ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ | ಬ್ರಹ್ಮಾಂಡ ಭ್ರಷ್ಟಾಚಾರ ಚರ್ಚೆಗೆ ಅಧಿವೇಶನ ‌ಕರೆಯಲಿ: ಡಿಕೆ ಶಿವಕುಮಾರ್

ಕಲಬುರ್ಗಿಯಲ್ಲಿ ‌‌ಪತ್ರಿಕಾಗೋಷ್ಠಿ
Last Updated 4 ಆಗಸ್ಟ್ 2020, 10:01 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಬಿಜೆಪಿ ಸರ್ಕಾರವು ಕೊರೊನಾ ಸಂದರ್ಭದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದು, ಈ ಬಗ್ಗೆ ಚರ್ಚಿಸಲು ಕೂಡಲೇ ಅಧಿವೇಶನ ಕರೆಯಲಿ ಎಂದು ಕೆಪಿಸಿಸಿ ಅಧ್ಯಕ್ಷ ‌ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಭೇಟಿ ‌ನೀಡಿದ ಅವರು ಪಕ್ಷದ ಕಚೇರಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ಬಂದ ನಂತರ ಹಣ ಲೂಟಿಯಾಗುತ್ತಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ.‌ ಪ್ರತಿಯೊಬ್ಬ ಸಚಿವ ತನಗೆಷ್ಟು ಸಿಗುತ್ತದೆ ಅಂತ ಯೋಚಿಸುತ್ತಿದ್ದಾರೆ. ಹಾಗಾಗಿ, ನಾವು ಲೆಕ್ಕ ಕೇಳುತ್ತಿದ್ದೇವೆ.

ಸರ್ಕಾರ ಹೇಳಿದಂತೆ ನಾವೂ ಸಹಕಾರ ನೀಡಿದೆವು. ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದೆವು. ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಸೇರಿ ಕೋವಿಡ್ ನಿರ್ವಹಣೆಗೆ ಸಲಹೆ ನೀಡಿದ್ದೇವೆ. ದೇಶದಲ್ಲಿಯೇ ರಾಜ್ಯದಲ್ಲಿ ಉತ್ತಮ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳಿವೆ. ಅವರನ್ನು ಕರೆದು ಮಾತನಾಡಲಿಲ್ಲ. ಅವರೆಲ್ಲ ಬಂದರೆ ತಮಗೆ ಸಿಗಬಹುದಾದದ್ದು ಸಿಗಲ್ಲ ಎಂದು ಭಾವಿಸಿದರು.

ಸರ್ಕಾರದವರು ತಾವೇ 10,500 ಬೆಡ್ ಆಸ್ಪತ್ರೆ ಮಾಡಿದರು. ಮೊದಲು ದಿನವೊಂದಕ್ಕೆ ₹ 800 ರಂತೆ ಬಾಡಿಗೆಗೆ ಆಧಾರದ ಮೇಲೆ ಬುಕ್ ಮಾಡಿದರು. ಅಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಂದ‌ನಂತರ ಖರೀದಿ ಮಾಡುವುದಾಗಿ ಹೇಳಿದರು. ಸೋಂಕಿತರು ಬಳಸಿದ ನಂತರ ಬೆಡ್ ಗಳನ್ನು ಹಾಸ್ಟೆಲ್ ಗಳಿಗೆ ಬಳಸುವುದಾಗಿ ಹೇಳಿದರು. ಯಾವಾಗ ನಾವು ವಿರೋಧ ಮಾಡಿದೆವು, ಹಾಗೆ ಬಳಸಲ್ಲ ಸುಡುವುದಾಗಿ ಹೇಳಿದರು ಎಂದರು.

₹ 4000 ಕೋಟಿಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿರುವುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್. ಕೆ.ಪಾಟೀಲ, ನಾನು ಲೆಕ್ಕ ಕೇಳಿದ್ದೇವೆ.

ತಮಿಳುನಾಡಲ್ಲಿ‌ ₹ 5.18 ಲಕ್ಷದ ಕಿಟ್ ಗೆ ರಾಜ್ಯ ಸರ್ಕಾರ ₹ 18 ಲಕ್ಷಕ್ಕೆ ತೆತ್ತು ಖರೀದಿ ಮಾಡಲಾಗಿದೆ. ₹ 100ರ ಸ್ಯಾನಿಟೈಜರ್‌ ₹ 600 ತೆತ್ತು ಖರೀದಿ ಮಾಡಿದ್ದೀರಿ. ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನ್, ಮಾಸ್ಕ್, ಆಕ್ಸಿಜನ್ ಹೀಗೆ ಎಲ್ಲದರಲ್ಲೂ ಮೂರು ನಾಲ್ಕು ಪಟ್ಟು ಜಾಸ್ತಿ ದುಡ್ಡು ಕೊಟ್ಟು ಖರೀದಿ ಮಾಡಿ ಅವ್ಯವಹಾರದಲ್ಲಿ ತೊಡಗಿದರೆ ನಾವು ಸರ್ಕಾರಕ್ಕೆ ಸಹಕಾರ‌ ನೀಡಬೇಕಾ ಎಂದು ಪ್ರಶ್ನಿಸಿದರು.

ಮೋದಿಯವರು ನಮ್ಮ ಸರ್ಕಾರವನ್ನು ಹತ್ತು ಪರ್ಸೆಂಟ್ ಸರ್ಕಾರ ಎಂದಿದ್ದರು. ಈಗ ಎಷ್ಟಿದೆ ಗೊತ್ತಾ? ಎರಡು ನೂರು, ಮುನ್ನೂರು ಪರ್ಸೆಂಟ್ ನಡೀತಿದೆ. ನಮ್ಮ ಸರ್ಕಾರದಲ್ಲಿ ಅವ್ಯವಹಾರ ನಡೆದಿದ್ದರೆ ತಪ್ಪು ಮಾಡಿದ್ದರೆ ನಮಗೆ ಶಿಕ್ಷಿಸಿ ಎಂದು ಸವಾಲು ಹಾಕಿದರು.

ಈ ಭಾಗಕ್ಕೆ ಬೆಡ್ ಕೊರತೆ ಇದೆ ಅಂತ ಪ್ರಿಯಾಂಕ್ ಖರ್ಗೆ ಸ್ವಂತ ದುಡ್ಡಲ್ಲಿ 650 ಬೆಡ್ ಖರೀದಿ ಮಾಡಿ ರಾಯಚೂರು ಹಾಗೂ ಕಲಬುರಗಿಗೆ ಕಳಿಸಿದರೆ ಕಾಂಗ್ರೆಸ್ ನವರ ಬೆಡ್ ಅದು ಬೇಡ ಅಂದ್ರಂತೆ.. ಇದರಲ್ಲೂ ರಾಜಕೀಯ ಬೇಕಾ? ಕೊಟ್ಟ ಬೆಡ್ ಬೇಡ ಎನ್ನುವ ಕೆಲ ಅಧಿಕಾರಿಗಳಿಗೆ ವಿದ್ಯೆಯೂ ಇಲ್ಲ ಬುದ್ದಿಯೂ ಇಲ್ಲ. ರಾಯಚೂರು ಡಿ.ಸಿ. ತಗೊಂಡ್ರಂತೆ ಅವರಿಗೆ ವಿವೇಚನೆ ಇದೆ. ತರಕಾರಿ ಹೂ‌ ಹಣ್ಣು ರೈತರಿಂದ ಇದೇ ಕಾಂಗ್ರೆಸ್ ಖರೀದಿ ಮಾಡುವಾಗ ಸುಮ್ಮನಿದ್ರಿ ಈಗ ಬೆಡ್ ಖರೀದಿ‌ ಮಾಡಿ ಉಚಿತ ಕೊಟ್ಟರೆ ಇದನ್ನ ಬೇಡ ಅನ್ನುವುದಾ ಎಂದರು.

ತೆರಿಗೆ ಮನ್ನಾ ಮಾಡಿ: ವಾಣಿಜ್ಯ ಆಸ್ತಿ, ಗೃಹ ಆಸ್ತಿ ಸೇರಿದಂತೆ ವಾಹನ‌ ತೆರಿಗೆಯನ್ನು ಒಂದು ವರ್ಷದವರೆಗೆ ತೆಗೆದುಕೊಳ್ಳಬಾರದು. ದುಡಿಮೆ‌ ಇಲ್ಲ ಅವರೆಲ್ಲ ಎಲ್ಲಿಂದ ತರಬೇಕು ಎಂದು ಒತ್ತಾಯಿಸಿದರು.

ಸೋಂಕಿತರು ತೀರಿದಾಗ ಅವಮಾನಕರವಾಗಿ ಹೂಳಲಾಯ್ತು. ನಿಮ್ಮ ತಂದೆ ತಾಯಿ ಅಥವಾ ನಿಮ್ಮ‌ ಸಂಬಂಧಿಕರಾಗಿದ್ರೆ ಹೀಗೆ ಮಾಡ್ತಾ ಇದ್ರಾ? ಮೂವತ್ತಕ್ಕು ಅಧಿಕ ಪೌರಕಾರ್ಮಿಕರು ಸೋಂಕಿನಿಂದ ತೀರಿ ಹೋಗಿದ್ದಾರೆ. ಆ ನಿರ್ಗತಿಕರಿಗೆ ಯಾರು‌ದಿಕ್ಕು ಎಂದರು.

ರಾಮ ಮಂದಿರ ನಿರ್ಮಾಣ ಯಾರ ಸ್ವತ್ತಿಲ್ಲ. ಅದು ದೇಶದ ಜನರ ಹೃದಯ ಶ್ರೀಮಂತಿಕೆಯ ಪ್ರತೀಕ. ನಮಗೇನು ಆಹ್ವಾನ ಮಾಡುವುದು ಬೇಕಿಲ್ಲ. ನಾನು ಟಿವಿಯಲ್ಲೇ ನೋಡಿ ಸಂತಸ ಪಡುತ್ತೇವೆ. ಕಾಂಗ್ರೆಸ್ ನ‌ ಎಲ್ಲರ ಹೃದಯದಲ್ಲಿಯೂ ರಾಮನಿದ್ದಾನೆ ಎಂದು ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು ಎನ್ನುವ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ, ನಮ್ಮ ನಾಯಕರ ಬಗ್ಗೆ ಅವರಿಗೆ ಕಾಳಜಿ‌ ಇದೆ ಥ್ಯಾಂಕ್ಸ್ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ಅಜಯ್ ಸಿಂಗ್, ವಿಧಾನಪರಿಷತ್ ಸದಸ್ಯ ಶರಣಪ್ಪ ಮಟ್ಟೂರ, ಮುಖಂಡರಾದ ಡಾ.ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT