ಬುಧವಾರ, ಜುಲೈ 28, 2021
29 °C

ಟ್ವಿಟರ್‌ನಲ್ಲಿ ಏಕಾಏಕಿ ಟ್ರೆಂಡ್‌ ಆದ ಡ್ರೋನ್‌ ಪ್ರತಾಪ್‌: ಸ್ವಾರಸ್ಯಕರ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಡ್ರೋನ್‌ ವಿಜ್ಞಾನಿ’ ಎಂದು ಪ್ರಚಾರ ಪಡೆದಿರುವ ಮಂಡ್ಯದ ಎಂ.ಎನ್‌.ಪ್ರತಾಪ್‌ (ಡ್ರೋನ್‌ ಪ್ರತಾಪ್‌) ಅವರ ಸಾಧನೆಗಳ ವಿಶ್ವಾಸಾರ್ಹತೆ ಬಗ್ಗೆಯೇ ಸಂದೇಹಗಳು ವ್ಯಕ್ತವಾಗಿರುವ ನಡುವೆಯೇ ಅವರು ಟ್ವಿಟರ್‌ನಲ್ಲಿ ಗುರುವಾರ (ಜುಲೈ–17) ಮುಂಜಾನೆ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದರು.

ಪ್ರತಾಪ್‌ ಅಭಿವೃದ್ಧಿಪಡಿಸಿದರೆನ್ನಲಾದ ಡ್ರೋನ್‌ಗಳ‌ ಕುರಿತಂತೆ, ವಿಜ್ಞಾನ ಸಮಾವೇಶಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಬಗ್ಗೆ ವೆಬ್‌ಸೈಟ್‌ವೊಂದು (opindia) ಇತ್ತೀಚೆಗೆ ಫ್ಯಾಕ್ಟ್‌ ಚೆಕ್‌ ಪ್ರಕಟಿಸಿತ್ತು. ಡ್ರೋನ್‌ ಪ್ರತಾಪ್‌ ಹೇಳುತ್ತಿರುವಂತೆ ಅವರು ಸಾಧನೆಗಳನ್ನು ಮಾಡಿಲ್ಲ ಎಂದು ಅದು ವರದಿ ಮಾಡಿತ್ತು. ಈ ವರದಿ ಪ್ರಕಟವಾಗುತ್ತಲೇ ಪ್ರತಾಪ್‌ ಕುರಿತಂತೆ ರಾಜ್ಯದ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಾಪ್‌ ಬಗ್ಗೆ ನಿತ್ಯವೂ ಚರ್ಚೆಗಳಾಗುತ್ತಿವೆ. 

ಹೀಗಿರುವಾಗಲೇ, ಗುರುವಾರ ಬೆಳ್ಳಂಬೆಳಿಗ್ಗೆಯೇ #DronePrathap ಎಂಬ ಹ್ಯಾಶ್‌ಟ್ಯಾಗ್‌ ದಿಢೀರ್‌ ಟ್ವಿಟರ್‌ ಟ್ರೆಂಡ್‌ ಆಯಿತು. ಕೆಲವೇ ನಿಮಿಷಗಳಲ್ಲಿ (ಬೆ.7.30ರ ವರೆಗೆ) 1700ಕ್ಕೂ ಹೆಚ್ಚು ಟ್ವೀಟ್‌ಗಳು ಹೊರ ಬಂದವು. ಪ್ರತಾಪ್‌ ಕುರಿತ ಈ ಚರ್ಚೆಯಲ್ಲಿ ವ್ಯಂಗ್ಯವೇ ಹೆಚ್ಚು ಆವರಿಸಿತ್ತು ಎಂಬುದು ವಿಶೇಷ. ಈ ವ್ಯಂಗ್ಯದಲ್ಲಿ ಮೀಮ್‌ಗಳೂ ಇದ್ದವು.

#DronePrathap ಹ್ಯಾಶ್‌ಟ್ಯಾಗ್‌ನಲ್ಲಿ ಕಂಡ ಚರ್ಚೆಗಳಿವು

‘ಡ್ರೋನ್‌ ಪ್ರತಾಪ್‌ನನ್ನು ಅವನ 360 ಕೆ.ಜಿ ಲೆಗೇಜ್‌, 87 ದೇಶಗಳ ಪ್ರವಾಸದ ಬಗ್ಗೆ ಕೇಳುವುದನ್ನು ನಿಲ್ಲಿಸಿ. ಆತನ ಬಳಿ ಭೌತಶಾಸ್ತ್ರದ ಬಗ್ಗೆ ಕೇಳಿ, ಪೈಥಾನ್‌ ಬಗ್ಗೆ ಕೇಳಿ, ಆರ್ಡುನೊ ಪ್ರೋಗ್ರಾಮಿಂಗ್‌ ಬಗ್ಗೆ ಕೇಳಿ. ಆರ್ಡುನೊ ಸಾಫ್ಟ್‌ವೇರ್ ಅನ್ನು ಯಾವ ಭಾಷೆಯಲ್ಲಿ ಬರೆಯಲಾಗಿದೆ ಎಂದು ಅತನನ್ನು ಕೇಳಿ?’ ಎಂದು ಸೋನಿಕಾ ಎಂಬವರು ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದರು.

ಮತ್ತೊಂದು ಟ್ವೀಟ್‌ ಮಾಡಿರುವ ಸೋನಿಕಾ, ‘ಡ್ರೋನ್‌ ಪ್ರತಾಪ್‌ ಎರಡು ವರ್ಷಗಳಲ್ಲಿ 70,000 ಸಂಶೋಧನಾ ಪ್ರಬಂಧಗಳನ್ನು ಓದಿರುವುದಾಗಿ ತಿಳಿಸಿದ್ದಾರೆ. ಸರಳ ಗಣಿತದ ಮೂಲಕ ಇದನ್ನು ವಿವರಿಸುತ್ತೇನೆ. 70,000 ÷ 730 = 95. ಅಂದರೆ ದಿನಕ್ಕೆ 95 ಪ್ರಬಂಧ. ಪಿಎಚ್‌.ಡಿ ವಿದ್ಯಾರ್ಥಿಗಳೇ ಅವರ ಇಡೀ ಸಂಶೋಧನೆಯಲ್ಲಿ 95 ಪ್ರಬಂಧಗಳನ್ನು ಓದಲಾರರು. ಆದರೆ, ಪ್ರತಾಪ್‌ ದಿನವೊಂದಕ್ಕೆ 95ರಂತೆ ನಿರಂತರ ಎರಡು ವರ್ಷಗಳ ಕಾಲ 70,000ಓದಿದ್ದಾರೆ,’ ಎಂದು ಸೋನಿಕಾ ವ್ಯಂಗ್ಯ ಮಾಡಿದ್ದಾರೆ.

‘ಸುದ್ದಿ ವಾಹಿನಿಗಳು ಹಿಂದೊಮ್ಮೆ ಡ್ರೋನ್‌ ಪ್ರತಾಪ್‌ ಹೇಳಿದ್ದನ್ನು ಪರಿಶೀಲನೆ ಮಾಡದೆಯೇ ಏಕಾಏಕಿ ಹೀರೋ ಮಾಡಿದವು. ಆದರೆ, ಆತನಿಗೆ ಸರಳವಾದ ತಾಂತ್ರಿಕ ಪ್ರಶ್ನೆಗಳಿಗೂ ಉತ್ತರ ಗೊತ್ತಿಲ್ಲ. ಸುದ್ದಿ ವಾಹಿನಿಗಳು ಮತ್ತು ಅವುಗಳ ಸುದ್ದಿಗಳ ವಿಶ್ವಾಸಾರ್ಹತೆ ಬಗ್ಗೆ ಇತ್ತೀಚಿನ ದಿನಗಳಲ್ಲಿ ...,’ ಹೀಗೆಂದು ಸುಶ್ಮಾ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

‘ವಿಜ್ಞಾನ ಸಮಾವೇಶಗಳ ಮಿಂಚಂಚೆಯನ್ನು ಡ್ರೋನ್‌ ಪ್ರತಾಪ್‌ ತನಗೆ ಸಿಕ್ಕ ಪ್ರಶಸ್ತಿ ಎಂದು ಪರಿಗಣಿಸುವುದಾದರೆ, ನಾನು ನನ್ನ ಅತಿ ಚಿಕ್ಕ ವಯಸ್ಸಿಗೇ ಇಲ್ಲಿಯ ವರೆಗೆ ಜಗತ್ತಿನ ಹಲವು ರಾಷ್ಟ್ರಗಳ ಗ್ರಾಹಕರಿಂದ ಶಹಬಾಸ್‌ಗಿರಿ ಪಡೆದುಕೊಂಡಿದ್ದೇನೆ,’ ಎಂದು ಅಕ್ಷಯ್‌ ಭಟ್‌ ಎಂಬ ಇಂಜಿನಿಯರ್‌ ಒಬ್ಬರು ಟ್ವೀಟ್‌ ಮಾಡಿದ್ದಾರೆ.

‘ಆತ ಹೇಳುತ್ತಿರುವುದು ಸತ್ಯವೋ ಸುಳ್ಳೋ ಎಂಬುದನ್ನು ತಿಳಿಯಲು ನನಗೆ ಆಸಕ್ತಿ ಇಲ್ಲ. ಆದರೆ, ಆತನ ಆತ್ಮವಿಶ್ವಾಸದ ಮಟ್ಟ ನೋಡಿ. ಆತ ಎಷ್ಟು ಕಲಾತ್ಮಕವಾಗಿ ಮಾತನಾಡಬಲ್ಲ. ಅದೂ, ಮಾಧ್ಯಮಗಳ ಲೈವ್‌ನಲ್ಲಿ. ಒಂದು ವೇಳೆ ನೀವೇನಾದರೂ ಮೂರು ವರ್ಷದ ಮಗುವಿನ ಮುಂದೆ ನನ್ನನ್ನೇನಾದರೂ ಕೇಳಿದರೆ ನಾನು ಪ್ರತಾಪ್‌ನ ಹಂತಕ್ಕೆ ಆತ್ಮವಿಶ್ವಾಸದಿಂದ ಉತ್ತರಿಸಲಾರೆ,’ ಎಂದು ಶೀತಲ್‌ ಜೈನ್‌ ಎಂಬ ಬರಹಗಾರ್ತಿಯೊಬ್ಬರು ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು