ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಶೇ 70ರಷ್ಟು ಜಲಮೂಲಗಳು ಬರಿದಾಗಿವೆ: ಜಲತಜ್ಞ ರಾಜೇಂದ್ರಸಿಂಗ್‌ ಎಚ್ಚರಿಕೆ

ಸಮುದಾಯ ಕೇಂದ್ರೀತ ಜಲನಿರ್ವಹಣೆಗೆ ಸಲಹೆ
Last Updated 19 ಸೆಪ್ಟೆಂಬರ್ 2019, 5:24 IST
ಅಕ್ಷರ ಗಾತ್ರ

ಸ್ಟಾಕ್‌ಹೋಂ:‘ಭಾರತದಲ್ಲಿ ಶೇ 70ರಷ್ಟು ಜಲಮೂಲಗಳು ಬರಿದಾಗಿವೆ. ಭವಿಷ್ಯದಲ್ಲಿ ಜಲಬಿಕ್ಕಟ್ಟು ಕಾಣಿಸಿಕೊಳ್ಳಲಿದ್ದು, ಜನರು ನೀರು ಲಭ್ಯವಿರುವ ದೇಶಗಳಿಗೆ ವಲಸೆ ಹೋಗಬೇಕಾಗಬಹುದು’ ಎಂದು ಪರಿಸರವಾದಿ, ಜಲತಜ್ಞ ರಾಜೇಂದ್ರ ಸಿಂಗ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ತಕ್ಷಣದಲ್ಲಿ ಮುಂಜಾಗ್ರತೆ ಕ್ರಮಗಳ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಅವರು, ಬರಡಾಗಿರುವ ಕೇಂದ್ರ ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳಿಂದ ಈಗಾಗಲೇ ಜನರು ಯೂರೋಪಿಯನ್‌ ರಾಷ್ಟ್ರಗಳಿಗೆ ವಲಸೆ ಹೋಗಲಾರಂಭಿಸಿದ್ದಾರೆ. ಈ ಬೆಳವಣಿಗೆ ಜಾಗತಿಕ ಸೌಹಾರ್ದಕ್ಕೂ ಧಕ್ಕೆ ತರಲಿದೆ’ ಎಂದರು.

‘ಭಾರತದಲ್ಲಿ ವಲಸೆ ಈಗ ಗ್ರಾಮಗಳಿಂದ ನಗರಗಳತ್ತ ಆರಂಭವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಅನ್ಯ ರಾಷ್ಟ್ರಗಳಿಗೂ ವಲಸೆ ಆರಂಭವಾಗಬಹುದು’ ಎಂದು ಅಭಿಪ್ರಾಯಪಟ್ಟರು.

ಸ್ಟಾಕ್‌ಹೋಂ ಅಂತರರಾಷ್ಟ್ರೀಯ ಜಲಸಂಸ್ಥೆ (ಎಸ್ಐಡಬ್ಲ್ಯೂಐ)ಆಯೋಜಿಸಿದ್ದ ವಿಶ್ವ ಜಲ ಸಪ್ತಾಹದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಸಂಸ್ಥೆಯ ಜೊತೆಗೆ ಮಾತನಾಡಿದರು.

ಜಲಸಮಸ್ಯೆ ಕುರಿತು ಎಸ್‌ಐಡಬ್ಲ್ಯೂಐ ರೂಪಿಸಿರುವ ವಿಶ್ವಭೂಪಟದ ಅನುಸಾರ, ಭಾರತದಲ್ಲಿ ಗಂಭೀರ ಸ್ವರೂಪದಲ್ಲಿ ನೀರಿನ ಸಮಸ್ಯೆಯಿದೆ. ‘ಶೂನ್ಯ ದಿನ’ ತಲುಪಿ ನಳಗಳು ಒಣಗುವ ದಿನಗಳು ದೂರವಿಲ್ಲ.

‘ಭಾರತ ಮುಂದಿನ ದಶಕಗಳಲ್ಲಿ ವಾತಾವರಣದ ತೀವ್ರ ಬದಲಾವಣೆಗೆ ಸಾಕ್ಷಿಯಾಗಲಿದೆ. ಬಡವರೇ ಹೆಚ್ಚಿರುವ, ಅತ್ಯಧಿಕ ಜನಸಂಖ್ಯೆಯುಳ್ಳ ದೇಶ ಹವಾಮಾನದ ಸೂಕ್ಷ್ಮ ಬೆಳವಣಿಗೆಗಳನ್ನು ಅವಲಂಬಿಸಿವೆ. ಇದರಿಂದಾಗಿ, ವಾತಾವರಣ ಬದಲಾವಣೆಯ ನಕಾರಾತ್ಮಕ ಪರಿಣಾಮಗಳಿಗೆ ಗುರಿಯಾಗುವ ಸಾಧ್ಯತೆಗಳಿವೆ. ಈ ಅಂಶಗಳು ಪರಿಸ್ಥಿತಿಯನ್ನು ಗಂಭೀರವಾಗಿಸಲಿವೆ’ ಎಂದು ಡಬ್ಲ್ಯೂಆರ್‌ಐ ವರದಿ ಅಭಿಪ್ರಾಯಪಟ್ಟಿದೆ.

ಜಲಪೂರಣ, ಜಲಸಂರಕ್ಷಣೆ ಕಾಯಕದಲ್ಲಿ ಕೈಗೊಂಡ ಕ್ರಮಗಳಿಗಾಗಿ 2001ನೇ ಸಾಲಿನಲ್ಲಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರಾಗಿದ್ದ ರಾಜೇಂದ್ರ ಸಿಂಗ್ ಪ್ರಕಾರ, ‘ದೇಶದಲ್ಲಿ ಅಂತರ್ಜಲ ಪ್ರಮಾಣ ಶೇ 72ರಷ್ಟು ಬರಿದಾಗಿದೆ.’

ಈ ಸ್ಥಿತಿಯಲ್ಲಿ ದೇಶವನ್ನು ಜಲದುರಂತದಿಂದ ರಕ್ಷಿಸುವುದು ಕಷ್ಟಸಾಧ್ಯ. ದೇಶದಲ್ಲಿ ಈ ವರ್ಷ 17 ರಾಜ್ಯಗಳ 365 ಜಿಲ್ಲೆಗಳಲ್ಲಿ ಬರಪರಿಸ್ಥಿತಿ ಇದ್ದರೆ, 190 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ ಎಂದಿದ್ದಾರೆ.

ಬರ ಮತ್ತು ಪ್ರವಾಹ ಜೊತೆಗೂಡಿದ ಇಂಥ ಆತಂಕಕಾರಿ ಸ್ಥಿತಿಯನ್ನು ಕೇವಲ ಪೈಪ್‌ ಮೂಲಕ ನೀರು ಪೂರೈಕೆ ವ್ಯವಸ್ಥೆಯಿಂದ ಎದುರಿಸಲಾಗದು. ಸಮುದಾಯ ಸಹಭಾಗಿತ್ವದ ಜಲನಿರ್ವಹಣೆ ವ್ಯವಸ್ಥೆಯಿಂದ ಮಾತ್ರವೇ ಇದನ್ನು ಎದುರಿಸಬಹುದು. ಸಮುದಾಯ ಕೇಂದ್ರೀತವಾದ ಜಲನಿರ್ವಹಣೆಯ ವಿಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆಯಿಂದ ಮಾತ್ರವೇ ಭಾರತದ ಜಲಬಿಕ್ಕಟ್ಟು ಎದುರಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.

ನೀತಿ ಆಯೋಗ ತನ್ನ ಜೂನ್‌ ತಿಂಗಳ ವರದಿಯಲ್ಲಿ ದೇಶದ 21 ಪ್ರಮುಖ ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಪ್ರಮಾಣ ಬತ್ತಲಿದೆ ಎಂದು ಹೇಳಿತ್ತು. ದೇಶದಲ್ಲಿ ಸ್ಥಳೀಯ ನೀರಿನ ಅಗತ್ಯಗಳಿಗೆ ಶೇ 75ರಷ್ಟು ಹಾಗೂ ಕೃಷಿ ಚಟುವಟಿಕೆಗೆ ಶೇ 80ರಷ್ಟು ಅಂತರ್ಜಲವನ್ನೇ ಅವಲಂಬಿಸಲಾಗಿದೆ ಎಂದು ವರದಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT