ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರನ್ನು ದೂರೀಕರಿಸುವ ಭಾವ ಸರಿಯಲ್ಲ: ತಹಶೀಲ್ದಾರ್ ಎಂ.ಮಂಜುಳಾ

ಗೆದ್ದು ಬಂದವರು
Last Updated 27 ಜುಲೈ 2020, 9:55 IST
ಅಕ್ಷರ ಗಾತ್ರ

ಕೋವಿಡ್‌ ಪೀಡಿತರನ್ನು ದೂರೀಕರಿಸುವ ಮನೋಭಾವವನ್ನು ಯಾರೊಬ್ಬರೂ ತೋರಬಾರದು ಎನ್ನುವುದು ಕೆ.ಆರ್.ನಗರ ತಹಶೀಲ್ದಾರ್ ಎಂ.ಮಂಜುಳಾ ಅವರ ಮಾತು. ಕೊರೊನಾ ಗೆದ್ದಿರುವ ಅಧಿಕಾರಿಯ ಮನದು ಮಾತು ಇಲ್ಲಿದೆ...

---

ಕೊರೊನಾ ವೈರಸ್ ಸೋಂಕು ಹರಡುವಿಕೆಯ ಸರಪಳಿ ತುಂಡರಿಸಲು ಕನಿಷ್ಠ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯವಾದುದು.

ಕೋವಿಡ್‌ನಿಂದ ಗುಣಮುಖರಾಗಲು ಜೀವನಶೈಲಿಯ ಬದಲಾವಣೆಯೂ ಪರಿಣಾಮಕಾರಿಯಾದುದು. ಇನ್ನಷ್ಟು ದಿನ ಕೊರೊನಾ ವೈರಸ್‌ ಸೋಂಕಿನ ಕಾಟ ಜನರಿಗೆ ತಪ್ಪದು. ನಿಮ್ಮ ಕೆಲಸದ ವಾತಾವರಣ, ಮನೆಯ ವಾತಾವರಣದಲ್ಲೇ ಇರುವ ಮೂಲಕ ಸುರಕ್ಷಿತವಾಗಿರಿ. ಅನಗತ್ಯವಾಗಿ ಜನದಟ್ಟಣೆಯ ಪ್ರದೇಶದಲ್ಲಿ ಸಂಚರಿಸಬೇಡಿ.

ಕನಿಷ್ಠ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಆಗಾಗ್ಗೆ ನಿಯಮಿತವಾಗಿ ಕೈ ತೊಳೆಯುವುದು, ಶುಚಿತ್ವ ಕಾಪಾಡಿಕೊಳ್ಳುವುದು ನಿತ್ಯದ ಜಪ ಮಂತ್ರವಾಗಿರಲಿ. ಇವಿಷ್ಟನ್ನು ತಪ್ಪದೇ ಪಾಲಿಸಿದರೆ ಸೋಂಕಿನಿಂದ ಸುಲಲಿತವಾಗಿ ಪಾರಾಗಬಹುದು.

ಐದು ತಿಂಗಳಿನಿಂದಲೂ ಕೊರೊನಾ ವಾರಿಯರ್ ಆಗಿ, ಕೆ.ಆರ್.ನಗರ ತಾಲ್ಲೂಕು ಕೋವಿಡ್ ನಿಯಂತ್ರಣ ಟಾಸ್ಕ್‌ಫೋರ್ಸ್‌ ಸಮಿತಿಯ ಮುಖ್ಯಸ್ಥೆಯಾಗಿದ್ದ ನಾನು, ಯಾವ ರೀತಿ ಸೋಂಕಿತಳಾದೆ ಎಂಬುದೇ ಗೊತ್ತಿಲ್ಲ. ಸೋಂಕು ತಗುಲಿದ ಮೂಲವೂ ತಿಳಿಯಲಿಲ್ಲ.

ಆಯಾಸ ಹೆಚ್ಚಿತ್ತು. ಇದರ ಬೆನ್ನಿಗೆ ತಲೆನೋವು ಕಾಡುತ್ತಿತ್ತು. ತಕ್ಷಣವೇ ಜನರನ್ನು ಭೇಟಿಯಾಗುವುದನ್ನು ನಿಲ್ಲಿಸಿದೆ. ತಾಲ್ಲೂಕು ಆರೋಗ್ಯಾಧಿಕಾರಿ ಜೊತೆ ಸಮಾಲೋಚಿಸಿದೆ. ಎರಡ್ಮೂರು ದಿನ ವಿಶ್ರಾಂತಿ ಪಡೆದೆ. ಈ ಅವಧಿಯಲ್ಲಿ ಟಾಸ್ಕ್‌ಫೋರ್ಸ್‌ನ ಮುಖ್ಯಸ್ಥೆಯಾಗಿ ನಾನೇ ಪರೀಕ್ಷೆಗೊಳಪಡದಿದ್ದರೇ ಹೇಗೆ ? ಎಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡೆ.

ಮೂರು ದಿನದಲ್ಲಿ ಪರೀಕ್ಷಾ ವರದಿ ಬಂತು. ವೈರಸ್‌ನ ಸೌಮ್ಯ ಲಕ್ಷಣ ನನ್ನಲ್ಲಿದ್ದವು. ಈ ವೇಳೆಗೆ ಚಿಕಿತ್ಸಾ ಮಾರ್ಗಸೂಚಿಯೂ ಬದಲಾಗಿತ್ತು. ಅದರಂತೆ 14 ದಿನ ಮನೆಯಲ್ಲೇ ಕ್ವಾರಂಟೈನ್ ಆದೆ. ಆರೋಗ್ಯ ಇಲಾಖೆ ಸೂಚಿಸಿದ ಎಚ್‌ಸಿಕ್ಯು ಮಾತ್ರೆಯನ್ನಷ್ಟೇ ನುಂಗಿದೆ. ಉಳಿದ ಮಾತ್ರೆಗಳನ್ನು ನುಂಗದೆ, ಆಹಾರದ ಮೂಲಕವೇ ವಿಟಮಿನ್ ಅಂಶವನ್ನು ದೇಹಕ್ಕೆ ತೆಗೆದುಕೊಳ್ಳಲು ಶುರು ಮಾಡಿದೆ.

ಕೆಲಸದ ಒತ್ತಡದಿಂದ ನನ್ನ ದೇಹ ದುರ್ಬಲವಾಗಿತ್ತು. ಕ್ವಾರಂಟೈನ್ ಅವಧಿಯಲ್ಲಿ ಜೀವನಶೈಲಿ ಬದಲಿಸಿಕೊಂಡೆ. ಪೌಷ್ಟಿಕ ಆಹಾರ ಸೇವಿಸಿದೆ. ನಿತ್ಯವೂ ಮಾಡುತ್ತಿದ್ದ ದೈಹಿಕ ಕಸರತ್ತಿನ ಅವಧಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆಯುರ್ವೇದ ಪದ್ಧತಿ ಅನುಸರಿಸಿದೆ. ಕಷಾಯ ಕುಡಿದೆ. ದಿನದಿಂದ ದಿನಕ್ಕೆ ಚೇತರಿಸಿಕೊಂಡು, ಸಂಪೂರ್ಣ ಗುಣಮುಖಳಾದೆ.

ಕೊರೊನಾ ವಾರಿಯರ್‌ ಆದ ನಾನು, ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೆ. ಪಾಸಿಟಿವ್ ಎಂದೊಡನೆ ನನ್ನಲ್ಲೂ ಸಣ್ಣ ಅಳುಕು ಕಾಣಿಸಿಕೊಂಡಿತು. ತಕ್ಷಣವೇ ಎಚ್ಚೆತ್ತೆ. ಜನರಿಗೆ ಹೇಳಿದ್ದನ್ನೇ ನಾನು ಪಾಲಿಸಿದೆ. ಮಾನಸಿಕವಾಗಿ ಕುಗ್ಗದೇ ಧೈರ್ಯ ತುಂಬಿಕೊಂಡೆ. ಅಧೈರ್ಯವೇ ರೋಗಕಾರಕ. ಇದನ್ನು ನನ್ನ ಹತ್ತಿರ ಸುಳಿಯಲು ಅವಕಾಶ ಕೊಡಲಿಲ್ಲ. ನಿಗದಿತ ಅವಧಿಯೊಳಗೆ ಗುಣಮುಖಳಾಗಿ, ಎಂದಿನಂತೆ ಕೆಲಸ ಮಾಡುತ್ತಿರುವೆ.

ನಿರೂಪಣೆ: ಡಿ.ಬಿ.ನಾಗರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT