ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಗಡಿ ಸಂಘರ್ಷದಿಂದಾಗಿ ಮೋದಿ ಉತ್ತಮ ಮನಸ್ಥಿತಿಯಲ್ಲಿಲ್ಲ: ಟ್ರಂಪ್‌ 

Last Updated 29 ಮೇ 2020, 2:53 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಪುನರುಚ್ಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಭಯ ದೇಶಗಳ ನಡುವಿನ ದೊಡ್ಡ ಸಂಘರ್ಷದಿಂದಾಗಿ ಮೋದಿ ಅವರು ‘ಉತ್ತಮ ಮನಸ್ಥಿತಿಯಲ್ಲಿಲ್ಲ’ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಗುರುವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡೊನಾಲ್ಡ್‌ ಟ್ರಂಪ್, ಭಾರತ ಮತ್ತು ಚೀನಾ ನಡುವೆ ‘ದೊಡ್ಡ ಸಂಘರ್ಷ’ ನಡೆಯುತ್ತಿದೆ ಎಂದು ಹೇಳಿದರು.

‘ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ. ಈ ದೇಶದ ಮಾಧ್ಯಮಗಳಿಗಿಂತಲೂ ಭಾರತದಲ್ಲಿ ನನ್ನನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ನಾನು ಮೋದಿಯನ್ನು ಇಷ್ಟಪಡುತ್ತೇನೆ. ನಿಮ್ಮ ಪ್ರಧಾನಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವರು ಒಬ್ಬ ಮಹಾನ್ ಸಂಭಾವಿತ" ಎಂದು ಅವರು ಹೇಳಿದರು.

ಭಾರತ ಮತ್ತು ಚೀನಾ ನಡುವಿನ ಗಡಿ ಪರಿಸ್ಥಿತಿಯ ಕುರಿತು ಅಲ್ಲಿನ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಭಾರತ ಮತ್ತು ಚೀನಾದ ನಡುವೆ ದೊಡ್ಡ ಸಂಘರ್ಷ ಎದುರಾಗಿದೆ. ಎರಡೂ ದೇಶಗಳು ತಲಾ 1.4 ಶತಕೋಟಿಯಷ್ಟು ಜನಸಂಖ್ಯೆ, ಅತ್ಯಂತ ಶಕ್ತಿಶಾಲಿ ಮಿಲಿಟರಿ ಪಡೆ ಹೊಂದಿವೆ. ಭಾರತವು ಸಂತೋಷವಾಗಿಲ್ಲ ಮತ್ತು ಬಹುಶಃ ಚೀನಾ ಕೂಡ ಸಂತೋಷವಾಗಿಲ್ಲ’ ಎಂದು ಟ್ರಂಪ್‌ ಹೇಳಿದರು.

‘ನಾನು ನಿಮಗೆ ಹೇಳುತ್ತೇನೆ... ನಾನು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದೆ. ಸದ್ಯ ಚೀನಾದ ಜೊತೆಗೆ ಎದುರಾಗಿರುವ ಈ ಪರಿಸ್ಥಿತಿಯಿಂದಾಗಿ ಅವರು ಉತ್ತಮ ಮನಸ್ಥಿತಿಯಲ್ಲಿಲ್ಲ,’ ಎಂದು ಅವರು ತಿಳಿಸಿದ್ದಾರೆ.

ಭಾರತ–ಚೀನಾ ಗಡಿ ಸಂಘರ್ಷದ ಕುರಿತು ಬುಧವಾರ ಟ್ವೀಟ್ ಮಾಡಿದ್ದ ಡೊನಾಲ್ಡ್‌ ಟ್ರಂಪ್‌, ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ದ ಎಂದು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT