ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಲ್ಲಿ ಇನ್ನು ಅಂಕ ಆಧಾರಿತ ವೀಸಾ ಸೌಲಭ್ಯ: ಗೃಹ ಸಚಿವೆ ಪ್ರೀತಿ ಪಟೇಲ್‌

Last Updated 19 ಫೆಬ್ರುವರಿ 2020, 20:10 IST
ಅಕ್ಷರ ಗಾತ್ರ

ಲಂಡನ್‌: ಭಾರತ ಸೇರಿ ವಿಶ್ವದ ಬೇರೆ ದೇಶಗಳಲ್ಲಿನ ಪ್ರತಿಭಾವಂತ ಉದ್ಯೋಗಿಗಳನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಅಂಕಗಳ ಆಧಾರಿತ ವೀಸಾ ಸೌಲಭ್ಯವನ್ನು ಬುಧವಾರ ಘೋಷಿಸಲಾಯಿತು.

ಈ ಕುರಿತು ಘೋಷಣೆ ಮಾಡಿದ ಬಳಿಕ ಮಾತನಾಡಿದ ಗೃಹ ಸಚಿವೆ ಪ್ರೀತಿ ಪಟೇಲ್‌ , ‘ಉತ್ತಮ ಕೌಶಲ, ಕಾರ್ಯಕ್ಷಮತೆ ಹೊಂದಿರದ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವ್ಯವಸ್ಥೆ ಮುಂದಿನ ವರ್ಷ ಜನವರಿ 1ರಿಂದ ಜಾರಿಗೆ ಬರಲಿದೆ’ ಎಂದು ಹೇಳಿದರು.

ನೂತನ ವ್ಯವಸ್ಥೆ ಜಾರಿಗೆ ಬರುವ ವೇಳೆಗೆ ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬಂದಿರುತ್ತದೆ. ಹೀಗಾಗಿ ಅಂಕಗಳ ಆಧಾರಿತ ವೀಸಾ ನೀಡುವ ಸೌಲಭ್ಯಕ್ಕಿರುವ ಮಾನದಂಡಗಳು ಐರೋಪ್ಯ ಒಕ್ಕೂಟದ ದೇಶಗಳಿಗೂ ಅನ್ವಯವಾಗಲಿವೆ. ನಿರ್ದಿಷ್ಟ ಕೌಶಲ, ವಿದ್ಯಾರ್ಹತೆ, ವೇತನ, ವೃತ್ತಿಯಂತಹ ಅಂಶಗಳನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗುತ್ತದೆ.

2016ರಲ್ಲಿ ಬ್ರೆಕ್ಸಿಟ್‌ ಪರ ಲಭಿಸಿದ ಜನಾಭಿಪ್ರಾಯದ ನೇರ ಪರಿಣಾಮವೇ ಈ ನೂತನ ವೀಸಾ ಸೌಲಭ್ಯ ಎಂದು ಬ್ರಿಟನ್‌ನ ಗೃಹ ಇಲಾಖೆ ಹೇಳಿದೆ. ವಲಸೆ ಬಂದ ಉದ್ಯೋಗಿಗಳ ಮೇಲೆ ಅವಲಂಬನೆ ಕಡಿಮೆ ಮಾಡುವುದು, ವಲಸೆ ಬರುವವರ ಸಂಖ್ಯೆಗೆ ಕಡಿವಾಣ ಹಾಕುವುದು ಹಾಗೂ ಭದ್ರತೆಯನ್ನು ಹೆಚ್ಚಿಸಬೇಕು ಎಂಬ ಒತ್ತಾಸೆಯೇ ಬ್ರೆಕ್ಸಿಟ್‌ ಪರ ಜನಾಭಿಪ್ರಾಯ ವ್ಯಕ್ತವಾಗಲು ಕಾರಣ ಎಂದು ಹೇಳಲಾಗುತ್ತದೆ.

ಇಂಗ್ಲಿಷ್‌ನಲ್ಲಿ ವ್ಯವಹರಿಸುವ ಕೌಶಲ ಅಗತ್ಯ
ಅಂಕಗಳ ಆಧಾರಿತ ವೀಸಾ ಸೌಲಭ್ಯ ಪಡೆಯಬೇಕು ಎಂದರೆ, ಉದ್ಯೋಗಾ ಕಾಂಕ್ಷಿಗಳು ಇಂಗ್ಲಿಷ್‌ನಲ್ಲಿ ವ್ಯವಹರಿಸುವ ಕೌಶಲ ಹೊಂದಿರಬೇಕು. ಅನುಮೋದಿತ ಪ್ರಾಯೋಜಕರು ಉದ್ಯೋಗದ ಆಹ್ವಾನ ನೀಡಿರಬೇಕು. ಈ ಮಾನದಂಡವನ್ನು ಪೂರೈಸುವ ವಿದೇಶಿಗರಿಗೆ 50 ಅಂಕಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇನ್ನು, ಶೈಕ್ಷಣಿಕ ಅರ್ಹತೆ, ವೇತನ ಮತ್ತು ಉದ್ಯೋಗ ಆಹ್ವಾನವಿರುವ ವಲಯದಂತಹ ಅಂಶಗಳನ್ನು ಪರಿಗಣಿಸಿಯೂ ಅಂಕಗಳನ್ನು ನೀಡಲಾಗುತ್ತದೆ. ವಲಸಿಗರು ಉದ್ಯೋಗ ಪಡೆಯಬೇಕು ಎಂದರೆ ಒಟ್ಟು 70 ಅಂಕಗಳನ್ನು ಪಡೆದಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT