯ ಅಧಿಕೃತ ನಿವಾಸ ನಗರದ ಹೃದಯಭಾಗದಲ್ಲಿದ್ದು, ಇದೇ ಪ್ರದೇಶದಲ್ಲಿ ಭಾರತ, ಟರ್ಕಿ, ಜಪಾನ್‌ ಸೇರಿದಂತೆ ಇತರೆ ರಾಯಭಾರ ಕಚೇರಿಗಳಿವೆ.

ಅಮೆರಿಕ ಉಪಾಧ್ಯಕ್ಷರ ಅಧಿಕೃತ ನಿವಾಸ,ಟ್ರಂಪ್‌ ಕುಟುಂಬದ ಸದಸ್ಯರ ನಿವಾಸವೂ ಇಲ್ಲಿದೆ.ಪ್ರವಾಸದ ಸಂದರ್ಭದಲ್ಲಿ ಹಲವು ಸಭೆಗಳು ನಡೆಯಲಿದ್ದು, ಪ್ರತಿ ಬಾರಿಯೂ ನಿವಾಸದಿಂದ ಪಾಕಿಸ್ತಾನ ರಾಯಭಾರ ಕಚೇರಿಗೆ ತೆರಳುವುದು ಅನಿವಾರ್ಯವಾಗಲಿದೆ. ಇದರಿಂದಾಗಿ ಭದ್ರತೆ ಹಾಗೂ ಟ್ರಾಫಿಕ್‌ ಸಮಸ್ಯೆಯಾಗಲಿದ್ದು, ಇದು ಗುಪ್ತಚರ ವಿಭಾಗಕ್ಕೆ ತಲೆನೋವಿನ ವಿಷಯವಾಗಿದೆ.

‘ಇಮ್ರಾನ್‌ ರಾಜೀನಾಮೆ ನೀಡಲಿ’
ಪ್ರಧಾನಿ ಇಮ್ರಾನ್‌ ಖಾನ್‌ ಅವರು ರಾಜೀನಾಮೆ ನೀಡಲಿ ಎಂದುಪಾಕಿಸ್ತಾನ್‌ ಮುಸ್ಲಿಮ್‌ ಲೀಗ್‌– ನವಾಜ್‌ ಪಕ್ಷದ ಉಪಾಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಪುತ್ರಿ ಮರಿಯಮ್ ನವಾಜ್‌, ಇಮ್ರಾನ್‌ ಖಾನ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು ಸೋಮವಾರ ವರದಿಯಾಗಿದೆ.

ಮಂಡಿ ಬಹಾವುದ್ದಿನ್‌ ನಗರದಲ್ಲಿ ಭಾನುವಾರ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನವನ್ನು ಆಳುವ ಹಕ್ಕು ಇಮ್ರಾನ್‌ ಖಾನ್‌ ಅವರಿಗಿಲ್ಲ’ ಎಂದು ಗುಡುಗಿದ್ದಾರೆ.

‘ರಾಜೀನಾಮೆ ಕೊಡಿ, ಮನೆಗೆ ನಡೆಯಿರಿ’ ಎಂದು ಘೋಷಣೆಗಳನ್ನು ಕೂಗಿ, ರ್‍ಯಾಲಿಯಲ್ಲಿ ಭಾಗವಹಿಸಿದ್ದ ಜನರಿಗೂ ತನ್ನಂತೆಯೇ ಘೋಷಣೆ ಕೂಗುವಂತೆ ಹೇಳಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಕಾಣದ ಕೈಗಳ ತೀವ್ರ ಒತ್ತಡದಿಂದ ನನ್ನ ತಂದೆಗೆ ಜೈಲು ಶಿಕ್ಷೆ ಆಗಿದೆ ಎಂದು ಮರಿಯಮ್ ನವಾಜ್‌ ಶನಿವಾರ ಆರೋಪಿಸಿದ್ದರು. ಈ ಆರೋಪವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಅರ್ಶದ್‌ ಮಲಿಕ್‌ ಅವರು ಭಾನುವಾರ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT