ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 | ಬಕ್ರೀದ್‌ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ

ಮಸೀದಿಗಳಲ್ಲಿ ಗರಿಷ್ಠ 50 ಜನರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ
Last Updated 25 ಜುಲೈ 2020, 10:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜುಲೈ 31ರಂದು ಹಾಗೂ ಇತರ ಜಿಲ್ಲೆಗಳಲ್ಲಿ ಆಗಸ್ಟ್‌ 1ರಂದು ಬಕ್ರೀದ್‌ ಹಬ್ಬದ ಆಚರಣೆ ನಡೆಯಲಿದ್ದು, ಅಂದು ಈದ್ಗಾ ಮೈದಾನಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ.

‘ಕೋವಿಡ್‌ 19 ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಆದೇಶದಲ್ಲಿ ತಿಳಿಸಿದ್ದಾರೆ.

ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಹುದು. ಒಂದೊಮ್ಮೆ ಹೆಚ್ಚು ಜನರು ಮಸೀದಿಗೆ ಬಂದರೆ, ಎರಡು ಅಥವಾ ಮೂರ ತಂಡಗಳಾಗಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದಾದರೂ ಮಸೀದಿಯ ಆಡಳಿತ ಮಂಡಳಿ ಶುಕ್ರವಾರದ ಜುಮಾ ಪ್ರಾರ್ಥನೆ ಸಹಿತ ದಿನದ ಐದೂ ಹೊತ್ತಿನ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಿದ್ದರೆ, ಅಂಥ ಮಸೀದಿಗಳು ಬಕ್ರೀದ್‌ ಪ್ರಾರ್ಥನೆ ಸಂದರ್ಭದಲ್ಲೂ ಮುಂದುವರಿಸಬೇಕು. ಮಸೀದಿ ಹೊರತುಪಡಿಸಿ ಇತರ ಯಾವುದೇ ಸ್ಥಳಗಳಲ್ಲಿ (ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್‌ ಮತ್ತಿತರ ಕಡೆ) ಬಕ್ರೀದ್‌ ಸಾಮಾಹಿಕ ಪ್ರಾರ್ಥನೆ ಆಯೋಜಿಸಬಾರದು. ಈ ಆದೇಶವನ್ನು ಎಲ್ಲ ವಕ್ಫ್ ಮಂಡಳಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪಾಲಿಸಬೇಕಾದ ಷರತ್ತುಗಳು: ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. 60 ವರ್ಷ ದಾಟಿದವರು ಮತ್ತು 10 ವರ್ಷ ಒಳಗಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು. ಪ್ರಾರ್ಥನೆ ಸಲ್ಲಿಸುವ ವೇಳೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು.

ಮಸೀದಿ ಪ್ರವೇಶಿಸುವ ಮೊದಲು ದೇಹ ಉಷ್ಣತೆ ತಪಾಸಣೆ ನಡೆಸಬೇಕು. ಕೈಗಳನ್ನು ಸಾಬೂನು ಅಥವಾ ಸಾನಿಟೈಸರ್‌ನಿಂದ ಸ್ವಚ್ಛಗೊಳಿಸಬೇಕು. ಮಸೀದಿಗಳಲ್ಲಿರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟಬಾರು. ಹಸ್ತ ಲಾಘವ ಮತ್ತು ಆಲಿಂಗನಕ್ಕೆ ಅವಕಾಶ ಇಲ್ಲ. ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಬಂದರೆ ಅವರ ಬಗ್ಗೆ ನಿಗಾ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT