ಶುಕ್ರವಾರ, ಏಪ್ರಿಲ್ 23, 2021
30 °C

ಜಿ20 ಸಮಾವೇಶಕ್ಕಾಗಿ ಜಪಾನ್‌ ತಲುಪಿದ ನರೇಂದ್ರ ಮೋದಿ: ಟ್ರಂಪ್ ಸೇರಿ ಹಲವರ ಭೇಟಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಒಸಾಕ (ಜಪಾನ್): ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಬಂದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೇರಿದಂತೆ ವಿಶ್ವದ ಹಲವು ನಾಯಕರನ್ನು ಅವರು ಈ ಸಂದರ್ಭ ಭೇಟಿಯಾಗಲಿದ್ದಾರೆ. ಇದು ಮೋದಿ ಅವರು ಭಾಗವಹಿಸುತ್ತಿರುವ 6ನೇ ಜಿ20 ಸಮಾವೇಶ. ಒಸಾಕ ಪಟ್ಟಣದಲ್ಲಿ ಜೂನ್ 28–29ರಂದು ಸಮಾವೇಶ ನಡೆಯಲಿದೆ.

ಜಪಾನ್‌ಗೆ ಹೊರಡುವ ಮೊದಲು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮೋದಿ, ಮಹಿಳೆಯರ ಸ್ವಾವಲಂಬನೆ, ಕೃತಕ ಬುದ್ಧಿಮತ್ತೆ ಮತ್ತು ಜಗತ್ತನ್ನು ಬಾಧಿಸುತ್ತಿರುವ ಸಾಮಾನ್ಯ ಸಮಸ್ಯೆಗಳಾದ ಭಯೋತ್ಪಾದನೆಯಂಥ ವಿಷಯಗಳ ಬಗ್ಗೆ ಚರ್ಚಿಸಲು ಉತ್ಸುಕರಾಗಿರುವುದಾಗಿ ಹೇಳಿದ್ದರು.

ಟ್ರಂಪ್ ಜೊತೆಗೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನೂ ಮೋದಿ ಭೇಟಿಯಾಗಲಿದ್ದಾರೆ. ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ ವಿಶ್ವದಲ್ಲಿ ಸ್ಥಿರತೆ ಕಾಪಾಡಲು ಚರ್ಚೆಗಳು ಅಗತ್ಯ. ಜಿ20 ಸಮಾವೇಶ ಇಂಥ ಚರ್ಚೆಗಳಿಗೆ ಸೂಕ್ತ ವೇದಿಕೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದರೆ.

2022ರಲ್ಲಿ ಜಿ20 ಸಮಾವೇಶವು ಭಾರತದಲ್ಲಿ ನಡೆಯಲಿದೆ. ಆಗ ಭಾರತದ 75ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮದ ಜೊತೆಗೆ ನಮ್ಮ ಪ್ರಗತಿಯ ಕಥನವನ್ನು ಹೇಳಿಕೊಳ್ಳಲಿದ್ದೇವೆ. ಇದೀಗ ಒಸಾಕ ನಗರದಲ್ಲಿ ನಡೆಯುತ್ತಿರುವ ಸಮಾವೇಶವು ದೆಹಲಿ ಸಮಾವೇಶಕ್ಕೆ ಅಡಿಗಲ್ಲು ಎಂದು ಮೋದಿ ವ್ಯಾಖ್ಯಾನಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬ್ರಿಕ್ಸ್‌ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೈನಾ ಮತ್ತು ಸೌತ್ ಆಫ್ರಿಕಾ), ಜೈ (ಜಪಾನ್, ಅಮೆರಿಕ, ಇಂಡಿಯಾ) ಸಭೆಗಳಲ್ಲಿ ವಿಶ್ವದ ಪ್ರಮುಖ ನಾಯಕರನ್ನು ಭೇಟಿಯಾಗಿ ಭಾರತದ ಕಾಳಜಿ ಇರುವ ದ್ವಿಪಕ್ಷೀಯ ಮತ್ತು ವಿಶ್ವದ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸುತ್ತೇನೆ. ಶೀಘ್ರವೇ ಆರ್‌ಐಸಿ (ರಷ್ಯಾ, ಇಂಡಿಯಾ, ಚೈನಾ) ದೇಶಗಳ ಅನೌಪಚಾರಿಕ ಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಐದು ವರ್ಷಗಳ ಭಾರತದ ಅಭಿವೃದ್ಧಿ ಕಥನವನ್ನು ಜಗತ್ತಿನ ಎದುರು ತೆರೆದಿಡಲು ಇದು ಉತ್ತಮ ಅವಕಾಶ ಕಲ್ಪಿಸಿದೆ. ಸ್ಥಿರತೆ ಮತ್ತು ಅಭಿವೃದ್ಧಿಯ ಪರ ದೇಶದ ಜನರು ಮತಚಲಾಯಿಸಿದ್ದರಿಂದ ಇದು ಸಾಧ್ಯವಾಯಿತು ಎಂದು ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು