2030ಕ್ಕೆ ಮುಳುಗುವ ಭೀತಿಯಲ್ಲಿ ಬ್ಯಾಂಕಾಕ್

7
ಸಮುದ್ರ ಮಟ್ಟ ಏರಿಕೆ, ಹವಾಮಾನ ವೈಪರೀತ್ಯ

2030ಕ್ಕೆ ಮುಳುಗುವ ಭೀತಿಯಲ್ಲಿ ಬ್ಯಾಂಕಾಕ್

Published:
Updated:
Deccan Herald

ಬ್ಯಾಂಕಾಕ್: ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಸಮಾವೇಶದ ಆತಿಥ್ಯ ವಹಿಸಲು ಥಾಯ್ಲೆಂಡ್ ಸಿದ್ಧತೆ ನಡೆಸುತ್ತಿದೆ. ಆದರೆ, ಸ್ವತಃ ಥಾಯ್ಲೆಂಡ್ ಪ್ರಾಕೃತಿಕ ವಿಕೋಪಕ್ಕೆ ಗುರಿಯಾಗುವ ಮುನ್ಸೂಚನೆ ದೊರಕಿದೆ. 

‘ಭಾರಿ ಪ್ರಮಾಣದ ಮಳೆ, ಸಮುದ್ರ ಮಟ್ಟ ಏರಿಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ 2030ರ ವೇಳೆಗೆ ರಾಜಧಾನಿ ಬ್ಯಾಂಕಾಕ್‌ನ ಶೇ 40ರಷ್ಟು ಭಾಗ ಮುಳುಗಿಹೋಗಲಿದೆ’ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. 

ಹವಾಮಾನ ವೈಪರೀತ್ಯದಿಂದ ಅಪಾಯ: ಹಿಂದೊಮ್ಮೆ ಜೌಗು ಭೂಮಿಯಾಗಿದ್ದ ಪ್ರದೇಶದಲ್ಲಿ (ಸಮುದ್ರ ಮಟ್ಟದಿಂದ 5 ಅಡಿ ಎತ್ತರ ದಲ್ಲಿ ರುವ) ನಿರ್ಮಾಣವಾಗಿರುವ ಬ್ಯಾಂಕಾಕ್‌, ವಿಶ್ವದಲ್ಲಿಯೇ ಹವಾಮಾನ ವೈಪರೀತ್ಯಕ್ಕೆ ಅತಿ ಹೆಚ್ಚು ತುತ್ತಾಗಲಿರುವ ನಗರ ಎಂದು ಅಂದಾಜಿಸಲಾಗಿದೆ. ಜತೆಗೆ ಜಕಾರ್ತ ಹಾಗೂ ಮನಿಲಾ ಸಹ ಇದೇ ಸಾಲಿಗೆ ಸೇರಲಿವೆ. 

‘ಈಗಾಗಲೇ ಪ್ರತಿ ವರ್ಷ ಬ್ಯಾಂಕಾಕ್‌ನಲ್ಲಿ ಸಮುದ್ರ ಮಟ್ಟ 1ರಿಂದ 2 ಸೆಂ.ಮೀನಷ್ಟು ಹೆಚ್ಚುತ್ತಲೇ ಇದೆ. ಸದ್ಯದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗುವ ಅಪಾಯ ಇದೆ’ ಎಂದು ಗ್ರೀನ್‌ಪೀಸ್‌ನ ತಾರಾ ಬುವಾಕಂಸ್ರಿ ಹೇಳಿದ್ದಾರೆ.  

ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆ, ಭಾರಿ ಚಂಡಮಾರುತ, ಅಸಾಧಾರಣ ಪ್ರಮಾಣದ ಮಳೆ, ಭೀಕರ ಬರಗಾಲ ಹಾಗೂ ಪ್ರವಾಹದಿಂದ ಪರಿಸ್ಥಿತಿ ಸಾಕಷ್ಟು ಹದಗೆಡುವ ಸಾಧ್ಯತೆ ಇದೆ. ಇದರಿಂದಾಗಿ, 2015ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿರುವ ಸರ್ಕಾರಗಳ ಮೇಲೆ ಒತ್ತಡ ಹೆಚ್ಚಲಿದೆ. 

2011ರಲ್ಲಿ ಸಂಭವಿಸಿದ ಪ್ರವಾಹ ದಶಕದಲ್ಲಿಯೇ ಅತಿ ಹೆಚ್ಚು ಹಾನಿ ಉಂಟು ಮಾಡಿತ್ತು. ಇದರಿಂದಾಗಿ ನಗರದ ಐದನೇ ಒಂದು ಭಾಗ ಜಲಾವೃತವಾಗಿತ್ತು.

ನಗರೀಕರಣಕ್ಕೆ ಬಲಿ?
‘ಸಮುದ್ರತೀರವನ್ನು ಒತ್ತುವರಿ ಮಾಡಿ ಬ್ಯಾಂಕಾಕ್‌ನಲ್ಲಿ ನಗರೀಕರಣವಾಗಿರುವುದು ಅಲ್ಲಿನ ಜನರನ್ನು ಸಂಕಷ್ಟದ ಸ್ಥಿತಿಗೆ ದೂಡಲಿದೆ. ಗಗನಚುಂಬಿ ಕಟ್ಟಡಗಳ ಸಂಖ್ಯೆ ಹೆಚ್ಚಿರುವುದು ಸಹ ನಗರ ಕ್ರಮೇಣ ಮುಳುಗಲು ಕಾರಣವಾಗಲಿದೆ. ಅನಿಯಂತ್ರಿತ ರೀತಿಯಲ್ಲಿ ಅಭಿವೃದ್ಧಿ ಹೊಂದಿದ ಬ್ಯಾಂಕಾಕ್‌ ತನ್ನ ಅಭಿವೃದ್ಧಿಗೆ ತಾನೇ ಬಲಿಪಶುವಾಗುತ್ತಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 3

  Sad
 • 1

  Frustrated
 • 0

  Angry

Comments:

0 comments

Write the first review for this !