ಭಾನುವಾರ, ಜೂನ್ 13, 2021
25 °C
ವಲಸೆಯಿಂದ ಕೋವಿಡ್‌ ವ್ಯಾಪಕ

ಕೋವಿಡ್ | ಜಿಲ್ಲೆಗಳತ್ತ ವಲಸೆ; ಬೆಂಗಳೂರಿನಿಂದ 30 ಸಾವಿರಕ್ಕೂ ಹೆಚ್ಚು ಜನ ನಿರ್ಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ತೆರಳಲು ಹೊರಟ್ಟಿದ್ದ ಜನ–ಪ್ರಜಾವಾಣಿ ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಜುಲೈ 14ರಂದು ಬೆಂಗಳೂರಿನಲ್ಲಿ ಒಂದು ವಾರ ಕಾಲ ಲಾಕ್‌ಡೌನ್‌ ಜಾರಿಗೊಳಿಸುವುದಕ್ಕೆ 48 ಗಂಟೆ ಮುನ್ನ ಸಾವಿರಾರು ಮಂದಿ ಈ ನಗರದಿಂದ ಬೇರೆ ಜಿಲ್ಲೆಗಳಿಗೆ ಹಾಗೂ ಬೇರೆ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದರು. ಈ ಜನರೇ ಬೇರೆ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳು ದಿಢೀರ್‌ ಜಾಸ್ತಿ ಆಗಲು ಕಾರಣರಾಗಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ನಗರದಿಂದ ತಮ್ಮ ಸ್ವಂತ ಜಿಲ್ಲೆಗಳಿಗೆ ಪ್ರಯಾಣಿಸಿದ್ದ ಸುಮಾರು 30 ಸಾವಿರ ಮಂದಿಯಲ್ಲಿ ಹೆಚ್ಚಿನವರು ಕಾರ್ಮಿಕರು. ಅವರ ನಿರ್ಗಮನದ ಬಳಿಕ ಏನೆಲ್ಲ ಆದವು ಎಂಬುದನ್ನು ತದನಂತರದ ಅಂಕಿ ಅಂಶಗಳು ವಿವರಿಸುತ್ತಿವೆ.

ಜೂನ್‌ 21ರ ಬಳಿಕ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ದಿಢೀರ್‌ ಏರಿಕೆ ಕಾಣಲು ಆರಂಭವಾಯಿತು. ಅದಕ್ಕೆ ಮುನ್ನ ಜೂನ್‌ 1ರಿಂದ ಜೂನ್‌ 20ರವರೆಗೆ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಸರಾಸರಿ ಶೇ 14ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ಕಂಡು ಬಂದಿದ್ದವು. ಜೂನ್‌ 21ರ ನಂತರ ಸರಾಸರಿ ಶೇ 44ರಷ್ಟು ಪ್ರಕರಣಗಳು ನಗರದಲ್ಲಿ ಪತ್ತೆಯಾಗಿವೆ. ನಗರದಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಪ್ರಕರಣ ( ಶೇ 67ರಷ್ಟು ) ಪತ್ತೆಯಾಗಿದ್ದು ಜೂನ್‌ 29ರಂದು. ನಗರದಲ್ಲಿ ನೆಲೆಸಿದ್ದ ಅನೇಕರು ನಿರ್ಗಮಿಸಿದ ಬಳಿಕ ಒಟ್ಟು ಪ್ರಕರಣಗಳಲ್ಲಿ ನಗರದ ಪಾಲು ಇಳಿಕೆಯಾಗಿದೆ. ಜುಲೈ 27ರಂದು ಇದು ಅತ್ಯಂತ ಕಡಿಮೆ ಪ್ರಮಾಣಕ್ಕೆ (ಶೇ 28ಕ್ಕೆ) ಇಳಿಕೆ ಕಂಡಿತ್ತು. ಇದೇ ವೇಳೆ, ಬೇರೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗುವ ಪ್ರಮಾಣವು ವಾರದ ಹಿಂದಿನ ಪ್ರಕರಣಗಳ ಪ್ರಮಾಣಕ್ಕೆ ಹೋಲಿಸಿದರೆ ಮೂರಂಕಿಗಳಷ್ಟು ಹೆಚ್ಚಳ ಕಂಡಿತ್ತು. ಉದಾಹರಣೆಗೆ ಅದೇ ದಿನ ಕಲಬುರ್ಗಿ ಜಿಲ್ಲೆಯಲ್ಲಿ 631 ಪ್ರಕರಣಗಳು (ಶೇ 408ರಷ್ಟು ಹೆಚ್ಚಳ), ಉಡುಪಿ ಜಿಲ್ಲೆಯಲ್ಲಿ 225 ಪ್ರಕರಣಗಳು ( ಶೇ 129ರಷ್ಟು ಹೆಚ್ಚಳ), ಬಳ್ಳಾರಿ ಜಿಲ್ಲೆಯಲ್ಲಿ 840 ಪ್ರಕರಣಗಳು (ಶೇ 259ರಷ್ಟು ಹೆಚ್ಚಳ), ಬೆಳಗಾವಿ ಜಿಲ್ಲೆಯಲ್ಲಿ 155 ಪ್ರಕರಣಗಳು (ಶೇ 158ರಷ್ಟು ಹೆಚ್ಚಳ) ಪತ್ತೆಯಾದವು.

‘ಮಹಾರಾಷ್ಟ್ರದಲ್ಲಿ ಆದಂತೆಯೇ ನಮ್ಮಲ್ಲೂ ಸೋಂಕು ಹೊರಮುಖವಾಗಿ ಹಬ್ಬುತ್ತಾ ಎರಡನೇ ಹಂತದ ನಗರಗಳಿಗೆ ವ್ಯಾಪಿಸುತ್ತಿದೆ. ಅಲ್ಲೂ ಮುಂಬೈನ ನಂತರ ಪುಣೆ, ನಾಗಪುರದಂತಹ ನಗರಗಳಿಗೆ ಸೋಂಕು ಹಬ್ಬಿತ್ತು’ ಎಂದು ಸೋಂಕುವಿಜ್ಞಾನಿ ಹಾಗೂ ಹಿರಿಯ ತಜ್ಞರ ಸಮಿತಿ ಸದಸ್ಯ ಡಾ.ಗಿರಿಧರ ಬಾಬು ವಿವರಿಸಿದರು. ಜನರು ಬೆಂಗಳೂರಿನಿಂದ ಅನ್ಯ ಜಿಲ್ಲೆಗಳಿಗೆ ತೆರಳಿದರೆ ಅಲ್ಲೂ ಸೋಂಕು ಹೆಚ್ಚಳವಾಗಲಿದೆ ಎಂದು ಅವರು ಲಾಕ್‌ಡೌನ್‌ಗಿಂತ ಮೊದಲೇ ಸೂಚನೆ ನೀಡಿದ್ದರು.

ಜಿಲ್ಲೆಗಳ ಪುರಾವೆಗಳು:

ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಶರತ್‌, ‘ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಬೆಂಗಳೂರಿನಿಂದ ಬಂದವರೇ ಕಾರಣ’ ಎಂದು ಖಚಿತವಾಗಿ ಹೇಳಲಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಇದನ್ನು ಒಪ್ಪುತ್ತಾರೆ. ‘ಜಿಲ್ಲೆಯಲ್ಲಿ ಜುಲೈ 14ರ ಬಳಿಕ 3,657 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ನಿತ್ಯ 2 ಸಾವಿರ ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜುಲೈ 14ರವರೆಗೆ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಒಟ್ಟು ಪ್ರಕರಣಗಳ ಸಂಖ್ಯೆ 2,353’ ಎಂದು ಅವರು ವಿವರಿಸಿದರು. 

‘ಈ ಹೆಚ್ಚಳಕ್ಕೆ ಪ್ರಯಾಣಿಕರೇ ಮೂಲಕಾರಣ. ನಮ್ಮ ಜಿಲ್ಲೆಗೆ ನಿತ್ಯ ಒಂದಲ್ಲ ಒಂದು ಚಾರ್ಟರ್ಡ್‌ ವಿಮಾನ ಅಥವಾ ವಂದೇ ಭಾರತ್‌ ವಿಮಾನ ಬಂದಿಳಿಯುತ್ತಿದ್ದು, ಅವರಲ್ಲಿ ಕನಿಷ್ಠ ಪಕ್ಷ ಶೇ 10ರಷ್ಟು ಪ್ರಯಾಣಿಕರಲ್ಲಾದರೂ ಸೋಂಕು ಕಂಡುಬರುತ್ತಿದೆ. ರೋಗ ಲಕ್ಷಣವನ್ನು ಹೊಂದಿಲ್ಲದ ಸೋಂಕಿತರು ಜಾರಿಕೊಳ್ಳುತ್ತಾರೆ. ಇಲ್ಲಿ ವೈದ್ಯಕೀಯ ಸೌಲಭ್ಯ ಚೆನ್ನಾಗಿದೆ. ಹಾಗಾಗಿ ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಿಂದ ಜಿಲ್ಲೆಗೆ ಜನ ಬರುತ್ತಿದ್ದಾರೆ’ ಎಂದರು.

‘ಇದಕ್ಕೆ ಪ್ರಯಾಣಿಕರನ್ನು ಮಾತ್ರ ದೂರಲಾಗದು. ಈ ವೈರಸ್‌ ಹಿಂದಿರುವ ಎಲ್ಲ ರಹಸ್ಯಗಳನ್ನು ಭೇದಿಸಲು ವಿಜ್ಞಾನಕ್ಕೂ ಇನ್ನೂ ಸಾಧ್ಯವಾಗಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಸೋಂಕು ಇಳಿಕೆ

ಈ ಹಿಂದೆ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿದ್ದ ಬೆಂಗಳೂರಿನಲ್ಲಿ ಈಗ ಸೋಂಕಿನ ಪ್ರಮಾಣ ಕಡಿಮೆಯಾಗಿ, ವೈದ್ಯಕೀಯ ಮೂಲಸೌಕರ್ಯ ಕಡಿಮೆ ಇರುವ ಬೇರೆ ಜಿಲ್ಲೆಗಳಲ್ಲಿ ಹೆಚ್ಚಳವಾಗುತ್ತಿರುವುದು ತಜ್ಞರ ಸಮಿತಿಯ ಕಳವಳಕ್ಕೂ ಕಾರಣವಾಗಿದೆ.

‘ಸೋಂಕಿತರ ಸಂಖ್ಯೆಯ ಬದಲು ನಾವು ಬೇರೆ ಜಿಲ್ಲೆಗಳಲ್ಲಿ ಪ್ರಕರಣಗಳ ಹೆಚ್ಚಳದಿಂದಾಗಿ ಉಂಟಾಗುವ ಸಾವಿನ ಪ್ರಮಾಣದ ಕುರಿತು ಹೆಚ್ಚು ಗಮನವಹಿಸಬೇಕಿದೆ’ ಎಂದು ಡಾ.ಬಾಬು ಹೇಳಿದರು.

ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ ರೋಗಿಗಳ ಸಾವಿನ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿರುವುದನ್ನು ಬೊಟ್ಟುಮಾಡಿದ ಅವರು, ‘ಈವರೆಗೆ ವರದಿಯಾಗಿರುವ ಅಂಕಿಅಂಶಗಳ ಪ್ರಕಾರ ಹಾವೇರಿ ಜಿಲ್ಲೆಯ ಪರಿಸ್ಥಿತಿ ಕಳವಳಕಾರಿ. ಅಲ್ಲಿ ನಿತ್ಯ ಸರಾಸರಿ ಏಳು ರೋಗಿಗಳು ಸಾವಿಗೀಡಾಗುತ್ತಿದ್ದಾರೆ. ಜುಲೈ 11ರಂದು ಅಲ್ಲಿ ನಾಲ್ವರು ರೋಗಿಗಳು ಸತ್ತಿದ್ದರು. ಜುಲೈ 18ರಂದು ಒಂಬತ್ತು ಮಂದಿ ಕೊನೆಯುಸಿರೆಳೆದಿದ್ದರು. ಜುಲೈ 25ರಂದು ಸಾವಿನ ಸಂಖ್ಯೆ 25ಕ್ಕೆ ಏರಿತ್ತು’ ಎಂದು ಅವರು ವಿವರಿಸಿದರು.  

ಕೊಪ್ಪಳ, ಚಿಕ್ಕಮಗಳೂರು ಹಾಗೂ ಕೋಲಾರ ಜಿಲ್ಲೆಗಳಲ್ಲೂ 10 ದಿನಗಳಿಂದ ಕೋವಿಡ್ ರೋಗಿಗಳ ಸಾವಿನ ಪ್ರಮಾಣ ತೀರ ಹೆಚ್ಚಳ ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು