ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್‌ ಫ್ಲಾಯ್ಡ್‌ಗೆ ಭಾವಪೂರ್ಣ ವಿದಾಯ: ಮುಂದುವರಿದ ಪ್ರತಿಭಟನೆ

Last Updated 9 ಜೂನ್ 2020, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಅಮೆರಿಕದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ ನಡೆದ ಜಾರ್ಜ್‌ ಫ್ಲಾಯ್ಡ್‌ ಅವರ ಸಾವಿನ ಘಟನೆ ಜಗತ್ತಿನಾದ್ಯಂತ, ವಿಶೇಷವಾಗಿ ವಸಾಹತುಶಾಹಿ ಇತಿಹಾಸವಿರುವ ಮತ್ತು ಗುಲಾಮರ ಮಾರಾಟ ವ್ಯವಸ್ಥೆಗೆ ಸಾಕ್ಷಿಯಾಗಿದ್ದ ರಾಷ್ಟ್ರಗಳಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸಿದೆ.

ಬ್ರಿಟನ್‌ನ ಹಲವು ನಗರಗಳಲ್ಲಿ ಕಳೆದ ವಾರಾಂತ್ಯದಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಸಾವಿರಾರು ಮಂದಿ ಮೆರವಣಿಗೆಗಳನ್ನು ನಡೆಸಿದ್ದಾರೆ. 17ನೇ ಶತಮಾನದಲ್ಲಿ ಗುಲಾಮರ ವ್ಯಾಪಾರ ನಡೆಸುತ್ತಿದ್ದ ಎಡ್ವರ್ಡ್‌ ಕಾಲ್‌ಸ್ಟನ್‌ನ, ಬ್ರಿಸ್ಟಲ್‌ನಲ್ಲಿ ಸ್ಥಾಪಿಸಿದ್ದ ಪ್ರತಿಮೆಯನ್ನು ಪ್ರತಿಭಟನಕಾರರು ನೆಲಕ್ಕೆ ಉರುಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಉದ್ಯಮಿ, 19ನೇ ಶತಮಾನದಲ್ಲಿ ಸಾಮ್ರಾಜ್ಯಶಾಹಿ ಶೋಷಣೆ ನಡೆಸಿದ ಆರೋಪ ಹೊತ್ತಿರುವ ಸೆಸಿಲ್‌ ರೋಡ್ಸ್ ಅವರ ಪ್ರತಿಮೆಯನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಿಂದ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಲಾಗಿದೆ.

ರಾಣಿ ವಿಕ್ಟೋರಿಯಾ ಕಾಲದ ಆಡಳಿತವನ್ನು ಬಿಂಬಿಸುವ, ಲಂಡನ್‌ನಲ್ಲಿರುವ ಪ್ರತಿಮೆಗಳು ಮತ್ತು ರಸ್ತೆಯ ಹೆಸರುಗಳನ್ನು ಮರು ಪರಿಶೀಲಿಸುವಂತೆ ಅಲ್ಲಿನ ಮೇಯರ್‌ ಸಾದಿಕ್‌ ಖಾನ್‌ ಅವರು ಆದೇಶಿಸಿದ್ದಾರೆ.

‘ನಮ್ಮ ರಾಷ್ಟ್ರ ಹಾಗೂ ನಗರದ ಸಂಪತ್ತಿನ ಬಹುದೊಡ್ಡ ಪಾಲು ಗುಲಾಮರ ವ್ಯಾಪಾರದಿಂದ ಬಂದಿದೆ ಎಂಬುದು ಅಪ್ರಿಯವಾದ ಸತ್ಯ. ವಿವಿಧ ಸಮುದಾಯದವರು ನಮ್ಮ ರಾಜಧಾನಿಯ ಏಳಿಗೆಗೆ ನೀಡಿರುವ ಕೊಡುಗೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ’ ಎಂದು ಖಾನ್‌ ಹೇಳಿದ್ದಾರೆ. ಬ್ರಿಟನ್‌ನ ಸಂಸತ್ತಿನಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಫ್ಲಾಯ್ಡ್‌ಗೆ ಗೌರವ ಸಲ್ಲಿಸಲಾಗಿದೆ. ಪೊಲೀಸರ ದೌರ್ಜನ್ಯದಿಂದ ಫ್ರಾನ್ಸ್‌ನಲ್ಲಿ 2016ರಲ್ಲಿ ಮೃತಪಟ್ಟಿದ್ದ ಯುವಕ ಅದಮಾ ಟ್ರವೊರೆಯ ಕುಟುಂಬದವರು ಈಗ, ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಟ್ರವೊರೆಯನ್ನು ಬಂಧಿಸಿದ್ದ ಮೂವರು ಪೊಲೀಸರು ಆತನ ಮೇಲೆ ತಮ್ಮ ಎಲ್ಲಾ ಭಾರವನ್ನು ಹೊರಿಸಿದ್ದರು. ಇದರಿಂದಾಗಿ ಠಾಣೆಗೆ ಬರುವಷ್ಟರಲ್ಲಿ ಅವರು ಪ್ರಾಣ ಬಿಟ್ಟಿದರು. ಟ್ರವೊರೆ ಕುಟುಂಬದವರು ಮತ್ತು ಸ್ನೇಹಿತರು ಎಷ್ಟೇ ಒತ್ತಾಯಿಸಿದ್ದರೂ, ಪೊಲೀಸರ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಟ್ರವೊರೆ ಕುಟುಂಬವನ್ನು ಬೆಂಬಲಿಸಿ ಕಳೆದ ವಾರ ಸಾವಿರಾರು ಮಂದಿ ಪ್ಯಾರಿಸ್‌ನಲ್ಲಿ ಮೆರವಣಿಗೆ ನಡೆಸಿದ್ದರು.

ಫ್ಲಾಯ್ಡ್‌ ಅಂತ್ಯಕ್ರಿಯೆ: ಪೊಲೀಸ್‌ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್‌ ಅವರ ಅಂತಿಮ ಸಂಸ್ಕಾರಗಳನ್ನು ಮಂಗಳವಾರ ಹ್ಯೂಸ್ಟನ್‌ನಲ್ಲಿ ನೆರವೇರಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಬಂದಿದ್ದ ಐದು ಸಾವಿರಕ್ಕೂ ಹೆಚ್ಚು ಮಂದಿ ಫ್ಲಾಯ್ಡ್‌ ಅವರ ಅಂತಿಮ ದರ್ಶನ ಪಡೆದು ಭಾವುಕ ವಿದಾಯ ಹೇಳಿದರು.

ಫ್ಲಾಯ್ಡ್‌ ಅವರ ಕಳೇಬರವನ್ನು ಶನಿವಾರ ರಾತ್ರಿ ಹ್ಯೂಸ್ಟನ್‌ಗೆ ತರಲಾಗಿತ್ತು. ಮಂಗಳವಾರ ಮಧ್ಯಾಹ್ನದಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು, ಮಾಸ್ಕ್‌ ಹಾಗೂ ಕೈಗವಸುಗಳನ್ನು ಧರಿಸಿ ಬಂದಿದ್ದ ಐದು ಸಾವಿರಕ್ಕೂ ಹೆಚ್ಚು ಮಂದಿ ಫ್ಲಾಯ್ಡ್‌ಗೆ ಅಂತಿಮ ನಮನ ಸಲ್ಲಿಸಿದರು. ಈ ನಡುವೆ, ಅಮೆರಿಕದ ವಿವಿಧ ನಗರಗಳಲ್ಲಿ ಸೋಮವಾರವೂ ಪ್ರತಿಭಟನೆಗಳು ನಡೆದಿವೆ.

ಕೋರ್ಟ್‌ಗೆ ಹಾಜರು
ಜಾರ್ಜ್‌ ಫ್ಲಾಯ್ಡ್‌ ಅವರ ಕತ್ತಿನ ಮೇಲೆ ಮಂಡಿಯೂರಿ, ಅವರ ಸಾವಿಗೆ ಕಾರಣರಾಗಿದ್ದ ಮಿನಿಯಾಪೊಲೀಸ್‌ ನಗರದ ಪೊಲೀಸ್‌ ಅಧಿಕಾರಿ ಡೆರೆಕ್‌ ಷುವಿನ್‌ (44) ಸೋಮವಾರ ವಿಡಿಯೊ ಮುಖಾಂತರ ಕೋರ್ಟ್‌ಗೆ ಹಾಜರಾಗಿದ್ದಾರೆ.

ನ್ಯಾಯಾಧೀಶರು ಅವರ ಜಾಮೀನಿನ ಭದ್ರತಾ ಮೊತ್ತವನ್ನು 10 ಲಕ್ಷ ಡಾಲರ್‌ನಿಂದ 12.5ಲಕ್ಷ ಡಾಲರ್‌ಗೆ ಹೆಚ್ಚಿಸಿದ್ದಾರೆ. ಘಟನಾ ಸಂದರ್ಭದಲ್ಲಿ ಅವರ ಜತೆಗಿದ್ದ ಇತರ ಮೂವರು ಅಧಿಕಾರಿಗಳನ್ನು ಘಟನೆ ನಡೆದ ಮರುದಿನವೇ ಪೊಲೀಸ್‌ ಇಲಾಖೆಯಿಂದ ವಜಾ ಮಾಡಲಾಗಿತ್ತು.

ಗಾಂಧಿ ಪ್ರತಿಮೆ ವಿರೂಪ
ವಾಷಿಂಗ್ಟನ್‌ನ ಭಾರತೀಯ ದೂತಾವಾಸದ ಸಮೀಪ ಸ್ಥಾಪಿಸಲಾಗಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸಹ ಕೆಲವು ದಿನಗಳ ಹಿಂದೆ ಪ್ರತಿಭಟನಕಾರರು ವಿರೂಪಗೊಳಿಸಿದ್ದರು.

ಈ ಘಟನೆಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಖಂಡಿಸಿದ್ದು, ‘ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದಿದ್ದಾರೆ. ಗಾಂಧಿ ಪ್ರತಿಮೆ ವಿರೂಪಗೊಳಿಸಿರುವುದಕ್ಕೆ ಅಮೆರಿಕದ ಹಲವು ನಾಯಕರು, ಗಣ್ಯರು ವಿಷಾದ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT