ಮಂಗಳವಾರ, ಅಕ್ಟೋಬರ್ 15, 2019
26 °C

ವಿಶ್ವಸಂಸ್ಥೆ: ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗಕ್ಕೆ ಖಂಡನೆ

Published:
Updated:

ವಿಶ್ವಸಂಸ್ಥೆ: ಉತ್ತರ ಕೊರಿಯಾ ಇತ್ತೀಚೆಗೆ ಜಲಾಂತರ್ಗಾಮಿ ನೌಕೆಯಿಂದ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರುವ ಕುರಿತು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಮಂಗಳವಾರ ಚರ್ಚೆ ನಡೆಯಿತು.  

ಜನಸಮೂಹಕ್ಕೆ ಮಾರಕವಾಗಿರುವ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಅಮೆರಿಕದೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸುವಂತೆ ಉತ್ತರ ಕೊರಿಯಾವನ್ನು ಯುರೋಪಿಯನ್‌ ಒಕ್ಕೂಟದಲ್ಲಿರುವ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಒತ್ತಾಯಿಸಿದವು.

‘ಕೊರಿಯಾ ಪರ್ಯಾಯ ದ್ವೀಪ ಮತ್ತು ಇತರ ಪ್ರದೇಶಗಳಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಬೇರೆ ದಾರಿಯಿಲ್ಲ’ ಎಂದು ಸಭೆಯ ಬಳಿಕ ಜಂಟಿ ಹೇಳಿಕೆಯಲ್ಲಿ ಸದಸ್ಯ ರಾಷ್ಟ್ರಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಅಕ್ಟೋಬರ್‌ 3ರಂದು ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗಿಸಿರುವುದನ್ನು ಖಂಡಿಸಿರುವ ಯುರೋಪಿಯನ್‌ ಒಕ್ಕೂಟ, ಇದು ವಿಶ್ವಸಂಸ್ಥೆ ಭದ್ರತಾ ಸಮಿತಿ ನಿರ್ಣಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದೆ. 

ಫ್ರಾನ್ಸ್, ಜರ್ಮನಿ ಮತ್ತು ಬ್ರಿಟನ್‌ ಈ ಸಭೆ ಆಯೋಜಿಸಿದ್ದವು. ಸಮಿತಿ ಸದಸ್ಯ ರಾಷ್ಟ್ರಗಳಾದ ಬೆಲ್ಜಿಯಂ ಮತ್ತು ಪೋಲೆಂಡ್ ಈ ಹೇಳಿಕೆಯನ್ನು ಬೆಂಬಲಿಸಿವೆ. 

Post Comments (+)