ಬುಧವಾರ, ಜನವರಿ 29, 2020
31 °C

ಹಿಗ್ಗಲಿದೆ ನಗರೀಕರಣದ ವ್ಯಾಪ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೊರಂಟೊ: ವಿಸ್ತೀರ್ಣದಲ್ಲಿ ಇಂಗ್ಲೆಂಡ್‌ಗಿಂತಲೂ ವಿಸ್ತಾರವಾದ, ಸುಮಾರು ಮೂರು ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಪ್ರಾಕೃತಿಕ ಭೂಮಿ ಜಾಗತಿಕವಾಗಿ 2030ರ ವೇಳೆಗೆ ನಗರೀಕರಣಗೊಳ್ಳಲಿದೆ.

ಜೈವಿಕ ವೈವಿಧ್ಯದ ಮೇಲೆ ನಗರ ಪ್ರದೇಶಗಳ ಬೆಳವಣಿಗೆಯ ಪರಿಣಾಮ ಕುರಿತು ನಡೆದ ಸುಮಾರು 900 ಸಮೀಕ್ಷೆಗಳ ಒಟ್ಟು ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ.

‘ನೇಚರ್ ಸಸ್ಟೇನೆಬಿಲಿಟಿ’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, 2030ರ ವೇಳೆಗೆ ಜಾಗತಿಕವಾಗಿ ಸುಮಾರು 120 ಕೋಟಿ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗಲಿದ್ದಾರೆ.

‘ನಗರ ಪ್ರದೇಶಗಳ ಪರಿಣಾಮ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಜೈವಿಕ ವೈವಿಧ್ಯದ ಮೇಲೆ ಪರಿಣಾಮ ಬೀರಲಿದೆ. ಇದನ್ನು ತಡೆಯಲು ಕ್ರಮಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ, ನಗರ ಪ್ರದೇಶಗಳ ಬೆಳವಣಿಗೆಯ ಪರಿಣಾಮ ಇದನ್ನು ನಿರ್ವಹಿಸುವ ಕಾರ್ಯಕ್ರಮಗಳ ಮೇಲೂ ಆಗಬಹುದು’ ಎಂದು ವರದಿ ಎಚ್ಚರಿಸಿದೆ.

ನಗರ ಪ್ರದೇಶಗಳ ವಿಸ್ತರಣೆಯಿಂದ ಜೈವಿಕ ವೈವಿಧ್ಯದ ಮೇಲಾಗುವ ನೇರ ಪರಿಣಾಮ, ಭೌಗೋಳಿಕವಾಗಿ ಮುಖ್ಯವಾಗಿ ಚೀನಾ, ಬ್ರೆಜಿಲ್‌, ನೈಜಿರಿಯಾದ ಕರಾವಳಿ ಭಾಗದಲ್ಲಿ ಕಾಣಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ.

ನಗರೀಕರಣದ ಪರಿಣಾಮಗಳನ್ನು ವಿಜ್ಞಾನಿಗಳು ಸರಿಯಾದ ದಿಕ್ಕಿನಲ್ಲಿ ಅಂದಾಜು ಮಾಡುತ್ತಿಲ್ಲ. ಪ್ರಕೃತಿಯ ಮೇಲೆ ಇದರ ಒಟ್ಟು ಪರಿಣಾಮ ಏನಾಗಬಹುದು ಎಂಬ ಬಗ್ಗೆ ವಿಸ್ತೃತ ಅಧ್ಯಯನ ಅಗತ್ಯವಾಗಿದೆ ಎಂದು ಲೇಖಕರು ಪ್ರತಿಪಾದಿಸಿದ್ದಾರೆ.

ಅಧ್ಯಯನಕ್ಕೆ ಒಳಪಡಿಸಿದ 922 ಸಮೀಕ್ಷೆಗಳ ಪೈಕಿ ಶೇ 34ರಷ್ಟು ಸಮೀಕ್ಷೆಗಳು ನಗರೀಕರಣದಿಂದ ಜೈವಿಕ ವೈವಿಧ್ಯದ ಮೇಲೆ ಪರೋಕ್ಷವಾಗಿ ಪರಿಣಾಮ ಆಗಲಿದೆ ಎಂದು ಅಭಿಪ್ರಾಯಪಟ್ಟಿವೆ.

ಉದಾಹರಣೆಗೆ, ವಿಶ್ವದ ನಗರಗಳ ಆಹಾರಗಳ ಅಗತ್ಯವನ್ನು ಈಡೇರಿಸಲು ಬೇಕಿರುವ ಕೃಷಿ ಭೂಮಿಯ ವಿಸ್ತೀರ್ಣ, ಈಗಿರುವ ನಗರ ಪ್ರದೇಶಗಳಿಗಿಂತಲೂ ಶೇ 36ರಷ್ಟು ಹೆಚ್ಚಿರಬೇಕಾಗಿದೆ ಎಂದು ತಿಳಿಸಿದೆ.

ಪ್ರಸ್ತುತ ಅಧ್ಯಯನದ ವಿವರಗಳು, ನಗರದ ಬೆಳವಣಿಗೆಯ ಪರಿಣಾಮಗಳನ್ನು ನಿರ್ವಹಿಸಲು ಹೊಸ ನೀತಿ ರೂಪಿಸಲು ಪ್ರೇರೇಪಣೆ ಆಗಬಹುದು ಎಂದು ವರದಿಯು ಅಭಿಪ್ರಾಯಪಟ್ಟಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು