ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ಹಳ್ಳಿಮಟ್ಟದಿಂದ ಹೋರಾಟ: ಸಿದ್ದರಾಮಯ್ಯ

ಕಾಯ್ದೆ ತಿದ್ದುಪಡಿಗೆ ರೈತ ಸಂಘಟನೆಗಳ ನಾಯಕರ ವಿರೋಧ * ಸಿದ್ದರಾಮಯ್ಯ ಜೊತೆ ಸಭೆ
Last Updated 22 ಜುಲೈ 2020, 11:44 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ಬಿಜೆಪಿ ಸರ್ಕಾರ ತಂದಿರುವ ತಿದ್ದುಪಡಿಗೆ ರೈತ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಳ್ಳಿಮಟ್ಟದಿಂದಲೇ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಪಕ್ಷದ ವತಿಯಿಂದ ಗ್ರಾಮೀಣ ಮಟ್ಟದಲ್ಲಿ ನಾವೂ ಹೋರಾಟ ಮಾಡುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ರೈತ ಸಂಘಟನೆಗಳ ಮುಖಂಡರ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಕಾಯ್ದೆ ತಿದ್ದುಪಡಿ ಮೂಲಕ ಸರ್ಕಾರ, ರೈತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಈ ತಿದ್ದುಪಡಿಯಿಂದ ರೈತರು ಬೀದಿಪಾಲು ಆಗಲಿದ್ದಾರೆ. ಈ ವಿಚಾರವಾಗಿ ರೈತ ಸಂಘಟನೆಗಳ ಮುಖಂಡರ ಜೊತೆ ಚರ್ಚೆ ನಡೆಸಿದ್ದೇನೆ’ ಎಂದರು.

ರೈತ ಸಂಘಟನೆಗಳ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜಪ್ಪ, ವೀರಸಂಗಯ್ಯ, ಚಾಮರಸಮಾಲಿಪಾಟೀಲ, ಬಡಿಗೇಪುರ ನಾಗೇಂದ್ರ ಮತ್ತಿತರರು ಸಭೆಯಲ್ಲಿ ಇದ್ದರು.

‘ರಾಜ್ಯ ಬಿಜೆಪಿ ಸರ್ಕಾರ ತಂದಿರುವ ತಿದ್ದುಪಡಿ ರೈತ ವಿರೋಧಿ. ರೈತರು, ಕೃಷಿ ಕಾರ್ಮಿಕರಿಗೆ ಮರಣಶಾಸನ. ಕೂಡಲೇ ತಿದ್ದುಪಡಿ ವಾಪಸ್ ಪಡೆಯಬೇಕು. ಈ ತಿದ್ದುಪಡಿ ರೈತರ ಭೂಮಿಯನ್ನು ಕೊಳ್ಳಲು ಶ್ರೀಮಂತರಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ರೈತರು, ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಲಿವೆ. ಉಳ್ಳವರೇ ಭೂಮಿ ಒಡೆಯರಾಗುತ್ತಾರೆ. ನಮ್ಮ‌ ಹೋರಾಟಕ್ಕೆ ನಿಮ್ಮ ಬೆಂಬಲ ನೀಡಬೇಕು’ ಎಂದು ರೈತ ಮುಖಂಡರು ಸಿದ್ದರಾಮಯ್ಯ ಬಳಿ ಮನವಿ ಮಾಡಿದರು.

‘ಕಾಯ್ದೆ ತಿದ್ದುಪಡಿಯಿಂದ ರೈತರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಉಳ್ಳವರ ಒತ್ತಡಕ್ಕೆ ಸರ್ಕಾರ‌ ಮಣಿದಿದೆ’ ಎಂದು ಸಿದ್ದರಾಮಯ್ಯ ದೂರಿದರು.

ಅಶೋಕ ವಿರುದ್ಧ ವಾಗ್ದಾಳಿ: ಸಚಿವ ಆರ್. ಅಶೋಕ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ‘ಅಶೋಕ ರಾಜಕಾರಣಕ್ಕೆ ಬಂದಿದ್ದು ಯಾವಾಗ? ಭೂ ಸುಧಾರಣಾ ಕಾಯ್ದೆ ಬಗ್ಗೆ ಅವರಿಗೆ ಏನು‌ ಗೊತ್ತಿದೆ. ಹೊಲ ಉತ್ತಿದ್ದಾರಾ ಇಲ್ವಾ ಗೊತ್ತಿಲ್ಲ. ಮೇಟಿ ಹಾಲು ಕುಡಿಸ್ತೀವಿ ಅಂತ ನಮ್ಮ ಕಡೆ ಗಾದೆಯಿದೆ. ಹಾಗೆ ಮಾಡಿದರೆ ಕೈಯಲ್ಲಿ ಬೊಬ್ಬೆ ಬರುತ್ತದೆ. ಅದು ಅಶೋಕ ಅವರಿಗೆ ಗೊತ್ತಿದೆಯೇ. ನನಗೆ ನೇಗಿಲು, ಕುಂಟೆ ಕಟ್ಟೋದು, ಭೂಮಿ ಮಟ್ಟ ಮಾಡುವುದು ಗೊತ್ತು. ಅಶೋಕಗೆ ಇದರ ಬಗ್ಗೆ ಗೊತ್ತಿದೆಯೇ’ ಎಂದು ಪ್ರಶ್ನಿಸಿದರು.

‘ಸುಮ್ಮನೆ ಕಂದಾಯ ಸಚಿವರಾದರೆ ಎಲ್ಲವೂ ಗೊತ್ತಾಗುವುದಿಲ್ಲ. ಕಂದಾಯ ಸಚಿವ ಆಗಿರುವುದರಿಂದ ಎಲ್ಲವನ್ನೂ ತಿಳಿದುಕೊಳ್ಳಬೇಕು. ರೈತರು, ಜಮೀನಿನ ಬಗ್ಗೆ ತಿಳಿದುಕೊಳ್ಳಬೇಕು. ಅವರು ತಿಳಿದುಕೊಂಡಿದ್ದಾರೊ ಇಲ್ಲವೊ ಗೊತ್ತಿಲ್ಲ’ ಎಂದರು.

ಗುರುವಾರ ಎಲ್ಲವೂ ಬಹಿರಂಗ: ‘ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಸಚಿವ ಬಿ. ಶ್ರೀರಾಮುಲು ಸುಳ್ಳು ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ಲೆಕ್ಕ ಕೇಳುವ ಕಾಂಗ್ರೆಸ್‌ನವರಿಗೆ ಕೆಲಸ ಇಲ್ಲ ಎಂಬ ಸಚಿವ ಡಾ. ಕೆ. ಸುಧಾಕರ್ ಹೇಳಿಕೆಗೆ, ‘ಪ್ರಜಾಪ್ರಭುತ್ವದಲ್ಲಿ ಲೆಕ್ಕ ಯಾರಿಗೆ ಕೊಡಬೇಕು. ಜನಪ್ರತಿನಿಧಿಗಳಿಗೆ, ಜನರಿಗೆ ಉತ್ತರ ಕೊಡಬೇಕು. ಸುಧಾಕರ್ ಏನಾದರು ಮಾತಾಡಲಿ. ಆದರೆ, ಸರ್ಕಾರ ಉತ್ತರದಾಯಿತ್ವ ಅಲ್ಲವೇ. ನಾನು ವಿರೋಧ ಪಕ್ಷ ನಾಯಕನಾಗಿ ಸರ್ಕಾರಕ್ಕೆ ಲೆಕ್ಕ ಕೊಡಿ ಅಂತ ಕೇಳಿದ್ದೇನೆ. ಮೂರು ಬಾರಿ ಪತ್ರ ಬರೆದಿದ್ದೀನಿ. ಉತ್ತರ ಕೊಟ್ಟಿದ್ದಾರಾ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಕೂಡಾ ಸುಳ್ಳೇ ಹೇಳಿರುವುದು. ದುಡ್ಡು ಹೊಡೆಯುವುದರಲ್ಲಿ ನಮ್ಮ ಸಹಕಾರ ಇಲ್ಲ. ಜನರ ಜೀವ ಉಳಿಸಲು ಸಹಕಾರ ಇದೆ’ ಎಂದರು.

‘ಸರ್ಕಾರ ಬೀಳುವುದಕ್ಕೆ ಸಿದ್ದೌಷಧ ಕಾರಣ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅದೆಲ್ಲ ಮುಗಿದು ಹೋದ ಕಥೆ. ಅವರು ಯಾಕೆ ಈಗ ಮತ್ತೆ ಹೇಳುತ್ತಿದ್ದಾರೊ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಹೋಗಿರುವುದು ಗೊತ್ತಿದೆ. ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುತ್ತಿದೆ. ಈಗ ಯಾಕೆ ಸಮ್ಮಿಶ್ರ ಸರ್ಕಾರದ ಬಗ್ಗೆ ಚರ್ಚೆ. ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವುದು ಬಿಟ್ಟು, ಕುಮಾರಸ್ವಾಮಿ ಬಗ್ಗೆ ನಾನು ಯಾಕೆ ಮಾತಾಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT