ಶನಿವಾರ, ಜುಲೈ 31, 2021
21 °C
ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಚಿಕಿತ್ಸೆ ನಿರಾಕರಣೆ

ರೋಷಾವೇಶ ಬಿಟ್ಟು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಸರ್ಕಾರಕ್ಕೆ ಎಚ್‌ಡಿಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾದಂಥ ತುರ್ತು ಪರಿಸ್ಥಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಮೇಲೆ ರಾಜ್ಯ ಸರ್ಕಾರ ರೋಷಾವೇಶ ತೋರುವುದನ್ನು ಬಿಟ್ಟು ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು, ಅವರ ಸೇವೆ ಪಡೆಯುವ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಯಾವುದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವುದು ತಪ್ಪು. ಆದರೆ, ಅದೇ ಕಾರಣಕ್ಕೆ ಸರ್ಕಾರ ವೈದ್ಯಕೀಯ ಕಾಲೇಜುಗಳ ಪರವಾನಗಿ ರದ್ದು ಮಾಡುವ ಬೆದರಿಕೆ ಹಾಕುವುದು ಸರಿಯಲ್ಲ. ಆರೋಗ್ಯದ ಈ ತುರ್ತು ಪರಿಸ್ಥಿತಿಯಲ್ಲಿ ಅದರಿಂದ ಲಾಭವೂ ಇಲ್ಲ. ಅಷ್ಟಕ್ಕೂ ವೈದ್ಯಕೀಯ ಕಾಲೇಜುಗಳ ಪರವಾನಗಿ ರದ್ದು ಮಾಡುವ ಅಧಿಕಾರ ಇರುವುದು ಎಂಸಿಐಗೆ ಹೊರತು ಸರ್ಕಾರಕಲ್ಲ ಎನ್ನುವುದೂ ನೆನಪಿರಲಿ’ ಎಂದಿದ್ದಾರೆ.

‘ಖಾಸಗಿ ವೈದ್ಯಕೀಯ ಕಾಲೇಜುಗಳ ಅಗತ್ಯಗಳನ್ನು ಪೂರೈಸುವತ್ತ ಸರ್ಕಾರ ಗಮನ ಹರಿಸಬೇಕು. ಆ ಮೂಲಕ, ಕೊರೊನಾ ವೈರಸ್ ವಿರುದ್ಧ ಸಾಂಘಿಕ ಹೋರಾಟ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಕೊರೊನಾ ಸೋಂಕಿತರ ಮನೆಗಳ ಎದುರು ಸ್ಥಳೀಯ ಆಡಳಿತ ಹಾಕುತ್ತಿರುವ ಎಚ್ಚರಿಕೆ ಫಲಕ ನವಯುಗದ ಸಾಮಾಜಿಕ ತಾರಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತಿದೆ. ಕುಟುಂಬಗಳನ್ನು ಸಮಾಜ ತಿರಸ್ಕಾರದಿಂದ ನೋಡುವಂತೆ ಮಾಡುತ್ತಿದೆ. ಸೋಂಕಿನ ನಂತರವೂ ವ್ಯಕ್ತಿ, ಕುಟುಂಬ ಗೌರವಯುತವಾಗಿ ಬದುಕಬೇಕು. ಹೀಗಾಗಿ, ಫಲಕ ಹಾಕುವ ಪರಿಪಾಠವನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು‌’ ಎಂದೂ ಅವರು ಹೇಳಿದ್ದಾರೆ.

‘ಮನೆಗಳ ಎದುರು ಫಲಕ ಹಾಕಿ ಅಸ್ಪೃಶ್ಯತೆ ಸೃಷ್ಟಿಸುವ ಬದಲು ಸೋಂಕಿತರ ಮನೆಗೆ ಆರೋಗ್ಯ ಕಾರ್ಯಕರ್ತರನ್ನು ಕಳುಹಿಸಿ ಧೈರ್ಯ, ಜಾಗೃತಿ, ಅರಿವು ಮೂಡಿಸಬೇಕು‌. ಮನೆಯಿಂದ ಹೊರಬಾರದಂತೆ ಅವರ ಜವಾಬ್ದಾರಿ ತಿಳಿಸಿಕೊಡಬೇಕು. ಅದು ಬಿಟ್ಟು ಇಂಥ ಅಪಮಾನಿಸುವ ಪರಿಪಾಠ ಬೇಡ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗಮನಹರಿಸಲಿ’ ಎಂದೂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು