ಮಂಗಳವಾರ, ಫೆಬ್ರವರಿ 25, 2020
19 °C

ನಾರಾಯಣ ಮೂರ್ತಿ ಅಳಿಯ ಬ್ರಿಟನ್‌ ಹಣಕಾಸು ಸಚಿವ

ರಾಯಿಟರ್ಸ್‌/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ ಅವರನ್ನು ಬ್ರಿಟನ್‌ನ ಹಣಕಾಸು ಸಚಿವರನ್ನಾಗಿ ಗುರುವಾರ ನೇಮಿಸಲಾಗಿದೆ.

39 ವರ್ಷದ ರಿಷಿ ಅವರು ಬ್ರಿಟನ್‌ ಸರ್ಕಾರದಲ್ಲಿ ಎರಡನೇ ಅತ್ಯಂತ ಮಹತ್ವದ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಇದುವರೆಗೆ ಹಣಕಾಸು ಸಚಿವರಾಗಿದ್ದ ಪಾಕಿಸ್ತಾನ ಮೂಲದ ಸಾಜಿದ್‌ ಜಾವಿದ್‌ ಗುರುವಾರ ರಾಜೀನಾಮೆ ನೀಡಿದ ಬಳಿಕ ರಿಷಿ ಅವರನ್ನು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಈ ಹುದ್ದೆಗೆ ನೇಮಿಸಿದ್ದಾರೆ.

ಜಾನ್ಸನ್‌ ಅವರ ಜತೆ ಹಲವು ವಿಷಯಗಳಲ್ಲಿ ಜಾವಿದ್‌ ಭಿನ್ನಾಭಿಪ್ರಾಯ ಹೊಂದಿದ್ದರು. ತಮ್ಮ ಎಲ್ಲ ಆಪ್ತ ವಿಶೇಷ ಸಲಹೆಗಾರರನ್ನು ತೆಗೆದುಹಾಕಬೇಕು ಎಂದು ಜಾನ್ಸನ್‌ ಅವರು ನೀಡಿದ್ದ ಸೂಚನೆಯನ್ನು ಜಾವಿದ್‌ ತಳ್ಳಿ ಹಾಕಿದ್ದರು. 

ಜಾವಿದ್‌ ಅವರ ಜತೆ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ರಿಷಿ ಸುನಾಕ್‌ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದರು.

ಡಿಸೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಮತ್ತು ಜನವರಿ 31ರಂದು ಐರೋಪ್ಯ ಒಕ್ಕೂಟದಿಂದ ದೂರವಾದ ನಂತರ ಪ್ರಧಾನಿ ಜಾನ್ಸನ್‌, ಇದೇ ಮೊದಲ ಬಾರಿಗೆ ಸಚಿವ ಸಂಪುಟದ ಪುನರ್‌ ರಚನೆ ಕಾರ್ಯ ಕೈಗೊಂಡಿದ್ದಾರೆ. 

ರಿಷಿ ಅವರು ನಾರಾಯಣಮೂರ್ತಿ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿದ್ದಾರೆ. 2015ರಲ್ಲಿ ಮೊದಲ ಬಾರಿ ಬ್ರಿಟನ್‌ ಸಂಸತ್‌ ಪ್ರವೇಶಿಸಿದ ರಿಷಿ ಅವರು, ಕನ್ಸರ್ವೆಟಿವ್‌ ಪಕ್ಷದ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ. ಜಾನ್ಸನ್‌ ಅವರ ಕಟ್ಟಾ ಬೆಂಬಲಿಗರಾಗಿರುವ ರಿಷಿ ಅವರು ಸರ್ಕಾರದ ನೀತಿ ನಿರೂಪಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಐರೋಪ್ಯ ಒಕ್ಕೂಟವನ್ನು ತೊರೆಯುವಲ್ಲಿ ಜಾನ್ಸನ್‌ ಅವರು ರೂಪಿಸಿದ್ದ ಕಾರ್ಯತಂತ್ರಗಳಲ್ಲಿಯೂ ರಿಷಿ ಪ್ರಮುಖ ಪಾತ್ರವಹಿಸಿದ್ದರು.

ರಾಜಕೀಯ ಸೇರುವ ಮುನ್ನ ರಿಷಿ ಸುನಾಕ್‌ ಅವರು, ಒಂದು ಶತಕೋಟಿ ಪೌಂಡ್‌ ಮೊತ್ತದ ಜಾಗತಿಕಮಟ್ಟದ ಉದ್ಯಮವನ್ನು ಸ್ಥಾಪಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು