ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತು ಮಗಳ ಕೊಲೆ: ತಂದೆಗೆ ಜೀವಾವಧಿ ಶಿಕ್ಷೆ

Last Updated 7 ಆಗಸ್ಟ್ 2019, 4:50 IST
ಅಕ್ಷರ ಗಾತ್ರ

ಡಲ್ಲಾಸ್‌ (ಪಿಟಿಐ): ದತ್ತು ಮಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದವರಾದ ಅಮೆರಿಕದ ವೆಸ್ಲಿ ಮ್ಯಾಥ್ಯೂವ್ಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2017ರ ಅಕ್ಟೋಬರ್‌ನಲ್ಲಿ ನಡೆದ ಮೂರು ವರ್ಷದ ಶೆರಿನ್‌ ಮ್ಯಾಥ್ಯೂವ್ಸ್ ಕೊಲೆಗೆ ಸಂಬಂಧಿಸಿದಂತೆ ಟೆಕ್ಸಾಸ್‌ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಕೇರಳದ ವೆಸ್ಲಿ ಮ್ಯಾಥ್ಯೂವ್ಸ್‌ ಮತ್ತು ಅವರ ಪತ್ನಿ ಶಿನಿ ಮಾಥ್ಯೂವ್ಸ್‌ ಅವರು 2016ರಲ್ಲಿ ಬಿಹಾರದ ಅನಾಥಶ್ರಾಮದಿಂದ ಶೆರಿನ್‌ ಅವರನ್ನು ದತ್ತು ಪಡೆದುಕೊಂಡಿದ್ದರು.

2017ರ ಅಕ್ಟೋಬರ್‌ 7ರಂದು ಶೆರಿನ್‌ ನಾಪತ್ತೆಯಾಗಿದ್ದಾಳೆ ಎಂದು ಮಾಥ್ಯೂವ್ಸ್‌ ಪೊಲೀಸರಿಗೆ ತಿಳಿಸಿದ್ದರು. ಆದರೆ, 15 ದಿನಗಳ ಬಳಿಕ ಶೆರಿನ್‌ ಮೃತದೇಹ ಮನೆ ಸಮೀಪದ ಚರಂಡಿಯಲ್ಲಿ ದೊರೆತಿತ್ತು.

ಹಾಲು ಕುಡಿಯುತ್ತಿರುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಶೆರಿನ್‌ ಸಾವಿಗೀಡಾದಳು ಎಂದು ಮಾಥ್ಯೂವ್ಸ್‌ ದಂಪತಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು.

‘ವೆಸ್ಲಿ ಮಾಥ್ಯೂವ್ಸ್‌ ಉತ್ತಮ ತಂದೆಯಾಗಿದ್ದರು. ಶೆರಿನ್‌ಗೆ ಉಸಿರುಗಟ್ಟಿದಾಗ ಯಾರ ನೆರವನ್ನೂ ಕೋರಿಲ್ಲ. ಅವರು ತೀವ್ರ ಆತಂಕಗೊಂಡಿದ್ದರು. ಇದೊಂದು ಆಕಸ್ಮಿಕ ಘಟನೆ’ ಎಂದು ಮಾಥ್ಯೂವ್ಸ್‌ ಪರ ವಕೀಲ ರಫೇಲ್‌ ಡೆ ಲಾ ಗರ್ಜಾ ವಾದಿಸಿದ್ದರು.

ನ್ಯಾಯಾಲಯ ತೀರ್ಪು ನೀಡಿದ ಬಳಿಕ ಪ್ರತಿಕ್ರಿಯಿಸಿದ ಗರ್ಜಾ, ‘ಇದೊಂದು ಕ್ರೂರ ಮತ್ತು ಅಪರೂಪದ ಶಿಕ್ಷೆ’ ಎಂದು ಹೇಳಿದ್ದಾರೆ.

ಶೆರಿನ್‌ ಮಲತಾಯಿ ಶಿನಿ ವಿರುದ್ಧ ಮಗುವನ್ನು ದೂರವಿರಿಸಿದ್ದಕ್ಕಾಗಿ 2017ರ ನವೆಂಬರ್‌ನಲ್ಲಿ ಆರೋಪಪಟ್ಟಿ ದಾಖಲಿಸಲಾಗಿತ್ತು. ಆದರೆ, ಆರೋಪ ಸಾಬೀತಾಗದ ಕಾರಣ ಪ್ರಕರಣವನ್ನು ವಜಾಗೊಳಿಸಲಾಗಿತ್ತು.

ಶೆರಿನ್‌ ಸಾವು ಪ್ರಕರಣ ಭಾರತ ಸರ್ಕಾರದ ಗಮನಸೆಳೆದಿತ್ತು. ಈ ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆದು ನ್ಯಾಯ ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂದಿನ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ಅವರು ಆಸಕ್ತಿ ವಹಿಸಿ ಹೌಸ್ಟನ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಗೆ ಸೂಚಿಸಿದ್ದರು.

ಶೆರಿನ್‌ ಸಾವಿನ ಬಳಿಕ ಭಾರತ ಸರ್ಕಾರ ದತ್ತು ಪಡೆಯುವ ಪ್ರಕ್ರಿಯೆಯನ್ನು ಬಿಗಿಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT