ಗುರುವಾರ , ಜುಲೈ 29, 2021
23 °C
ಭಾರತದ ಜತೆ ದ್ವಿಪಕ್ಷೀಯ ದೀರ್ಘಾವಧಿ ಸಂಬಂಧ ಬೇಕು: ಚೀನಾ

ಗಡಿ ಸಂಘರ್ಷ | ಚೀನಾಗೆ ಸುಂಕದ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ–ಚೀನಾ ಸೈನಿಕರ ನಡುವೆ ಗಾಲ್ವನ್‌ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಹಿಂಸಾತ್ಮಕ ಸಂಘರ್ಷವು ಎರಡೂ ದೇಶಗಳ ದೀರ್ಘಾವಧಿ ದ್ವಿಪಕ್ಷೀಯ ಸಂಬಂಧಕ್ಕೆ ತೊಡಕಾಗದು ಎಂಬ ವಿಶ್ವಾಸವನ್ನು ಚೀನಾ ಶುಕ್ರವಾರ ವ್ಯಕ್ತಪಡಿಸಿದೆ.

ಚೀನಾದ ಸರಕುಗಳು ಭಾರತಕ್ಕೆ ಹರಿದು ಬರುವುದನ್ನು ತಡೆಯುವುದಕ್ಕಾಗಿ ಸುಂಕ ಹೇರಿಕೆ ಮತ್ತು ಇತರ ಮಾರ್ಗಗಳ ಬಗ್ಗೆ ಭಾರತವು ಚಿಂತನೆ ಮಾಡುತ್ತಿದೆ ಎಂಬ ವರದಿ ಗುರುವಾರ ಪ್ರಕಟವಾಗಿತ್ತು. ಅದಾದ ಬಳಿಕ ಭಾರತದ ವಿಚಾರದಲ್ಲಿ ಚೀನಾದ ನಿಲುವು ಮೃದುವಾದಂತೆ ಕಾಣಿಸುತ್ತಿದೆ. 

ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಮೌಲಿಕ ಎಂದು ಭಾವಿಸಲಾಗುತ್ತಿದೆ ಎಂದೂ ಚೀನಾ ಹೇಳಿದೆ. ‘ದ್ವಿಪಕ್ಷೀಯ ಸಂಬಂಧದ ದೀರ್ಘಾವಧಿ ಬೆಳವಣಿಗೆಗಾಗಿ ಭಾರತವು ಚೀನಾದ ಜತೆ ಕೆಲಸ ಮಾಡಲಿದೆ ಎಂಬ ಭರವಸೆ ಇದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿನ್‌ ಹೇಳಿದ್ದಾರೆ. 

ಭಾರತದ 20 ಯೋಧರ ಹತ್ಯೆಯು ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಚೀನಾದ ವಿದೇಶಾಂಗ ಸಚಿವರಿಗೆ ಎರಡು ದಿನಗಳ ಹಿಂದೆ ಹೇಳಿದ್ದರು. ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಮಾತನ್ನು ಚೀನಾ ಆಡಿದೆ. 

ಪೂರ್ವ ಲಡಾಖ್‌ನ ಗಡಿಯಲ್ಲಿ ತಿಂಗಳಿಂದ ಇದ್ದ ಬಿಕ್ಕಟ್ಟು ಶಮನಕ್ಕೆ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮತ್ತು ಸೇನಾ ಮಾತುಕತೆಗಳು ನಡೆಯುತ್ತಿದ್ದಾಗಲೇ ಹಿಂಸಾತ್ಮಕ ಸಂಘರ್ಷ ನಡೆದಿತ್ತು. 

ಸಂಘರ್ಷದ ಬಳಿಕ, ಚೀನಾ ವಿರುದ್ಧ ಭಾರತದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಸುಂಕದ ನಿರ್ಬಂಧ ಮತ್ತು ಇತರ ನಿರ್ಬಂಧಗಳನ್ನು ಹೇರಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಇಂತಹ ಕ್ರಮಗಳ ಬಗ್ಗೆ ಸರ್ಕಾರವೂ ಚಿಂತನೆ ನಡೆಸಿದೆ ಎಂಬ ವರದಿಗಳೂ ಬಂದಿವೆ. 

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆಗಳಾದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ಗೆ ಚೀನಾ ಉಪಕರಣಗಳನ್ನು ಬಳಸದಂತೆ ಸೂಚಿಸಲಾಗಿದೆ. ರೈಲು ಮಾರ್ಗದ ಸಿಗ್ನಲ್‌ ಅಳವಡಿಕೆಗೆ ಚೀನಾದ ಕಂಪನಿಗೆ ನೀಡಿದ ಗುತ್ತಿಗೆ ರದ್ದು ಮಾಡುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. 

ಕಂಪನಿಗಳಿಗೆ ಭಯವೇ

‘ಭಾರತದಲ್ಲಿ ಚೀನಾ ವಿರೋಧಿ ಧೋರಣೆ ಕಾಣಿಸುತ್ತಿದೆ. ಪರಿಸ್ಥಿತಿ ತೀರಾ ಹದಗೆಟ್ಟರೆ ಭಾರತದಲ್ಲಿನ ಚೀನಾ ಕಂಪನಿಗಳಿಗೆ ಅಲ್ಲಿನ ಜನರು ಅಪಾಯ ತಂದೊಡ್ಡಬಹುದು. ಹೀಗಾಗಿ ಅಲ್ಲಿ ಹೂಡಿರುವ ಬಂಡವಾಳವನ್ನು ವಾಪಸ್ ತೆಗೆಯುವುದರ ಬಗ್ಗೆ ಯೋಚನೆ ಮಾಡಿ’ ಎಂದು ಚೀನಾದ ಸರ್ಕಾರಿ ಪ್ರಾಯೋಜಿತ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒಪ್ಪೊ, ತನ್ನ ಪ್ರೀಮಿಯಂ 5ಜಿ ಫೋನ್‌ನ ಆನ್‌ಲೈನ್‌ ಬಿಡುಗಡೆ ಕಾರ್ಯಕ್ರಮವನ್ನು ಭಾರತದಲ್ಲಿ ರದ್ದುಮಾಡಿದೆ.

ಓಲೈಕೆ ನೀತಿಗೆ ಕೊನೆ?

ಚೀನಾ ಜತೆಗಿನ ಸಂಬಂಧ ಸೌಹಾರ್ದದಿಂದ ಇರಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಎರಡು ವರ್ಷಗಳಿಂದ ಅನುಸರಿಸುತ್ತಿರುವ ನೀತಿಯ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಟಿಬೆಟ್‌, ತೈವಾನ್‌ ಮತ್ತು ಹಾಂಗ್‌ಕಾಂಗ್‌ ವಿಚಾರದಲ್ಲಿ ಚೀನಾಕ್ಕೆ ಸಿಟ್ಟು ಬರುವಂತಹ ನಡವಳಿಕೆಯಿಂದ ಭಾರತ ದೂರವೇ ಉಳಿದಿತ್ತು. ಕೇಂದ್ರ ಮತ್ತು ರಾಜ್ಯ ಮಟ್ಟದ ಹಿರಿಯ ಮುಖಂಡರು ಮತ್ತು ಸರ್ಕಾರದಲ್ಲಿ ಇರುವವರು ಟಿಬೆಟಿಯನ್ನರ ನಾಯಕ ದಲೈಲಾಮಾ ಜತೆಗೆ ವೇದಿಕೆ ಹಂಚಿಕೊಳ್ಳಬಾರದು ಎಂಬ ಸೂಚನೆಯನ್ನೂ ಸರ್ಕಾರ ನೀಡಿತ್ತು.

ಏರ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಇದ್ದ ‘ತೈವಾನ್’‌ ಹೆಸರನ್ನು ‘ಚೈನೀಸ್‌ ತೈಪೆ’ ಎಂದೂ ಬದಲಾಯಿಸಲಾಗಿತ್ತು. ಹಾಂಗ್‌ಕಾಂಗ್‌ನಲ್ಲಿ ಭಾರಿ ಪ್ರತಿಭಟನೆಗಳು ನಡೆದಾಗಲೂ ಭಾರತ ಮೌನವಾಗಿಯೇ ಇತ್ತು. ಆದರೆ, ಭಾರತದ ಈ ನೀತಿಗೆ ಚೀನಾ ಸಕಾರಾತ್ಮಕವಾಗಿ ಎಂದೂ ಸ್ಪಂದಿಸಲಿಲ್ಲ. ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಭಾರತದ ಸೇರ್ಪಡೆಯನ್ನು ಚೀನಾ ನಿರಂತರವಾಗಿ ವಿರೋಧಿಸಿಕೊಂಡೇ ಬಂದಿದೆ. ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಬೇಕಾಗಿ ಭಾರತದ ವಿರುದ್ಧ ಚೀನಾ ನಿಂತಿದೆ.

ಆದರೆ ಗಾಲ್ವನ್‌ ಸಂಘರ್ಷದ ಬಳಿಕ, ಕೇಂದ್ರ ಸರ್ಕಾರದ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಯೋಚಿಸುತ್ತಿದೆ ಎನ್ನಲಾಗಿದೆ.

* ‘ಕಟ್ಟಡ ನಿರ್ಮಾಣಕ್ಕೆ ಬಳಸುವಂತಹ ಎಲ್ಲಾ ವಸ್ತುಗಳನ್ನು ಭಾರತದಲ್ಲೇ ತಯಾರಿಸಿ. ಚೀನಾದಿಂದ ಆಮದನ್ನು ನಿಲ್ಲಿಸಿ’ ಎಂದು ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ‘ಕ್ರೆಡಾಯ್’ ಸೂಚನೆ ನೀಡಿದೆ

* ರೈಲ್ವೆಯ ಕಾಮಗಾರಿಗಳಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳನ್ನೇ ಬಳಸುತ್ತೇವೆ. ಆಮದನ್ನು ಸಂಪೂರ್ಣ ನಿಲ್ಲಿಸುತ್ತೇವೆ. ಟೆಂಡರ್‌ಗಳಲ್ಲಿ ಭಾಗವಹಿಸಲು ಭಾರತದ ಕಂಪನಿಗಳಿಗಷ್ಟೇ ಅವಕಾಶ ನೀಡುತ್ತೇವೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಘೋಷಿಸಿದ್ದಾರೆ

* ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ 500 ವಸ್ತುಗಳನ್ನು ಬಹಿಷ್ಕರಿಸಿ ಎಂದು ಭಾರತೀಯ ವ್ಯಾಪಾರೋದ್ಯಮಿಗಳ ಸಂಘಟನೆ ಸಿಎಐಟಿ ಹೇಳಿದೆ.  ಇವುಗಳನ್ನು ಸ್ಥಳೀಯವಾಗಿಯೇ ತಯಾರಿಸುವ ಕಂಪನಿಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಂಘಟನೆ ಹೇಳಿದೆ

ಚೀನಾ ಕಂಪನಿಗಳಿಗೆ ಭಯ

‘ಭಾರತದಲ್ಲಿ ಚೀನಾ ವಿರೋಧಿ ಧೋರಣೆ ಕಾಣಿಸುತ್ತಿದೆ. ಪರಿಸ್ಥಿತಿ ತೀರಾ ಹದಗೆಟ್ಟರೆ ಭಾರತದಲ್ಲಿನ ಚೀನಾ ಕಂಪನಿಗಳಿಗೆ ಅಲ್ಲಿನ ಜನರು ಅಪಾಯ ತಂದೊಡ್ಡಬಹುದು. ಹೀಗಾಗಿ ಅಲ್ಲಿ ಹೂಡಿರುವ ಬಂಡವಾಳವನ್ನು ವಾಪಸ್ ತೆಗೆಯುವುದರ ಬಗ್ಗೆ ಯೋಚನೆ ಮಾಡಿ’ ಎಂದು ಚೀನಾದ ಸರ್ಕಾರಿ ಪ್ರಾಯೋಜಿತ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಚೀನಾ–ಭಾರತದ ನಡುವಣ ಗಡಿ ಸಂಘರ್ಷದ ಪರಿಣಾಮ ಎರಡೂ ದೇಶಗಳ ವಾಣಿಜ್ಯ ಸಂಬಂಧದ ಮೇಲೂ ಆಗುವ ಸಾಧ್ಯತೆ ಇದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒಪ್ಪೊ, ತನ್ನ ಪ್ರೀಮಿಯಂ 5ಜಿ ಫೋನ್‌ನ ಆನ್‌ಲೈನ್‌ ಬಿಡುಗಡೆ ಕಾರ್ಯಕ್ರಮವನ್ನು ಭಾರತದಲ್ಲಿ ರದ್ದುಮಾಡಿದೆ. ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವ ಮತ್ತು ವಾಣಿಜ್ಯ ವಹಿವಾಟವನ್ನು ಮುಂದುವರಿಸುವ ಬಗ್ಗೆ ಎರಡೂ ದೇಶಗಳು ಒಲವು ವ್ಯಕ್ತಪಡಿಸಿವೆ. ಆದರೆ, ಭಾರತೀಯರ ಚೀನಾ ವಿರೋಧಿ ಧೋರಣೆ ಮತ್ತು ಚೀನಾ ಉತ್ಪನ್ನಗಳ ಬಹಿಷ್ಕಾರ ಮನಸ್ಥಿತಿ ಇನ್ನೂ ದೀರ್ಘಕಾಲ ಇರುವ ಸಾಧ್ಯತೆ ಇದೆ ಎಂದು ಗ್ಲೋಬಲ್ ಟೈಮ್ಸ್‌ ವಿವರಿಸಿದೆ.

ಪರಿಸ್ಥಿತಿ ಸರಿಯಾಗಬಹುದು ಎಂದು ಸರ್ಕಾರಗಳು ಕಾಯಬಹುದು. ಆದರೆ, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳು ಹೀಗೆ ಕಾಯುವ ಅವಶ್ಯಕತೆ ಇಲ್ಲ. ಭಾರತದಲ್ಲಿ ನೀವು ಹೂಡಿರುವ ಬಂಡವಾಳ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಚೀನಿ ನೌಕರರ ಸುರಕ್ಷತೆ ಅತ್ಯಂತ ಮುಖ್ಯ. ಹೀಗಾಗಿ ಅಲ್ಲಿಂದ ಬಂಡವಾಳ ವಾಪಸ್ ತೆಗೆಯುವುದರ ಬಗ್ಗೆ ಈಗಿನಿಂದಲೇ ಯೋಚನೆ ಮಾಡಿ. ದಕ್ಷಿಣ ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಯೋಚಿಸಬಹುದು ಎಂದು ಗ್ಲೋಬಲ್ ಟೈಮ್ಸ್‌ ತನ್ನ ವರದಿಯಲ್ಲಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು